Homeರಾಜಕೀಯಜನಾರ್ದನರೆಡ್ಡಿಗೆ ಸಚಿವ ಶಿವರಾಜ ತಂಗಡಗಿ 'ರಾಜೀನಾಮೆ ಚಾಲೆಂಜ್'

ಜನಾರ್ದನರೆಡ್ಡಿಗೆ ಸಚಿವ ಶಿವರಾಜ ತಂಗಡಗಿ ‘ರಾಜೀನಾಮೆ ಚಾಲೆಂಜ್’

ಬೆಂಗಳೂರು, ಸೆ.9- ಮಾಜಿ ಸಚಿವ ಜನಾರ್ದನ ರೆಡ್ಡಿ ಅವರ ಆರೋಪಗಳಿಗೆ ತಿರುಗೇಟು ನೀಡಿರುವ ಸಚಿವ ಶಿವರಾಜ ತಂಗಡಗಿ, “ನನ್ನ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿ, ಸವಾಲಾಗಿ ನಾಳೆಯೇ ರಾಜೀನಾಮೆ ನೀಡಿ. ನಿಮ್ಮ ಬೆನ್ನಲ್ಲೇ ನಾನೂ ರಾಜೀನಾಮೆ ನೀಡುತ್ತೇನೆ. ಮುಂದಿನದ್ದು ಉಪಚುನಾವಣಾ ಕಣದಲ್ಲೇ ಚರ್ಚೆಯಾಗಲಿ” ಎಂದು ಪಂಥಾಹ್ವಾನ ನೀಡಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಜನಾರ್ದನ ರೆಡ್ಡಿ ಅವರನ್ನು ಏಕವಚನದಲ್ಲಿ ಸಂಬೋಧಿಸಿ ವಾಗ್ದಾಳಿ ನಡೆಸಿರುವ ಅವರು, “ಅಣ್ತಮ್ಮ ಜನಾರ್ದನ ರೆಡ್ಡಿ, ಮತ್ತದೇ ಪೊಳ್ಳು ನುಡಿಗಳ ಮೊರೆ ಹೋಗಿದ್ದೀಯ. ನಾನು ನನ್ನ ಸ್ವಂತ ಆಸ್ತಿ ಮಾರಿಕೊಂಡು ಚುನಾವಣೆ ಎದುರಿಸಿದವನು. ಚುನಾವಣೆಗಾಗಿ ಯಾರ ಮುಂದೆಯೂ ಕೈಚಾಚಿದವನಲ್ಲ. ಅದು ನಿನಗೂ ಚೆನ್ನಾಗಿ ಗೊತ್ತಿದೆ” ಎಂದು ಹೇಳಿದ್ದಾರೆ.

“ಎರಡು ದಿನ ಹುಡುಕಾಡಿ, ತಡಕಾಡಿ ಒಂದು ವಿಡಿಯೋ ಹಾಕಿದ್ದೀಯ. ಸರಿ. ಆದರೆ ನಾನು ಮಾತನಾಡಿರುವ ಮಾತಿಗೂ, ನೀನು ಹೇಳಿರುವುದಕ್ಕೂ ಸಾಸಿವೆ ಕಾಳಿನಷ್ಟಾದರೂ ಸಂಬಂಧವಿದೆಯೇ? ನನ್ನ ಯಾವ ಮಾತನ್ನು ಎಲ್ಲಿಗೆ ಜೋಡಿಸಿ ರಾಜಕೀಯ ಮೈಲೇಜ್ ಪಡೆಯಲು ಯತ್ನಿಸುತ್ತಿದ್ದೀಯ?” ಎಂದು ಪ್ರಶ್ನಿಸಿದ್ದಾರೆ.

“ನಾನು ನಿನ್ನ ಗಣಿ ಹಣದಿಂದ ಗೆದ್ದಿದ್ದೇನೆ, ನಿನ್ನ ಆಶೀರ್ವಾದದಿಂದ ಗೆದ್ದಿದ್ದೇನೆ ಎಂದು ಬೊಗಳೆ ಬಿಡುತ್ತಿದ್ದೀಯ. ಚುನಾವಣೆ ಸಂದರ್ಭದಲ್ಲಿ ನಾನು ಎಷ್ಟು ಆಸ್ತಿ ಮಾರಾಟ ಮಾಡಿ ಚುನಾವಣೆಯನ್ನು ಎದುರಿಸಿದ್ದೇನೆ ಎಂಬುದು ನಿನಗೆ ಗೊತ್ತಿಲ್ಲವೇ?” ಎಂದು ತಂಗಡಗಿ ಪ್ರಶ್ನಿಸಿದ್ದಾರೆ.

ಆಸ್ತಿ ನಗದೀಕರಣಕ್ಕೆ ನೆರವು

“ನಿನ್ನ ಆಪ್ತ ಸಹಾಯಕನ ಮೂಲಕ ನನ್ನ ಆಸ್ತಿ ನಗದೀಕರಣ ಮಾಡಿಸಿದೆ. ನನ್ನ ಆಸ್ತಿ ನಗದೀಕರಣಕ್ಕೆ ಮಧ್ಯವರ್ತಿಯಾಗಿ ನೆರವಾಗಿದ್ದೆ ಎಂಬುದನ್ನು ಬಿಟ್ಟರೆ ಬೇರೇನಿದೆ? ಸಾಸಿವೆ ಕಾಳಿನಷ್ಟು ಸಹಾಯವನ್ನೂ ಬೆಟ್ಟದಂತೆ ನೆನೆಯುವವನು ನಾನು. ಹೀಗಾಗಿಯೇ ತುರ್ತು ಸಂದರ್ಭದಲ್ಲಿ ನನ್ನ ಆಸ್ತಿ ನಗದೀಕರಣಕ್ಕೆ ನೆರವಾದ ನಿನಗೆ ತುಂಬು ಸಭೆಯಲ್ಲಿ ಮನಬಿಚ್ಚಿ ಧನ್ಯವಾದ ತಿಳಿಸಿದ್ದೇನೆ. ಆದರೆ ಅದನ್ನೇ ಬೇರೆ ರೀತಿಯಲ್ಲಿ ಬಿಂಬಿಸಿ ಪೋಸು ಕೊಡುತ್ತಿದ್ದೀಯ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ನನ್ನ ಅಡ್ಡ ಇಟ್ಟುಕೊಂಡು ನೀನು ಮಂತ್ರಿಯಾದೆ”

“ಪಕ್ಷೇತರ ಶಾಸಕನಾಗಿದ್ದ ನಾನು ನೀನು ಹೇಳಿದ ಪಕ್ಷಕ್ಕೆ ಬೇಷರತ್ ಬೆಂಬಲ ನೀಡಿದೆ. ನನ್ನ ಅಡ್ಡ ಇಟ್ಟುಕೊಂಡು ನೀನು ಮಂತ್ರಿಯಾದೆ. ನಿನ್ನ ಸಹೋದರ, ಸ್ನೇಹಿತ ಎಲ್ಲರೂ ಅಧಿಕಾರದ ಪಡಸಾಲೆಗೆ ಬಂದಿರಿ” ಎಂದು ಆರೋಪಿಸಿದ್ದಾರೆ.

“ಹಳೆಯ ವಿಚಾರ ಕೆದಕಿದ್ದೀಯಲ್ಲಪ್ಪ. ನೀನೇ ನಿನ್ನ ಬಾಯಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ನಾನು ಕಾರಣನಲ್ಲ. ಭೋವಿ ಸಮಾಜದ ಶಿವರಾಜ ತಂಗಡಗಿ, ಗೂಳಿಹಟ್ಟಿ ಶೇಖರ್, ವೆಂಕಟರಮಣಪ್ಪ ಕಾರಣ ಎಂದು ಹೇಳಿದ್ದೀಯಲ್ಲ. ಅದು ಮರೆತುಹೋಯಿತೇ ಅಥವಾ ಮರೆತಂತೆ ನಾಟಕವೇ?” ಎಂದು ಲೇವಡಿ ಮಾಡಿದ್ದಾರೆ.

ರಾಜ್ಯಸಭೆ ಚುನಾವಣೆ ವಿಚಾರ ಪ್ರಸ್ತಾಪ

“ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ನೀನು ಎಷ್ಟು ಬಾರಿ ನನ್ನನ್ನು ಸಂಪರ್ಕಿಸಿದ್ದೆ? ನಮ್ಮ ಅಭ್ಯರ್ಥಿಗೆ ಬೆಂಬಲ ನೀಡುತ್ತೇನೆ ಎಂದು ಎಷ್ಟು ಬಾರಿ ಗೋಗರೆದಿದ್ದೆ? ಎಲ್ಲಿ, ಯಾವ ರೀತಿ ಸಹಾಯ ಪಡೆದೆ ಎಂಬುದನ್ನು ಹೇಳಿಬಿಡು. ನಿನಗೆ ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ನೆನಪಾಗಲಿಲ್ಲವೇ?” ಎಂದು ಪ್ರಶ್ನಿಸಿದ್ದಾರೆ.

“ನಿನ್ನ ಕ್ಷೇತ್ರಕ್ಕೆ ಹರಿದು ಬಂದ ಅನುದಾನ ಸುಮ್ಮನೆ ಬಂತೇ? ಅನುದಾನಕ್ಕಾಗಿ ಅಂಗಲಾಚಿದ್ದೆಯಲ್ಲ. ನಿನ್ನ ಕ್ಷೇತ್ರಕ್ಕೆ ಬಂದ ಅನುದಾನದಲ್ಲಿ ನನ್ನ ಕೊಡುಗೆ ಇಲ್ಲವೇ? ನೀನು ನನ್ನ ಋಣದಲ್ಲಿದ್ದೀಯೇ ಹೊರತು ನಾನು ಅಲ್ಲ” ಎಂದು ತಿರುಗೇಟು ನೀಡಿದ್ದಾರೆ. “ಉಪಕಾರ ಸ್ಮರಣೆ ಇಲ್ಲದ ಕೃತಘ್ನ ನೀನು. ರಾಜಕೀಯದಲ್ಲಿ ಕಾಲಕ್ಕೆ ತಕ್ಕಂತೆ ಮಾತು ಬದಲಾಯಿಸುವ ಊಸರವಳ್ಳಿ. ನೀನು ಎಷ್ಟೇ ಸುಳ್ಳು ಹೇಳಿದರೂ ಜನರಿಗೆ ಸತ್ಯ ತಿಳಿದಿದೆ” ಎಂದು ಸರಣಿ ವಾಗ್ದಾಳಿ ನಡೆಸಿದ್ದಾರೆ.

“ಮೊದಲು ಸಹಾಯ ಮಾಡಿದವರನ್ನು ನೆನೆಯುವುದು ಕಲಿ”

“ಮೊದಲು ಸಹಾಯ ಮಾಡಿದವರನ್ನು ನೆನೆಯುವುದು ಕಲಿ. ನಿನ್ನನ್ನು ಸಚಿವನಾಗಿ ಮೆರೆಸಿದ ಯಡಿಯೂರಪ್ಪ ಅವರಿಗೆ ಬೆನ್ನಿಗೆ ಚೂರಿ ಹಾಕಿದವನು ನೀನು. ಬಿಜೆಪಿಯನ್ನೇ ಮುಗಿಸಲು ಹೊರಟವನು” ಎಂದು ಆರೋಪಿಸಿದ್ದಾರೆ.”ಕನಕಗಿರಿಯಲ್ಲಿ ನನ್ನ ವಿರುದ್ಧ ನಿಂತಿದ್ದ ಬಿಜೆಪಿ ಅಭ್ಯರ್ಥಿಯನ್ನು ಬಿಟ್ಟು ನನಗೆ ಆರ್ಥಿಕ ನೆರವು ನೀಡಿದ್ದೆ ಎಂದು ಬುರುಡೆ ಬಿಡುತ್ತಿದ್ದೀಯ. ಹಾಗಾದರೆ ಸ್ವಂತ ಪಕ್ಷವನ್ನು ಮುಗಿಸುವ ಖಯಾಲಿ ಅಂದಿನಿಂದಲೇ ಇತ್ತು ಎಂಬುದನ್ನು ಒಪ್ಪಿಕೊಳ್ಳುತ್ತಿದ್ದೀಯಾ?” ಎಂದು ಪ್ರಶ್ನಿಸಿದ್ದಾರೆ.

“ಒಂದು ಸುಳ್ಳು ಹೇಳಿದರೆ ಅದನ್ನು ಮುಚ್ಚಿಕೊಳ್ಳಲು ನೂರು ಸುಳ್ಳು ಹೇಳಬೇಕಾಗುತ್ತದೆ. ನಿನಗೆ ಮಾನ-ಮರ್ಯಾದೆ ಇದ್ದರೆ ಜೈಲಿಗೆ ಯಾಕೆ ಹೋದೆ? ಬಿಜೆಪಿ ವಿರುದ್ಧ ಪಕ್ಷ ಯಾಕೆ ಕಟ್ಟಿದೆ? ಶ್ರೀರಾಮುಲು ಅವರನ್ನು ಮುಗಿಸಲು ಷಡ್ಯಂತ್ರ ಯಾಕೆ ಮಾಡಿದೆ? ಸ್ವಂತ ತಮ್ಮನನ್ನೇ ಯಾಕೆ ಸೋಲಿಸಿದೆ? ಹೇಳು” ಎಂದು ಶಿವರಾಜ ತಂಗಡಗಿ ಖಾರವಾಗಿ ಪ್ರಶ್ನಿಸಿದ್ದಾರೆ.

RELATED ARTICLES
spot_img

Latest News