ಬೆಂಗಳೂರು, ಆ.23- ನಿರಂತರ ಏರುಗತಿಯಲ್ಲಿ ಸಾಗುತ್ತಿರುವ ಚಿನ್ನದ ಬೆಲೆ ಮೂರು ವಾರಗಳಲ್ಲಿ ಪ್ರತಿ ಗ್ರಾಂಗೆ ಒಂದೂವರೆ ಸಾವಿರ ರೂ.ಗೂ ಹೆಚ್ಚು ಏರಿಕೆಯಾಗಿದೆ. ಇದರೊಂದಿಗೆ ಚಿನ್ನ ಮತ್ತೆ ದುಬಾರಿ ದರದತ್ತ ಸಾಗುತ್ತಿದೆ.ಜೂನ್ ಮತ್ತು ಜುಲೈ ತಿಂಗಳಲ್ಲಿ ಪದೇಪದೇ ಏರಿಳಿತ ಕಂಡು ಇಳಿಮುಖದ ಹಾದಿಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ಆಗಸ್ಟ್ ತಿಂಗಳಲ್ಲಿ ಏರುಗತಿಯಲ್ಲಿ ಸಾಗುತ್ತಿವೆ. ಒಮ್ಮೆ ಅಲ್ಪ ಪ್ರಮಾಣದಲ್ಲಿ ಇಳಿಕೆಯಾದ ಬೆನ್ನಲ್ಲೇ ಮತ್ತೆ ಸತತ ಏರಿಕೆ ಕಾಣುತ್ತಿವೆ.
ಭಾನುವಾರವಾದ್ದರಿಂದ ಚಿನ್ನ ಮತ್ತು ಬೆಳ್ಳಿ ದರಗಳು ಸ್ಥಿರವಾಗಿವೆ. ಆ.14ರಿಂದ ನಿರಂತರ ಏರುಗತಿಯಲ್ಲಿ ಸಾಗಿದ್ದ ಚಿನ್ನದ ಬೆಲೆ ಆ.19ರಂದು ಅಲ್ಪ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಬಳಿಕ ಮತ್ತೆ ಏರುಗತಿಯಲ್ಲಿ ಸಾಗಿದ್ದು, ನಿನ್ನೆಯವರೆಗೂ ಬೆಲೆ ಏರಿಕೆ ಮುಂದುವರಿದಿತ್ತು.
ಲಭ್ಯವಿರುವ ಮಾರುಕಟ್ಟೆ ಮಾಹಿತಿ ಪ್ರಕಾರ, ನಿನ್ನೆ 24 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 152 ರೂ. ಏರಿಕೆಯಾಗಿದ್ದು, 16,309 ರೂ.ಗೆ ತಲುಪಿದೆ. 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 140 ರೂ. ಹೆಚ್ಚಾಗಿ 14,950 ರೂ.ನಷ್ಟಿದೆ. 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 12,232 ರೂ.ನಷ್ಟಿದ್ದು, ಇಂದು ಯಾವುದೇ ಏರಿಳಿತವಿಲ್ಲದೆ ಸ್ಥಿರವಾಗಿದೆ.
ಪ್ಲಾಟಿನಂ ದರದಲ್ಲೂ ಏರಿಕೆಯಾಗಿದ್ದು, 10 ಗ್ರಾಂಗೆ 57,420 ರೂ.ನಷ್ಟಿದೆ. ಅದೇ ರೀತಿ ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡುಬಂದಿದೆ. ಆ.14ರಂದು ಒಂದು ಕೆ.ಜಿ. ಬೆಳ್ಳಿ ದರ 5 ಸಾವಿರ ರೂ. ಇಳಿಕೆಯಾಗಿ 2.50 ಲಕ್ಷ ರೂ.ನಷ್ಟಿತ್ತು. ಆ.18ರವರೆಗೂ ಇದೇ ದರ ಮುಂದುವರಿದಿತ್ತು. ಆ.19ರಂದು ಮತ್ತೆ 5 ಸಾವಿರ ರೂ. ಇಳಿಕೆಯಾಗಿದ್ದ ಬೆಳ್ಳಿಯ ಬೆಲೆ ಆ.20ರಂದು 10 ಸಾವಿರ ರೂ. ಹಾಗೂ ಆ.21ರಂದು 5 ಸಾವಿರ ರೂ. ಏರಿಕೆಯಾಗಿ 2.60 ಲಕ್ಷ ರೂ.ಗೆ ತಲುಪಿತ್ತು. ಕಳೆದ ಎರಡು ದಿನಗಳಿಂದ ಯಾವುದೇ ಏರಿಳಿತವಿಲ್ಲದೆ ಇದೇ ದರ ಮುಂದುವರಿದಿದೆ.
ಜಾಗತಿಕ ವಿದ್ಯಮಾನಗಳಿಂದಾಗಿ ಚಿನಿವಾರಪೇಟೆಯಲ್ಲಿ ಏರಿಳಿತ ಉಂಟಾಗಿ, ಚಿನ್ನ ಮತ್ತು ಬೆಳ್ಳಿ ದರಗಳು ಇಳಿಮುಖವಾಗಿದ್ದವು. ಆದರೆ, ಇತ್ತೀಚೆಗೆ ಚೇತರಿಕೆ ಕಂಡಿದ್ದು, ಸದ್ಯಕ್ಕೆ ಬೆಲೆ ಇಳಿಕೆಯಾಗುವ ಸಾಧ್ಯತೆಗಳು ವಿರಳ ಎಂದು ವರ್ತಕರು ಅಭಿಪ್ರಾಯಪಟ್ಟಿದ್ದಾರೆ.
