ಶ್ರೀನಗರ, ಸೆ.11: ವಂದೇ ಮಾತರಂ ಗೀತೆಯ ಪೂರ್ಣರೂಪ ಗಾಯನಕ್ಕೆ ಸಂಬಂಧಿಸಿದಂತೆ ತನ್ನ ಮೈತ್ರಿ ಪಕ್ಷವಾದ ಕಾಂಗ್ರೆಸ್ ನೀಡಿದ ಸಲಹೆಗೆ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ತೀವ್ರವಾಗಿ ಪ್ರತಿಕ್ರಿಯಿಸಿದ್ದಾರೆ.
ಶ್ರೀನಗರದಲ್ಲಿ ನಡೆದ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡಿದ್ದಕ್ಕೆ ಕಾಂಗ್ರೆಸ್ ಆಕ್ಷೇಪ ವ್ಯಕ್ತಪಡಿಸಿತ್ತು. ಪಕ್ಷವು ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಎರಡು ಚರಣಗಳನ್ನು ಮಾತ್ರ ಹಾಡುವ ನಿರ್ಧಾರ ಕೈಗೊಂಡಿದ್ದು, ತನ್ನ ಮೈತ್ರಿ ಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ಕೂಡ ಇದೇ ಕ್ರಮ ಅನುಸರಿಸುವಂತೆ ಮನವಿ ಮಾಡಿತ್ತು.
ಇದಕ್ಕೆ ತಿರುಗೇಟು ನೀಡಿರುವ ಒಮರ್ ಅಬ್ದುಲ್ಲಾ, ಅಧಿಕೃತ ಕಾರ್ಯಕ್ರಮಗಳಲ್ಲಿ ವಂದೇ ಮಾತರಂನ ಪೂರ್ಣರೂಪವನ್ನು ಹಾಡುವುದಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ಕಾನೂನುಬದ್ಧ ನಿಯಮಗಳು ಜಾರಿಯಲ್ಲಿದ್ದು, ಅದನ್ನು ಪಾಲಿಸಬೇಕಾಗಿದೆ ಎಂದು ಹೇಳಿದ್ದಾರೆ. ‘ಕಾಶ್ಮೀರಿಗಳನ್ನು ಜೈಲಿಗೆ ಕಳುಹಿಸಬೇಕೆ ಕಾಂಗ್ರೆಸ್ ಬಯಸುತ್ತಿದೆಯೇ?’ ಎಂದು ಅವರು ಕಾಂಗ್ರೆಸ್ ಅನ್ನು ಪ್ರಶ್ನಿಸಿದ್ದಾರೆ.
ವಂದೇ ಮಾತರಂಗೆ ಸಂಬಂಧಿಸಿದ ಕಾನೂನು ಕೇವಲ ಜಮ್ಮು ಮತ್ತು ಕಾಶ್ಮೀರಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ದೇಶದ ಸರ್ಕಾರಿ ಕಾರ್ಯಕ್ರಮಗಳ ಶಿಷ್ಟಾಚಾರದ ಭಾಗವಾಗಿದ್ದು, ನಿಯಮಗಳನ್ನು ಪಾಲಿಸದಿದ್ದರೆ ಕ್ರಮ ಕೈಗೊಳ್ಳಬಹುದು ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಇಂಡಿಯಾ ಮೈತ್ರಿಕೂಟದ ಪಾಲುದಾರರಾಗಿದ್ದು, ಕಾಂಗ್ರೆಸ್ ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರಕ್ಕೆ ಹೊರಗಿನಿಂದ ಬೆಂಬಲ ನೀಡುತ್ತಿದೆ.
ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲೂ ರಾಷ್ಟ್ರಗೀತೆ ಹಾಗೂ ರಾಷ್ಟ್ರಗೀತೆಗೆ ಸಮಾನ ಸ್ಥಾನಮಾನ ಹೊಂದಿರುವ ವಂದೇ ಮಾತರಂ ಅನ್ನು ಪ್ರಸ್ತುತಪಡಿಸಲಾಗುವುದು ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.
‘ಒಂದು ಪಕ್ಷವಾಗಿ ನಾವು ಎಂದಿಗೂ ವಂದೇ ಮಾತರಂನ ಪೂರ್ಣರೂಪವನ್ನು ಅಳವಡಿಸಿಕೊಂಡಿಲ್ಲ, ಮುಂದೆಯೂ ಹಾಗೆ ಮಾಡುವುದಿಲ್ಲ. ಆದರೆ ಕಾನೂನುಬದ್ಧ ಕಟ್ಟುಪಾಡುಗಳನ್ನು ಪಾಲಿಸಲೇಬೇಕು’ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.
