ಬೆಂಗಳೂರು, ಆ.23- ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ಕಾರು ಸುಟ್ಟು ಕರಕಲಾದ ಘಟನೆ ಕಳೆದ ರಾತ್ರಿ ಕೋರಮಂಗಲದ ಬಳಿ ನಡೆದಿದೆ.ರಾತ್ರಿ 11.30ರ ಸುಮಾರಿಗೆ ಕೋರಮಂಗಲದ ವಾಟರ್ ಟ್ಯಾಂಕ್ ಜಂಕ್ಷನ್ ಬಳಿ ಕಾರು ಬರುತ್ತಿದ್ದಾಗ ಇಂಜಿನ್ನಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಚಾಲಕ, ತಕ್ಷಣ ರಸ್ತೆ ಬದಿಗೆ ಕಾರು ನಿಲ್ಲಿಸಿ ಕೆಳಗಿಳಿದಿದ್ದಾರೆ.
ಬಳಿಕ ಏಕಾಏಕಿ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಅದನ್ನು ನಂದಿಸಲು ಸ್ಥಳೀಯರು ಪ್ರಯತ್ನಿಸಿದರೂ ಸಾಧ್ಯವಾಗದೆ ಕಾರು ಸಂಪೂರ್ಣ ಸುಟ್ಟುಹೋಗಿದೆ. ಅದೇ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಕೆಲವರು ಕೂಡಲೇ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದು, ಚಾಲಕನ ಸಮಯಪ್ರಜ್ಞೆಯಿಂದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಅಗರ-ಸರ್ಜಾಪುರ ರಸ್ತೆಯಲ್ಲಿ ಕೆಲಹೊತ್ತು ಸಂಚಾರ ದಟ್ಟಣೆ ಉಂಟಾಗಿತ್ತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು. ಈ ಸಂಬಂಧ ಕೋರಮಂಗಲ ಸಂಚಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸಂಕೇಶ್ವರ ಪಟ್ಟಣದಲ್ಲೂ ಹೊತ್ತಿ ಉರಿದ ಕಾರು
ಬೆಳಗಾವಿ,ಆ.23- ನಡು ರಸ್ತೆಯಲ್ಲಿಯೇ ಕಾರೊಂದು ಹೊತ್ತಿ ಉರಿದ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ಎಸ್ಜಿ ರಸ್ತೆ ಬಳಿ ನಡೆದಿದೆ. ಶಾರ್ಟ್ ಸರ್ಕ್ಯೂಟ್ನಿಂದ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಕಾರು ವಿರೂಪಾಕ್ಷಿ ದೋನೆವಾಡಿ ಎಂಬುವವರಿಗೆ ಸೇರಿದ್ದು ರಸ್ತೆ ಪಕ್ಕ ನಿಂತಿದ್ದಾಗ ಏಕಾ ಏಕಿ ಬೆಂಕಿ ಹೊತ್ತಿಕೊಂಡಿದೆ.ಸಂಕೇಶ್ವರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
