Homeರಾಷ್ಟ್ರೀಯಬ್ರಿಕ್ಸ್‌ ಶೃಂಗಸಭೆ: ದೆಹಲಿಯಲ್ಲಿ ಹೈ ಅಲರ್ಟ್‌, 15 ಸಾವಿರ ಪೊಲೀಸರ ನಿಯೋಜನೆ

ಬ್ರಿಕ್ಸ್‌ ಶೃಂಗಸಭೆ: ದೆಹಲಿಯಲ್ಲಿ ಹೈ ಅಲರ್ಟ್‌, 15 ಸಾವಿರ ಪೊಲೀಸರ ನಿಯೋಜನೆ

ನವದೆಹಲಿ, ಸೆ.11 (ಪಿಟಿಐ): ವಾರಾಂತ್ಯದಲ್ಲಿ ಭಾರತ ಮಂಟಪದಲ್ಲಿ ನಡೆಯಲಿರುವ 18ನೇ ಬ್ರಿಕ್ಸ್‌ ಶೃಂಗಸಭೆಗೆ ವಿಶ್ವದ ಪ್ರಮುಖ ನಾಯಕರು ಭಾರತಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಗಣ್ಯರ ಸಂಚಾರದ ಹಿನ್ನೆಲೆಯಲ್ಲಿ ಹಲವು ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕ ಸಂಚಾರ ನಿರ್ಬಂಧ, ಮಾರ್ಗ ಬದಲಾವಣೆ ಹಾಗೂ ವಾಹನಗಳ ಸಂಚಾರಕ್ಕೆ ತಡೆ ಉಂಟಾಗುವ ಸಾಧ್ಯತೆಯಿದೆ.

ಶೃಂಗಸಭೆಯ ಭದ್ರತೆಗಾಗಿ ಸುಮಾರು 15,000 ದೆಹಲಿ ಪೊಲೀಸ್‌ ಸಿಬ್ಬಂದಿ, ಅರೆಸೇನಾ ಪಡೆಗಳ 200 ತುಕಡಿಗಳು ಹಾಗೂ 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳನ್ನು ನಗರದಾದ್ಯಂತ ನಿಯೋಜಿಸಲಾಗಿದೆ.

ನಾಳೆಯಿಂದ ಆರಂಭವಾಗಲಿರುವ ಎರಡು ದಿನಗಳ ಶೃಂಗಸಭೆ ಹಿನ್ನೆಲೆಯಲ್ಲಿ ದೆಹಲಿ ಹೈ ಅಲರ್ಟ್‌ನಲ್ಲಿದೆ. ನಗರವನ್ನು ಸಂಪೂರ್ಣ ಬಂದ್‌ ಮಾಡುವುದಿಲ್ಲ ಎಂದು ದೆಹಲಿ ಸಂಚಾರ ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಆದರೆ, ಗಣ್ಯರ ವಾಹನಗಳ ಸಂಚಾರವಿರುವ ಮಾರ್ಗಗಳಲ್ಲಿ ತಾತ್ಕಾಲಿಕ ತಡೆ, ಸಂಚಾರ ಮಾರ್ಗ ಬದಲಾವಣೆ ಮತ್ತು ನಿರ್ಬಂಧಗಳನ್ನು ವಿಧಿಸುವ ಸಾಧ್ಯತೆಯಿದೆ.

ಭದ್ರತಾ ವ್ಯವಸ್ಥೆಗಳಿಗೆ ಅನುಕೂಲವಾಗಿರುವ ಪ್ರದೇಶಗಳಲ್ಲಿ ವಾಹನ ಸಂಚಾರ ಎಂದಿನಂತೆ ಮುಂದುವರಿಯಲಿದೆ. ವಿದೇಶಿ ಗಣ್ಯರ ಸಂಚಾರದ ವೇಳೆ ವಾಹನಗಳನ್ನು ತಡೆಯುವ ಅವಧಿ ನಿಗದಿತವಾಗಿರುವುದಿಲ್ಲ. ಭದ್ರತಾ ಪರಿಸ್ಥಿತಿ ಹಾಗೂ ಸ್ಥಳೀಯ ಸ್ಥಿತಿಗತಿಗಳನ್ನು ಆಧರಿಸಿ ಹಂತ ಹಂತವಾಗಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

500ಕ್ಕೂ ಹೆಚ್ಚು ಕ್ಯಾಮೆರಾಗಳಿಂದ ನಿಗಾ

ವಿಮಾನ ನಿಲ್ದಾಣ, ಗಣ್ಯರು ತಂಗುವ ಹೋಟೆಲ್‌ಗಳು, ಭಾರತ ಮಂಟಪ ಹಾಗೂ ಅವರು ಭೇಟಿ ನೀಡುವ ಇತರ ಸ್ಥಳಗಳನ್ನು ಒಳಗೊಂಡಂತೆ ವ್ಯಾಪಕ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ನವದೆಹಲಿ ಪ್ರದೇಶದಲ್ಲಿ ಹೈ-ರೆಸಲ್ಯೂಶನ್‌ ಕ್ಯಾಮೆರಾಗಳು, ಮುಖ ಗುರುತಿಸುವ ವ್ಯವಸ್ಥೆ ಹಾಗೂ ವಾಹನಗಳ ನಂಬರ್‌ ಪ್ಲೇಟ್‌ ಓದುವ ಕ್ಯಾಮೆರಾಗಳು ಸೇರಿದಂತೆ 500ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಮೂಲಕ 24 ಗಂಟೆಯೂ ನಿಗಾ ವಹಿಸಲಾಗುವುದು.

ಶೃಂಗಸಭೆ ನಡೆಯುವ ಸ್ಥಳ ಹಾಗೂ ಗಣ್ಯರು ತಂಗುವ ಹೋಟೆಲ್‌ಗಳಲ್ಲಿ ಪ್ರವೇಶ ನಿಯಂತ್ರಣ, ತಪಾಸಣೆ, ಗುಪ್ತಚರ ಮಾಹಿತಿ ಸಂಗ್ರಹ, ಸಂಚಾರ ನಿರ್ವಹಣೆ ಮತ್ತು ತುರ್ತು ಸ್ಪಂದನಾ ವ್ಯವಸ್ಥೆಗಳನ್ನು ಬಲಪಡಿಸಲಾಗಿದೆ.

35ಕ್ಕೂ ಹೆಚ್ಚು ರಸ್ತೆಗಳಲ್ಲಿ ವ್ಯತ್ಯಯ

ಶೃಂಗಸಭೆಯ ಅವಧಿಯಲ್ಲಿ 35ಕ್ಕೂ ಹೆಚ್ಚು ರಸ್ತೆಗಳಲ್ಲಿ ಸಂಚಾರ ವ್ಯತ್ಯಯ ಉಂಟಾಗಬಹುದು ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ. ಮಥುರಾ ರಸ್ತೆ, ಸರ್ದಾರ್‌ ಪಟೇಲ್‌ ಮಾರ್ಗ, ಶಾಂತಿ ಪಥ, ಜನಪಥ, ಅಶೋಕ ರಸ್ತೆ, ಬರಾಖಂಬ ರಸ್ತೆ, ಟಾಲ್‌ಸ್ಟಾಯ್‌ ಮಾರ್ಗ, ಆಫ್ರಿಕಾ ಅವೆನ್ಯೂ ರಸ್ತೆ, ನೀತಿ ಮಾರ್ಗ, ಪಂಚಶೀಲ ಮಾರ್ಗ ಹಾಗೂ ಎಪಿಜೆ ಅಬ್ದುಲ್‌ ಕಲಾಂ ರಸ್ತೆ ಪ್ರಮುಖವಾಗಿ ಬಾಧಿತವಾಗುವ ಸಾಧ್ಯತೆಯಿದೆ.

ನೋಯ್ಡಾ–ಮಧ್ಯ ದೆಹಲಿ, ಪೂರ್ವ ದೆಹಲಿ–ಮಧ್ಯ ದೆಹಲಿ ಹಾಗೂ ದ್ವಾರಕಾ ಮತ್ತು ಪಶ್ಚಿಮ ದೆಹಲಿಯಿಂದ ಧೌಲಾ ಕುವಾನ್‌, ವಿಮಾನ ನಿಲ್ದಾಣ ಮತ್ತು ದಕ್ಷಿಣ ದೆಹಲಿಯತ್ತ ಸಂಚರಿಸುವವರಿಗೆ ಹೆಚ್ಚಿನ ಪರಿಣಾಮ ಉಂಟಾಗಬಹುದು. ಸಾಕೇತ್‌ನಲ್ಲಿರುವ ಹೋಟೆಲ್‌ ಮತ್ತು ಮಧ್ಯ ದೆಹಲಿಯ ನಡುವಿನ ಈಜಿಪ್ಟ್‌ ನಿಯೋಗದ ಸಂಚಾರದಿಂದ ದಕ್ಷಿಣ ದೆಹಲಿಯ ರಸ್ತೆಗಳಲ್ಲಿ, ವಿಶೇಷವಾಗಿ ಪೀಕ್‌ ಅವರ್‌ಗಳಲ್ಲಿ, ವಾಹನ ದಟ್ಟಣೆ ಹೆಚ್ಚುವ ಸಾಧ್ಯತೆಯಿದೆ.

ದಿನಕ್ಕೆ 70–80 ಬಾರಿ ಗಣ್ಯರ ಸಂಚಾರ

ಶೃಂಗಸಭೆಯ ಹಿನ್ನೆಲೆಯಲ್ಲಿ ಪ್ರತಿದಿನವೂ ಹಲವು ಬಾರಿ ಉನ್ನತ ಭದ್ರತೆಯೊಂದಿಗೆ ಗಣ್ಯರ ಸಂಚಾರ ನಡೆಸಬೇಕಾಗುತ್ತದೆ. ನಾಯಕರು ವಿಮಾನ ನಿಲ್ದಾಣ, ಹೋಟೆಲ್‌, ಶೃಂಗಸಭೆಯ ಸ್ಥಳ ಹಾಗೂ ದ್ವಿಪಕ್ಷೀಯ ಸಭೆಗಳು ಮತ್ತು ಇತರ ಕಾರ್ಯಕ್ರಮಗಳ ನಡುವೆ ಸಂಚರಿಸಬೇಕಾಗಿರುವುದರಿಂದ ಒಂದೇ ದಿನದಲ್ಲಿ ನಗರದಾದ್ಯಂತ 70–80 ಅಥವಾ ಅದಕ್ಕಿಂತ ಹೆಚ್ಚು ಬಾರಿ ಉನ್ನತ ಭದ್ರತಾ ಸಂಚಾರ ವ್ಯವಸ್ಥೆ ಮಾಡಬೇಕಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿ ಸಂಚಾರಕ್ಕೂ ಪ್ರತ್ಯೇಕ ಸಂಚಾರ ನಿಯಂತ್ರಣ, ಪ್ರವೇಶ ನಿರ್ಬಂಧ ಮತ್ತು ಮಾರ್ಗ ಸಮನ್ವಯದ ಅಗತ್ಯವಿರುವುದರಿಂದ ಸಾಮಾನ್ಯ ವಿಐಪಿ ಭೇಟಿಗಿಂತ ಈ ಬಾರಿ ಸಾರ್ವಜನಿಕರ ಸಂಚಾರದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿದೆ.

ಶೃಂಗಸಭೆಯ ಸಂಚಾರ ವ್ಯವಸ್ಥೆಗಾಗಿ ಸುಮಾರು 4,800 ಸಂಚಾರ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಮೆಟ್ರೊ, ಬಸ್‌ ಸೇವೆ ಎಂದಿನಂತೆ

ದೆಹಲಿ ಮೆಟ್ರೊ ಸೇವೆ ಮುಂದುವರಿಯಲಿದೆ. ಆದರೆ ಭದ್ರತಾ ಕಾರಣಗಳಿಂದ ಅಗತ್ಯವಿದ್ದಲ್ಲಿ ಕೆಲವು ನಿಲ್ದಾಣಗಳು ಅಥವಾ ಪ್ರವೇಶ–ನಿರ್ಗಮನ ದ್ವಾರಗಳಲ್ಲಿ ತಾತ್ಕಾಲಿಕ ನಿರ್ಬಂಧ ವಿಧಿಸಬಹುದು. ಡಿಟಿಸಿ ಹಾಗೂ ನಗರ ಬಸ್‌ ಸೇವೆಗಳು ಮುಂದುವರಿಯಲಿದ್ದು, ಬಾಧಿತ ಪ್ರದೇಶಗಳ ಮೂಲಕ ಸಾಗುವ ಮಾರ್ಗಗಳನ್ನು ಬದಲಾಯಿಸುವ, ಮೊಟಕುಗೊಳಿಸುವ ಅಥವಾ ನಿಯಂತ್ರಿಸುವ ಸಾಧ್ಯತೆಯಿದೆ.

ಆಟೋ, ಟ್ಯಾಕ್ಸಿ ಮತ್ತು ಆ್ಯಪ್‌ ಆಧಾರಿತ ಕ್ಯಾಬ್‌ ಸೇವೆಗಳು ಸಹ ಮುಂದುವರಿಯಲಿವೆ. ಆದರೆ ನಿರ್ಬಂಧಿತ ಪ್ರದೇಶಗಳಿಗೆ ಅವುಗಳ ಪ್ರವೇಶ ಹಾಗೂ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಅಥವಾ ಇಳಿಸುವ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರಬಹುದು.

ಪರೀಕ್ಷಾರ್ಥಿಗಳು, ರೋಗಿಗಳಿಗೆ ಸಲಹೆ

ಯುಪಿಎಸ್‌ಸಿ, ಎನ್‌ಡಿಎ, ಸಿಡಿಎಸ್‌ ಸೇರಿದಂತೆ ವಿವಿಧ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರ ಮತ್ತು ಮಾರ್ಗವನ್ನು ಮೊದಲೇ ಪರಿಶೀಲಿಸಿಕೊಳ್ಳುವಂತೆ ಪೊಲೀಸರು ಸಲಹೆ ನೀಡಿದ್ದಾರೆ. ಪ್ರವೇಶ ಪತ್ರ ಹಾಗೂ ಗುರುತಿನ ಚೀಟಿ ಕೊಂಡೊಯ್ಯುವುದರ ಜೊತೆಗೆ ಸಾಕಷ್ಟು ಮುಂಚಿತವಾಗಿ ಮನೆಯಿಂದ ಹೊರಡುವಂತೆ ಸೂಚಿಸಲಾಗಿದೆ.

ಆಸ್ಪತ್ರೆಗಳಿಗೆ ನಿಗದಿತ ಭೇಟಿಗಾಗಿ ತೆರಳುವವರು ಹೆಚ್ಚಿನ ಸಮಯವನ್ನು ಮೀಸಲಿಡಬೇಕು ಹಾಗೂ ಪ್ರಯಾಣದ ಮಾರ್ಗವನ್ನು ಮುಂಚಿತವಾಗಿ ಪರಿಶೀಲಿಸಿಕೊಳ್ಳಬೇಕು. ತುರ್ತು ವೈದ್ಯಕೀಯ ಪರಿಸ್ಥಿತಿ ಎದುರಾದರೆ ತಕ್ಷಣವೇ ಸಮೀಪದ ಸಂಚಾರ ಪೊಲೀಸ್‌ ಸಿಬ್ಬಂದಿಗೆ ಮಾಹಿತಿ ನೀಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

RELATED ARTICLES
spot_img

Latest News