Homeರಾಜ್ಯಮುಂದಿನ ವರ್ಷದಿಂದ ಕೆಪಿಎಸ್‌ ಶಾಲೆಗಳಿಗೆ ಸರ್ಕಾರಿ ಶಾಲಾ ವಾಹನದ ವ್ಯವಸ್ಥೆ

ಮುಂದಿನ ವರ್ಷದಿಂದ ಕೆಪಿಎಸ್‌ ಶಾಲೆಗಳಿಗೆ ಸರ್ಕಾರಿ ಶಾಲಾ ವಾಹನದ ವ್ಯವಸ್ಥೆ

ಸೊರಬ, ಆ.23- ಮುಂದಿನ ಶೈಕ್ಷಣಿಕ ವರ್ಷದಿಂದ ಕೆಪಿಎಸ್‌ ಶಾಲೆಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಶಾಲಾ ವಾಹನದ ವ್ಯವಸ್ಥೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಘೋಷಿಸಿದರು.

ವಿದ್ಯಾರ್ಥಿಗಳು ತಮ್ಮ ತಮ್ಮ ಊರುಗಳಿಂದ ಆರಾಮವಾಗಿ ಶಾಲೆಗೆ ಬಂದು-ಹೋಗಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗುವುದು. ಸ್ಯಾನಿಟರಿ ಪ್ಯಾಡ್‌ ಬರ್ನಿಂಗ್‌ ಮಿಷನ್‌ ಸ್ಥಾಪಿಸುವ ಸಲಹೆ ಉತ್ತಮ ಹಾಗೂ ಅಗತ್ಯವಾದುದಾಗಿದೆ. ರಾಜ್ಯದ ಎಲ್ಲ ಶಾಲೆಗಳಲ್ಲಿ, ವಿಶೇಷವಾಗಿ ಕೆಪಿಎಸ್‌ ಶಾಲೆಗಳಲ್ಲಿ ಈ ವ್ಯವಸ್ಥೆ ಅಳವಡಿಸುವ ಕುರಿತು ಚರ್ಚಿಸಲಾಗುವುದು. ಮುಂದಿನ ದಿನಗಳಲ್ಲಿ ಸೂಕ್ತ ಯೋಜನೆ ರೂಪಿಸಿ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದರು.

ತಾಲ್ಲೂಕಿನ ಆನವಟ್ಟಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಎಸ್‌ಎಫ್‌ಸಿ ವಿಶೇಷ ಅನುದಾನ ಹಾಗೂ ಸ್ವಚ್ಛ ಭಾರತ್‌ ಮಿಷನ್‌ 2.0 ಯೋಜನೆಯಡಿ ಒಟ್ಟು 1.02 ಕೋಟಿ ರೂ. ಅಂದಾಜು ಮೊತ್ತದ ಮೂರು ಪ್ರಮುಖ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಸಚಿವರು, ಆನವಟ್ಟಿ ಕೆಪಿಎಸ್‌ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಸಮಸ್ಯೆ ಹಾಗೂ ಬೇಡಿಕೆಗಳನ್ನು ಆಲಿಸಿದರು.

ವಿದ್ಯಾರ್ಥಿಗಳು ಡೆಸ್ಕ್‌ಗಳ ಸೌಲಭ್ಯ, ಶೌಚಾಲಯ, ಸ್ಯಾನಿಟರಿ ಪ್ಯಾಡ್‌ ಬರ್ನಿಂಗ್‌ ಮಿಷನ್‌, ಕ್ರೀಡಾಂಗಣದ ಆಧುನೀಕರಣ ಸೇರಿದಂತೆ ವಿವಿಧ ಬೇಡಿಕೆಗಳನ್ನು ಸಚಿವರ ಗಮನಕ್ಕೆ ತಂದರು. ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಸಚಿವರು, ಶಾಲೆಯ ಮೂಲಸೌಕರ್ಯಕ್ಕೆ ಸಂಬಂಧಿಸಿದ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಈಡೇರಿಸುವುದಾಗಿ ಭರವಸೆ ನೀಡಿದರು. ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

ಕಾರ್ಯಕ್ರಮದಲ್ಲಿ ಆನವಟ್ಟಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಕ್ಷತಾ, ತಹಶೀಲ್ದಾರ್‌ ಪುರಂದರ ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ಆರ್‌. ಪುಷ್ಪಾ ಸೇರಿದಂತೆ ಅಧಿಕಾರಿಗಳು ಹಾಗೂ ಕಾಂಗ್ರೆಸ್‌ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

RELATED ARTICLES
spot_img

Latest News