ಹನೂರು,ಸೆ.11-ಮುಂದೆ ಹೋಗುತ್ತಿದ್ದ ಬೈಕ್ಗೆ ಹಿಂದಿನಿಂದ ಅತೀ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಮೂವರು ಸವಾರರು ದಾರುಣವಾಗಿ ಮೃತಪಟ್ಟಿರುವ ಘಟನೆ ಹನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತಡರಾತ್ರಿ ನಡೆದಿದೆ. ತಾಲ್ಲೂಕಿನ ರಾಮಾಪುರ ಹೋಬಳಿ ಮೀಣ್ಯಂ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೊಪ್ಪ ಗ್ರಾಮದ ನಿವಾಸಿಗಳಾದ ಮಹೇಂದ್ರ (35) ಸುರೇಶ್(24) ಮುನಿಯಪ್ಪ(35) ಮೃತಪಟ್ಟಿರುವ ದುರ್ದೈವಿಗಳಾಗಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೆ ಚಾಲಕ ಕಾರನ್ನು ನಿಲ್ಲಿಸದೇ ಚಾಲನೆ ಮಾಡಿಕೊಂಡು ಹೋಗಿದ್ದಾನೆ. ಗೌರಿ-ಗಣೇಶ ಹಬ್ಬದ ಪ್ರಯುಕ್ತ ಈ ಮೂವರು ನಿನ್ನೆ ಸಂಜೆ ಒಂದೇ ಬೈಕ್ನಲ್ಲಿ ಕೊಳ್ಳೇಗಾಲದಲ್ಲಿರುವ ಸ್ನೇಹಿತರ ಬಳಿ ಹೋಗಿದ್ದಾರೆ. ಅವರಿಂದ ದೇಣಿಗೆ ಪಡೆದು ಗಣೇಶ ಮೂರ್ತಿಯನ್ನು ತರಲು ತಡರಾತ್ರಿ ತೆರಳುತ್ತಿದ್ದರು.
ಪಟ್ಟಣ ಹೊರ ವಲಯದ ಮಲೈ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮುಖ್ಯರಸ್ತೆಯಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಸಮೀಪ ಹನೂರು ಕಡೆಯಿಂದ ಕೊಳ್ಳೇಗಾಲ ಕಡೆಗೆ ಹೋಗುತ್ತಿದ್ದ ಇವರ ಬೈಕ್ಗೆ ಮೈಸೂರು ಕಡೆಯಿಂದ ಮಲೆಮಹದೇಶ್ವರ ಬೆಟ್ಟಕ್ಕೆ ತೆರಳುತ್ತಿದ್ದ ಕಾರು ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಇಬ್ಬರು ಮತಪಟ್ಟಿದ್ದಾರೆ.
ಗಂಭೀರ ಗಾಯಗೊಂಡಿದ್ದ ಮತ್ತೊಬ್ಬರನ್ನು ಮೈಸೂರಿನ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯ ಮತಪಟ್ಟಿದ್ದಾರೆ.
ವಿಷಯ ತಿಳಿದು ಸ್ಥಳಕ್ಕೆ ಹನೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕೊಳ್ಳೇಗಾಲದ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
ಘಟನಾ ಸ್ಥಳದಲ್ಲಿದ್ದ ದೊರೆತ ಕಾರಿನ ಬಿಡಿ ಭಾಗಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ,ರಸ್ತೆ ಹಾಗೂ ಸುತ್ತಮುತ್ತಲಿನ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಅಪಘಾತವೆಸಗಿದ ಕಾರು ಹಾಗೂ ಚಾಲಕನ ಪತ್ತೆಗಾಗಿ ತನಿಖೆ ಆರಂಭಿಸಿದ್ದಾರೆ.
