Homeರಾಜ್ಯಸಿಎಂ ಡಿ.ಕೆ.ಶಿವಕುಮಾರ್‌ ಮನೆಗೆ ಉದ್ಯಮಿ ಗೌತಮ್‌ ಅದಾನಿ ಭೇಟಿ

ಸಿಎಂ ಡಿ.ಕೆ.ಶಿವಕುಮಾರ್‌ ಮನೆಗೆ ಉದ್ಯಮಿ ಗೌತಮ್‌ ಅದಾನಿ ಭೇಟಿ

Gautam Adani meets Karnataka CM DK Shivakumar

ಬೆಂಗಳೂರು, ಆ.23- ಅದಾನಿ ಸಮೂಹ ಸಂಸ್ಥೆಗಳ ಅಧ್ಯಕ್ಷ ಗೌತಮ್‌ ಅದಾನಿ ಅವರು ಇಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.ರಾಜ್ಯದಲ್ಲಿನ ಉದ್ಯಮ ಅವಕಾಶಗಳು ಹಾಗೂ ಬಹುನಿರೀಕ್ಷಿತ ಬೆಂಗಳೂರು ಸುರಂಗ ರಸ್ತೆ ಯೋಜನೆಯ ಗುತ್ತಿಗೆ ಹಂಚಿಕೆಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಮಹತ್ವದ ಚರ್ಚೆ ನಡೆದಿದೆ ಎನ್ನಲಾಗಿದೆ.

ಬೆಂಗಳೂರಿನ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಹೆಬ್ಬಾಳದಿಂದ ಸಿಲ್ಕ್‌ ಬೋರ್ಡ್‌ವರೆಗೆ ಸುಮಾರು 17 ಕಿ.ಮೀ. ಉದ್ದದ ಸುರಂಗ ರಸ್ತೆ ನಿರ್ಮಿಸಲು ಸರ್ಕಾರ ಮುಂದಾಗಿದೆ. ಈ ಯೋಜನೆಗೆ ಸರ್ಕಾರ ಅಂದಾಜು 17,698 ಕೋಟಿ ರೂ. ವೆಚ್ಚ ನಿಗದಿಪಡಿಸಿದೆ.

ಆದರೆ, ಟೆಂಡರ್‌ ಪ್ರಕ್ರಿಯೆಯಲ್ಲಿ ಅದಾನಿ ಎಂಟರ್‌ಪ್ರೈಸಸ್‌ ಲಿಮಿಟೆಡ್‌ 22,267 ಕೋಟಿ ರೂ. ಮೊತ್ತವನ್ನು ನಮೂದಿಸಿ ಅತಿ ಕಡಿಮೆ ಬಿಡ್‌ ಸಲ್ಲಿಸಿದ ಸಂಸ್ಥೆಯಾಗಿ ಹೊರಹೊಮ್ಮಿದೆ ಎಂದು ತಿಳಿದುಬಂದಿದೆ. ಸರ್ಕಾರದ ಅಂದಾಜಿಗಿಂತ ಈ ಮೊತ್ತ ಸುಮಾರು 4,500 ಕೋಟಿ ರೂ.ಗೂ ಹೆಚ್ಚು ಹೆಚ್ಚಾಗಿದೆ.

ಟೆಂಡರ್‌ನಲ್ಲಿ ಭಾಗವಹಿಸಿದ್ದ ಇತರ ಸಂಸ್ಥೆಗಳ ಬಿಡ್‌ಗಳಿಗೆ ಹೋಲಿಸಿದರೆ ಅದಾನಿ ಸಂಸ್ಥೆಯ ಬಿಡ್‌ ಮೊತ್ತ ಕಡಿಮೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಟೆಂಡರ್‌ ಅಂತಿಮಗೊಳಿಸುವ ಮುನ್ನವೇ ಸುರಂಗ ಮಾರ್ಗ ನಿರ್ಮಾಣವಾಗಲಿರುವ ಸ್ಥಳಗಳಲ್ಲಿ ಅಗತ್ಯವಿರುವ ಪ್ರಾಥಮಿಕ ಭೂ ಸಮೀಕ್ಷೆ, ಮಣ್ಣಿನ ಗುಣಮಟ್ಟ ಪರೀಕ್ಷೆ ಸೇರಿದಂತೆ ಪ್ರಮುಖ ತಾಂತ್ರಿಕ ಪರೀಕ್ಷೆಗಳನ್ನು ಅದಾನಿ ಸಂಸ್ಥೆ ಪೂರ್ಣಗೊಳಿಸಿದೆ ಎನ್ನಲಾಗಿದೆ.

ಅದಾನಿ ಸಂಸ್ಥೆಯು ಗುತ್ತಿಗೆ ಪ್ರಸ್ತಾವನೆಯನ್ನು ಈಗಾಗಲೇ ಸರ್ಕಾರಕ್ಕೆ ಸಲ್ಲಿಸಿದ್ದು, ಅಧಿಕೃತವಾಗಿ ಕಾಮಗಾರಿ ವಹಿಸಿಕೊಳ್ಳುವ ಕುರಿತು ಮಾತುಕತೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.ಯೋಜನೆಯ ವೆಚ್ಚ ಹೆಚ್ಚಳಕ್ಕೆ ಸಂಬಂಧಿಸಿದಂತೆ ರಾಜ್ಯ ಸಚಿವ ಸಂಪುಟದ ಅಂತಿಮ ಅನುಮೋದನೆ ಪಡೆಯಬೇಕಿರುವ ಹಿನ್ನೆಲೆಯಲ್ಲಿ ಗೌತಮ್‌ ಅದಾನಿ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರ ಭೇಟಿಗೆ ಹೆಚ್ಚಿನ ಮಹತ್ವ ಬಂದಿದೆ. ಬೆಂಗಳೂರು ನಗರದ ಸಂಚಾರ ಸಮಸ್ಯೆ ನಿವಾರಿಸುವ ಪ್ರಮುಖ ಯೋಜನೆಗಳಲ್ಲಿ ಒಂದಾಗಿರುವ ಸುರಂಗ ರಸ್ತೆ ಯೋಜನೆಯ ಗುತ್ತಿಗೆ ಅಂತಿಮವಾಗಿ ಯಾರಿಗೆ ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

RELATED ARTICLES
spot_img

Latest News