Homeಬೆಂಗಳೂರುನಂದಿತೀರ್ಥ ದೇಗುಲಕ್ಕೂ ಜಲ ಕಂಟಕ, ಸಿಲಿಕಾನ್‌ ಸಿಟಿಯನ್ನು ಆ ದೇವರೆ ಕಾಪಾಡಬೇಕು

ನಂದಿತೀರ್ಥ ದೇಗುಲಕ್ಕೂ ಜಲ ಕಂಟಕ, ಸಿಲಿಕಾನ್‌ ಸಿಟಿಯನ್ನು ಆ ದೇವರೆ ಕಾಪಾಡಬೇಕು

ಬೆಂಗಳೂರು, ಸೆ.11: ನಗರದ ಐತಿಹಾಸಿಕ ಹಾಗೂ ಪ್ರಸಿದ್ಧ ನಂದಿತೀರ್ಥ ದೇಗುಲಕ್ಕೂ ಇದೀಗ ಜಲಕಂಟಕ ಎದುರಾಗಿದೆ. ನಿಗೂಢ ಜಲಮೂಲದಿಂದ ನಂದಿಯ ಬಾಯಿಯ ಮೂಲಕ ಹೊರಹೊಮ್ಮುವ ನೀರು ನೇರವಾಗಿ ಶಿವಲಿಂಗದ ಮೇಲೆ ಬಿದ್ದು ನಿತ್ಯ ಜಲಾಭಿಷೇಕ ನಡೆಯುವುದು ಈ ದೇಗುಲದ ವಿಶೇಷತೆಯಾಗಿದೆ.ಆದರೆ, ವರ್ಷಗಳಿಂದ ನಿರಂತರವಾಗಿ ಹರಿಯುತ್ತಿದ್ದ ಈ ಅಪರೂಪದ ಜಲಧಾರೆಯ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ದೇವಸ್ಥಾನದ ಅರ್ಚಕರು ಆತಂಕ ವ್ಯಕ್ತಪಡಿಸಿದ್ದಾರೆ.

ಸುಂದರ ನಂದಿಯ ವಿಗ್ರಹದ ಬಾಯಿಯಿಂದ ನಿರಂತರವಾಗಿ ಹೊರಹೊಮ್ಮುವ ನೀರು ಕೆಳಭಾಗದಲ್ಲಿರುವ ಶಿವಲಿಂಗದ ಮೇಲೆ ಬೀಳುತ್ತದೆ. ಬಳಿಕ ಇದೇ ನೀರು ದೇವಸ್ಥಾನದ ಆವರಣದಲ್ಲಿರುವ ಪುಟ್ಟ ಕೊಳಕ್ಕೆ ಹರಿದುಹೋಗುತ್ತದೆ. ನಂದಿಯ ಬಾಯಿಯಿಂದ ಹೊರಹೊಮ್ಮುವ ನೀರು ಯಾವ ಜಲಮೂಲದಿಂದ ಬರುತ್ತದೆ ಎಂಬುದು ಇಂದಿಗೂ ನಿಗೂಢವಾಗಿಯೇ ಉಳಿದಿದೆ.

ಕಾಡುಮಲ್ಲೇಶ್ವರ ದೇಗುಲದ ಸಮೀಪದಲ್ಲಿರುವ ಐತಿಹಾಸಿಕ ದಕ್ಷಿಣ ತೀರ್ಥ ನಂದಿತೀರ್ಥವು ಭಕ್ತರಿಗೆ ಮಾತ್ರವಲ್ಲದೆ ಪ್ರಕೃತಿ ವಿಸ್ಮಯವನ್ನು ಅಧ್ಯಯನ ಮಾಡುವವರಿಗೂ ಕುತೂಹಲದ ಕೇಂದ್ರವಾಗಿದೆ. ವರ್ಷಗಳಿಂದ ನಿರಂತರವಾಗಿ ಹರಿಯುತ್ತಿರುವ ಈ ಜಲಧಾರೆ ಕೋಟ್ಯಂತರ ಭಕ್ತರ ಅಚ್ಚರಿಗೆ ಕಾರಣವಾಗಿದೆ.

ಜಲಧಾರೆ ಕ್ಷೀಣ: ಆತಂಕ

ಈ ಬಾರಿ ಪರಿಸ್ಥಿತಿ ಬದಲಾಗಿದ್ದು, ನಂದಿಯ ಬಾಯಿಯಿಂದ ಹೊರಹೊಮ್ಮುತ್ತಿದ್ದ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇದರಿಂದ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಭಕ್ತರಲ್ಲಿ ಆತಂಕ ಮೂಡಿದೆ. ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಶಿವಲಿಂಗದ ಜಲಾಭಿಷೇಕ ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂಬುದು ಭಕ್ತರ ಆಶಯವಾಗಿದೆ.

ಇದರ ನಡುವೆ, ಬೆಂಗಳೂರಿನ ಸ್ಯಾಂಕಿ ಕೆರೆಯಲ್ಲೂ ನೀರಿನ ಪ್ರಮಾಣ ಗಣನೀಯವಾಗಿ ಕುಸಿದಿರುವುದು ಆತಂಕ ಹೆಚ್ಚಿಸಿದೆ. ಮಲ್ಲೇಶ್ವರಂ ಸುತ್ತಮುತ್ತಲಿನ ಜಲಮೂಲಗಳ ಮಟ್ಟ ಕುಸಿತ, ದುರ್ಬಲ ಮಳೆ ಹಾಗೂ ಬದಲಾಗುತ್ತಿರುವ ಪ್ರಾಕೃತಿಕ ಪರಿಸ್ಥಿತಿಯ ಪರಿಣಾಮ ನಂದಿತೀರ್ಥದ ಜಲಧಾರೆಯ ಮೇಲೂ ಆಗುತ್ತಿದೆಯೇ ಎಂಬ ಪ್ರಶ್ನೆ ಇದೀಗ ಎದುರಾಗಿದೆ.

ಸದ್ಯ ನೀರಿನ ಪ್ರಮಾಣ ಕಡಿಮೆಯಾಗಿದ್ದರೂ ಶಿವಲಿಂಗಕ್ಕೆ ನಿತ್ಯ ಅಭಿಷೇಕ ಹಾಗೂ ಪೂಜೆ–ಪುನಸ್ಕಾರಗಳು ನಿರಂತರವಾಗಿ ನಡೆಯುತ್ತಿವೆ. ಆದರೆ, ಮುಂದಿನ ದಿನಗಳಲ್ಲಿ ಜಲಧಾರೆ ಮತ್ತಷ್ಟು ಕ್ಷೀಣಿಸಿದರೆ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಪ್ರಸನ್ನ ಭಟ್‌ ಆತಂಕ ವ್ಯಕ್ತಪಡಿಸಿದ್ದಾರೆ.

ನಗರದ ಜನತೆಗೆ ಮಾತ್ರವಲ್ಲದೆ ದೇವರ ನಿತ್ಯದ ಅಭಿಷೇಕಕ್ಕೂ ಜಲಕಂಟಕದ ಬಿಸಿ ತಟ್ಟಿರುವುದು ಬೆಂಗಳೂರಿನಲ್ಲಿ ಕ್ಷೀಣಿಸುತ್ತಿರುವ ಜಲಮೂಲಗಳ ಗಂಭೀರತೆಯನ್ನು ಮತ್ತೊಮ್ಮೆ ಎತ್ತಿ ತೋರಿಸಿದೆ. ಪ್ರಕೃತಿಯಲ್ಲಾಗುತ್ತಿರುವ ಬದಲಾವಣೆಗಳು ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತಿವೆ ಎಂಬುದಕ್ಕೆ ನಂದಿತೀರ್ಥದ ಜಲಧಾರೆಯ ಕ್ಷೀಣತೆಯೂ ಉದಾಹರಣೆಯಾಗಿದೆ.

RELATED ARTICLES
spot_img

Latest News