Homeರಾಜ್ಯದೆಹಲಿಯಲ್ಲಿ ಸಿದ್ದು-ರಾಹುಲ್‌ ಚರ್ಚೆ

ದೆಹಲಿಯಲ್ಲಿ ಸಿದ್ದು-ರಾಹುಲ್‌ ಚರ್ಚೆ

ಬೆಂಗಳೂರು, ಸೆ.11- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ದೆಹಲಿಗೆ ತೆರಳಿದ್ದು, ಇಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.ಒಟ್ಟು 8 ವರ್ಷ ಮುಖ್ಯಮಂತ್ರಿಯಾಗಿರಲು ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ರಾಹುಲ್‌ ಗಾಂಧಿಯವರಿಗೆ ಸಿದ್ದರಾಮಯ್ಯ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ ಕಾಂಗ್ರೆಸ್‌‍ ಪಕ್ಷದ ಕೆಲ ರಾಷ್ಟ್ರೀಯ ನೀತಿಗಳ ಬಗ್ಗೆ ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಅವರ ಅಭಿಪ್ರಾಯ ಕೇಳಿರುವುದಾಗಿ ಮೂಲಗಳು ತಿಳಿಸಿವೆ.

ಕಾಂಗ್ರೆಸ್‌‍ ಪಕ್ಷದಲ್ಲಿ ಸಿದ್ದರಾಮಯ್ಯ ಅವರಿಗೆ ವಿಶೇಷ ಮಾನ್ಯತೆ ಇದೆ. ರಾಹುಲ್‌ ಗಾಂಧಿಯವರ ಜೊತೆ ಭೇಟಿಯ ವೇಳೆಯಲ್ಲಿ ರಾಜ್ಯ ರಾಜಕೀಯದಲ್ಲಿನ ಬೆಳವಣಿಗೆಗಳ ಬಗ್ಗೆ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆಯಲ್ಲಿ ಕೆಲ ಬದಲಾವಣೆಗಳ ಬಗ್ಗೆ ಸಿದ್ದರಾಮಯ್ಯ ಅವರಿಗೆ ತೀವ್ರ ಅಸಮಾಧಾನಗಳಿವೆ. ತಾವು ಸಲಹೆ ನೀಡಿದ್ದ ವ್ಯಕ್ತಿಗಳ ಬದಲಾಗಿ, ಬೇರೆಯವರಿಗೆ ಹೈಕಮಾಂಡ್‌ ಮಣೆ ಹಾಕಿತ್ತು. ಗಾಯತ್ರಿ ಶಾಂತೇಗೌಡ ಅವರ ಹೆಸರು ಸಿದ್ದರಾಮಯ್ಯ ಅವರ ಅರಿವಿಗಿಲ್ಲದಂತೆ ಸಂಭವನೀಯ ಸಚಿವರ ಪಟ್ಟಿಯಲ್ಲಿ ಸೇರ್ಪಡೆಯಾಗಿತ್ತು. ಈ ಎಲ್ಲಾ ಅಸಮಾಧಾನಗಳ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಅವರ ಜೊತೆ ಚರ್ಚೆ ಮಹತ್ವ ಪಡೆದುಕೊಂಡಿದೆ.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಆಡಳಿತದಲ್ಲಿ ಅತ್ಯಂತ ಹೆಚ್ಚು ವೇಗದಲ್ಲಿ ಮುನ್ನಡೆಯುತ್ತಿದ್ದಾರೆ. ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಕಡೆಗಣಿಸಿ ಕೆಲ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದು ಭವಿಷ್ಯದಲ್ಲಿ ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ ಮತ್ತು ಪಕ್ಷದ ಸಂಘಟನಾತಕ ವಿಚಾರದಿಂದಲೂ ತೊಂದರೆಯಾಗಲಿದೆ ಎಂಬ ಆಕ್ಷೇಪವನ್ನು ಸಿದ್ದರಾಮಯ್ಯ, ರಾಹುಲ್‌ ಗಾಂಧಿ ಅವರ ಮುಂದೆ ಮಂಡಿಸಿದ್ದಾರೆ ಎಂದು ಹೇಳಲಾಗಿದೆ.

ವಿಧಾನ ಪರಿಷತ್‌ನಲ್ಲಿ ಖಾಲಿಯಿರುವ 5 ಸ್ಥಾನಗಳಿಗೆ ನಾಮ ನಿರ್ದೇಶನಗಳಾಗಬೇಕಿದೆ. ಇದರಲ್ಲಿ ಸಿದ್ದರಾಮಯ್ಯ ತಮ ಇಬ್ಬರು ಬೆಂಬಲಿಗರಿಗೆ ಅವಕಾಶ ಕೊಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.ನಿಗಮ-ಮಂಡಳಿಗಳ ನೇಮಕಾತಿಯಲ್ಲೂ ತಮ ಬೆಂಬಲಿಗರಿಗೆ ಅನ್ಯಾಯಗಳಾಗಬಾರದೆಂದು ಸಿದ್ದರಾಮಯ್ಯ ಬಲವಾಗಿ ಪ್ರತಿಪಾದಿಸಿದ್ದಾರೆ ಎಂಬ ಮಾಹಿತಿಗಳಿವೆ.

ಇತ್ತೀಚೆಗೆ ಅಹಿಂದ ಸಂಘಟನೆ ವಿಚಾರವಾಗಿ ಕೆಲವು ಗೊಂದಲಗಳನ್ನು ಸೃಷ್ಟಿಸುವ ಪ್ರಯತ್ನಗಳಾಗುತ್ತಿವೆ ಎಂಬ ಆಕ್ಷೇಪವನ್ನು ಸಿದ್ದರಾಮಯ್ಯ, ರಾಹುಲ್‌ ಗಾಂಧಿ ಅವರ ಮುಂದಿಟ್ಟಿದ್ದು, ಅಹಿಂದ ವಿಚಾರವಾಗಿ ತಾವು ತೆಗೆದುಕೊಳ್ಳುವ ಕ್ರಮಗಳಿಗೆ ಅಡ್ಡಿಪಡಿಸದಂತೆ ರಾಜ್ಯ ನಾಯಕರಿಗೆ ಸೂಚಿಸಲು ಮನವಿ ಮಾಡಿದ್ದಾರೆ.

ಅಹಿಂದ ಸಂಘಟನೆಯಿಂದ ಕಾಂಗ್ರೆಸ್‌‍ ಪಕ್ಷಕ್ಕೆ ಅನುಕೂಲವಾಗಲಿದೆ. ವೈಯಕ್ತಿಕವಾಗಿ ತಮಗೆ ಹೆಚ್ಚಿನ ಲಾಭಗಳಾಗುವುದಿಲ್ಲ. ಕೆಲವರು ತಪ್ಪು ಮಾಹಿತಿಯಿಂದ ಅಹಿಂದ ಸಂಘಟನೆಗೆ ಅಡ್ಡಿಪಡಿಸುತ್ತಿದ್ದಾರೆ. ಕಾಂಗ್ರೆಸ್‌‍ ಪಕ್ಷದಿಂದಲೇ ಕಾರ್ಯಕ್ರಮ ಮಾಡಬೇಕೆಂಬ ಒತ್ತಡ ಹೇರುತ್ತಿದ್ದಾರೆ, ಇದು ಸರಿಯಲ್ಲ. ಅಹಿಂದ ಸಂಘಟನೆ ಸಮುದಾಯ ಆಧರಿತವಾಗಿರಬಾರದು. ಒಂದು ವೇಳೆ ಆ ರೀತಿ ಆದರೆ ಪಕ್ಷದ ಮತ ಬ್ಯಾಂಕ್‌ಗೆ ಧಕ್ಕೆಯಾಗಲಿದೆ ಎಂದು ಸಿದ್ದರಾಮಯ್ಯ ವಿವರಣೆ ನೀಡಿರುವುದಾಗಿ ತಿಳಿದು ಬಂದಿದೆ.

ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ನಡೆದು ಅದರ ವರದಿಯನ್ನು ರಾಜ್ಯ ಸರ್ಕಾರ ಸ್ವೀಕರಿಸಿದೆ. ವರದಿ ಜಾರಿಗೊಳಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಸೂಚನೆ ನೀಡಬೇಕು.ಕೇಂದ್ರ ಸರ್ಕಾರದಿಂದ ನಡೆಯುವ ಗಣತಿಕಾರ್ಯದಲ್ಲಿ ಜಾತಿ ಮಾಹಿತಿಗಳನ್ನು ಕಲೆ ಹಾಕಲು ಕಾಂಗ್ರೆಸ್‌‍ ಒತ್ತಾಯ ಮಾಡುವ ಮುನ್ನ, ಕರ್ನಾಟಕದಲ್ಲಿ ಜಾತಿಗಣತಿಯ ವರದಿ ಅನುಷ್ಠಾನಗೊಳ್ಳುವುದು ಅಗತ್ಯ ಇದೆ ಎಂದು ಸಿದ್ದರಾಮಯ್ಯ, ರಾಹುಲ್‌ ಗಾಂಧಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

RELATED ARTICLES
spot_img

Latest News