ಮೋದಕ ಪ್ರಿಯಾಯ ದೇವಾಯ ವಿಘ್ನರಾಜಾಯ ತೇ ನಮಃ ।
ಪಂಚಖಾದ್ಯಪ್ರಿಯಾಯೈವ ವಿದ್ಯಾದಾತ್ರೇ ನಮೋ ನಮಃ ॥
ಮೋದಕ ಹಾಗೂ ಪಂಚಖಾದ್ಯಗಳನ್ನು ಇಷ್ಟಪಟ್ಟು ಸ್ವೀಕರಿಸುವ, ವಿದ್ಯೆಯನ್ನು ಕರುಣಿಸುವ ಹಾಗೂ ವಿಘ್ನಗಳನ್ನು ನಿವಾರಿಸುವ ಶ್ರೀ ಗಣೇಶನಿಗೆ ಪ್ರಣಾಮಗಳು.
ಗಣೇಶ ಚತುರ್ಥಿಯಂದು ವಿಘ್ನವಿನಾಶಕ ಗಣಪತಿಗೆ ವಿವಿಧ ಬಗೆಯ ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ಅವುಗಳಲ್ಲಿ ಪ್ರಮುಖವಾದವು ಇಂತಿವೆ:
ಮೋದಕ:
ಗಣಪತಿಗೆ ಅತ್ಯಂತ ಪ್ರಿಯವಾದ ನೈವೇದ್ಯಗಳಲ್ಲಿ ಮೋದಕ ಪ್ರಮುಖವಾದುದು. ಅಕ್ಕಿಹಿಟ್ಟಿನ ಹೊದಿಕೆಯಲ್ಲಿ ತೆಂಗಿನಕಾಯಿ ಮತ್ತು ಬೆಲ್ಲದ ಹೂರಣ ತುಂಬಿ ಬೇಯಿಸುವ ಮೋದಕವು ಜ್ಞಾನ ಮತ್ತು ಆನಂದದ ಸಂಕೇತವೆಂದು ಪರಿಗಣಿಸಲಾಗುತ್ತದೆ.
ಕಡಲೆಹಿಟ್ಟಿನ ಲಾಡು:
ಗಣೇಶನ ಕರಕಮಲದಲ್ಲಿ ಸದಾ ಶೋಭಿಸುವ ಲಾಡು ಸಮೃದ್ಧಿ, ಸೌಭಾಗ್ಯ ಹಾಗೂ ಜೀವನದ ಸಿಹಿಯನ್ನು ಸಂಕೇತಿಸುತ್ತದೆ.
ಪಂಚಖಾದ್ಯ:
ಒಣಕೊಬ್ಬರಿ, ಬೆಲ್ಲ, ಎಳ್ಳು, ಅವಲಕ್ಕಿ ಹಾಗೂ ಹುರಿಗಡಲೆ ಸೇರಿಸಿ ತಯಾರಿಸುವ ಪಂಚಖಾದ್ಯವು ಆರೋಗ್ಯ ಹಾಗೂ ಆಧ್ಯಾತ್ಮಿಕ ದೃಷ್ಟಿಯಿಂದ ಮಹತ್ವ ಹೊಂದಿದೆ.
ಅವಲಕ್ಕಿ-ಬೆಲ್ಲ:
ಅತ್ಯಂತ ಸಾತ್ವಿಕ ಹಾಗೂ ಸರಳವಾದ ನೈವೇದ್ಯ. ಕಾಯಿ, ಬೆಲ್ಲ ಮತ್ತು ಏಲಕ್ಕಿ ಬೆರೆಸಿದ ಅವಲಕ್ಕಿಯನ್ನು ಗಣಪತಿಗೆ ಅರ್ಪಿಸಲಾಗುತ್ತದೆ.
ಕಬ್ಬು-ಬಾಳೆಹಣ್ಣು:
ಆನೆಯ ಮುಖವನ್ನು ಹೊಂದಿರುವ ಗಣೇಶನಿಗೆ ನೈಸರ್ಗಿಕವಾಗಿ ದೊರೆಯುವ ಸಿಹಿಯಾದ ಕಬ್ಬಿನ ತುಂಡುಗಳು ಹಾಗೂ ಬಾಳೆಹಣ್ಣುಗಳನ್ನು ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವಿದೆ.
ಕರ್ಜಿಕಾಯಿ:
ಕಾಯಿ, ಬೆಲ್ಲ ಹಾಗೂ ಗಸಗಸೆ ಹೂರಣ ತುಂಬಿ ಕರಿಯುವ ಕರ್ಜಿಕಾಯಿ ಗಣೇಶ ಚತುರ್ಥಿಯ ವಿಶೇಷ ನೈವೇದ್ಯಗಳಲ್ಲಿ ಒಂದಾಗಿದೆ.
ಪಂಚಾಮೃತ:
ಹಾಲು, ಮೊಸರು, ಹಸುವಿನ ತುಪ್ಪ, ಜೇನುತುಪ್ಪ ಹಾಗೂ ಸಕ್ಕರೆಯನ್ನು ಬೆರೆಸಿ ತಯಾರಿಸುವ ಪಂಚಾಮೃತವನ್ನು ಗಣಪತಿಗೆ ಅರ್ಪಿಸಲಾಗುತ್ತದೆ. ಪಂಚಾಮೃತ ತಯಾರಿಕೆಯಲ್ಲಿ ಪ್ರಮಾಣಕ್ಕೂ ಮಹತ್ವವಿದೆ ಎಂದು ಸಂಪ್ರದಾಯದಲ್ಲಿ ಹೇಳಲಾಗುತ್ತದೆ.
ಸಾಮಾನ್ಯವಾಗಿ 16 ಚಮಚ ಹಾಲು, 8 ಚಮಚ ಮೊಸರು, 4 ಚಮಚ ಜೇನುತುಪ್ಪ, 2 ಚಮಚ ತುಪ್ಪ ಹಾಗೂ 1 ಚಮಚ ಸಕ್ಕರೆ ಸೇರಿಸುವ ಪ್ರಮಾಣವನ್ನು ಉಲ್ಲೇಖಿಸಲಾಗುತ್ತದೆ.
ಬಾಹ್ಯ ಅದ್ಧೂರಿಯ ನೈವೇದ್ಯಕ್ಕಿಂತಲೂ ಶಾಸ್ತ್ರೋಕ್ತವಾಗಿ, ಶ್ರದ್ಧೆ ಮತ್ತು ಭಕ್ತಿಯಿಂದ ಅರ್ಪಿಸುವ ಸಣ್ಣ ಮೋದಕವಾಗಲಿ ಅಥವಾ ಒಂದು ಮುಷ್ಟಿ ಅವಲಕ್ಕಿಯಾಗಲಿ ಗಣಪತಿಗೆ ಪ್ರಿಯವಾಗುತ್ತದೆ ಎಂಬ ನಂಬಿಕೆಯಿದೆ. ಆದ್ದರಿಂದ ನೈವೇದ್ಯಕ್ಕಿಂತ ಭಕ್ತಿ, ಶ್ರದ್ಧೆ ಮತ್ತು ನಂಬಿಕೆಯೇ ಮುಖ್ಯ.
