Homeರಾಷ್ಟ್ರೀಯಅಪಘಾತಕ್ಕೀಡಾದ ಕಾರಿನಲ್ಲಿತ್ತು 10 ಕೆಜಿ ಚಿನ್ನ.!

ಅಪಘಾತಕ್ಕೀಡಾದ ಕಾರಿನಲ್ಲಿತ್ತು 10 ಕೆಜಿ ಚಿನ್ನ.!

Kannauj Gold Seizure | 10kg Gold Found in Car After Expressway Accident

ಕನ್ನೌಜ್‌, ಆ.23- ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಅಪಘಾತಕ್ಕೀಡಾದ ಕಾರಿನಿಂದ ಪೊಲೀಸರು 10 ಕೆಜಿಗೂ ಹೆಚ್ಚು 24 ಕ್ಯಾರೆಟ್‌ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಇದರ ಮೌಲ್ಯ ಸುಮಾರು 15.39 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳದ ಪ್ರಜೆ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರಿಂದ ಮಾಹಿತಿ ಪಡೆದ ಸರಕು ಮತ್ತು ಸೇವಾ ತೆರಿಗೆ ಅಧಿಕಾರಿಗಳು, ಇದು ಅಂತರರಾಷ್ಟ್ರೀಯ ಚಿನ್ನ ಕಳ್ಳಸಾಗಣೆ ಜಾಲದ ಭಾಗವಾಗಿರುವ ಸಾಧ್ಯತೆಯ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಾರೆ.ಕನ್ನೌಜ್‌ ಪೊಲೀಸ್‌ ವರಿಷ್ಠಾಧಿಕಾರಿ ವಿನೋದ್‌ ಕುಮಾರ್‌ ಅವರ ಪ್ರಕಾರ, ತಲ್ಗ್ರಾಮ್‌ ಪೊಲೀಸ್‌ ಠಾಣೆಯ ಸಿಬ್ಬಂದಿ ಶನಿವಾರ ವಾಹನ ತಪಾಸಣೆ ಹಾಗೂ ಕಾವಡ್‌ ಕರ್ತವ್ಯ ಮುಗಿಸಿ ಹಿಂದಿರುಗುತ್ತಿದ್ದ ವೇಳೆ ಆಗ್ರಾ-ಲಖನೌ ಎಕ್ಸ್‌ಪ್ರೆಸ್‌ವೇಯಲ್ಲಿ ಕಾರೊಂದು ಪೊಲೀಸ್‌ ವಾಹನಕ್ಕೆ ಡಿಕ್ಕಿ ಹೊಡೆದಿರುವ ಮಾಹಿತಿ ದೊರೆತಿತ್ತು.

ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮಹಾರಾಜ್‌ಗಂಜ್‌ ಜಿಲ್ಲೆಯ ಸಂದೀಪ್‌ ಜೈಸ್ವಾಲ್‌ (29) ಮತ್ತು ನೇಪಾಳದ ಸರೋಜ್‌ ಪಂತ್‌ (33) ಎಂಬ ಇಬ್ಬರು ಕಾರಿನಲ್ಲಿದ್ದರು.ವಾಹನವನ್ನು ಪರಿಶೀಲಿಸಿದಾಗ ಹಳದಿ ಲೋಹದ 10 ಬಿಸ್ಕೆಟ್‌ಗಳಿದ್ದ ಚೀಲ ಪತ್ತೆಯಾಯಿತು. ಚಿನ್ನಕ್ಕೆ ಸಂಬಂಧಿಸಿದ ದಾಖಲೆಗಳು, ಬಿಲ್‌ಗಳು ಅಥವಾ ಪರವಾನಗಿ ತೋರಿಸುವಂತೆ ಇಬ್ಬರಿಗೂ ಸೂಚಿಸಿದರೂ, ಯಾವುದೇ ಮಾನ್ಯ ದಾಖಲೆಗಳನ್ನು ಅವರು ಒದಗಿಸಲು ಸಾಧ್ಯವಾಗಲಿಲ್ಲ ಎಂದು ಎಸ್‌ಪಿ ತಿಳಿಸಿದ್ದಾರೆ.

ವಶಪಡಿಸಿಕೊಂಡ ಲೋಹದ ಸ್ವರೂಪ, ಶುದ್ಧತೆ ಹಾಗೂ ಮೌಲ್ಯ ನಿರ್ಧರಿಸಲು ಭಾರತೀಯ ಸ್ಟೇಟ್‌ ಬ್ಯಾಂಕ್‌ನ ಅಧಿಕೃತ ಚಿನ್ನದ ಮೌಲ್ಯಮಾಪಕರನ್ನು ಕರೆಸಲಾಯಿತು. ಪರಿಶೀಲನೆಯಲ್ಲಿ ಅದು 24 ಕ್ಯಾರೆಟ್‌ ಚಿನ್ನವಾಗಿದ್ದು, ಒಟ್ಟು 10.026 ಕೆಜಿ ತೂಕ ಹೊಂದಿತ್ತು. ಇದರ ಮಾರುಕಟ್ಟೆ ಮೌಲ್ಯ ಸುಮಾರು 15.39 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

ಚಿನ್ನದ ಪ್ರಮಾಣ ಹಾಗೂ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ಪೊಲೀಸರು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಹೆಚ್ಚಿನ ತನಿಖೆ ನಡೆಸುವಂತೆ ಕಸ್ಟಮ್ಸ್‌ ಇಲಾಖೆಗೆ ಶಿಫಾರಸು ಮಾಡಲಾಯಿತು.ಬಳಿಕ ಕಸ್ಟಮ್ಸ್‌ ಅಧಿಕಾರಿಗಳ ತಂಡ ತಲ್ಗ್ರಾಮ್‌ ಪೊಲೀಸ್‌ ಠಾಣೆಗೆ ಆಗಮಿಸಿ ಇಬ್ಬರನ್ನು ವಿಚಾರಣೆ ನಡೆಸಿತು. ವಶಪಡಿಸಿಕೊಂಡ ಚಿನ್ನವನ್ನು ಮುಂದಿನ ಕಾನೂನು ಕ್ರಮಕ್ಕಾಗಿ ಕಸ್ಟಮ್ಸ್‌ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಎಸ್‌ಪಿ ತಿಳಿಸಿದ್ದಾರೆ.

RELATED ARTICLES
spot_img

Latest News