Homeರಾಷ್ಟ್ರೀಯಭಾರತಕ್ಕೆ ಆಗಮಿಸಿದ ರಷ್ಯಾದ ಅಧ್ಯಕ್ಷ ಪುಟಿನ್‌, ಮೋದಿ ಜತೆ ಮಹತ್ವದ ಚರ್ಚೆ

ಭಾರತಕ್ಕೆ ಆಗಮಿಸಿದ ರಷ್ಯಾದ ಅಧ್ಯಕ್ಷ ಪುಟಿನ್‌, ಮೋದಿ ಜತೆ ಮಹತ್ವದ ಚರ್ಚೆ

ನವದೆಹಲಿ, ಸೆ.11 (ಪಿಟಿಐ): ದ್ವಿಪಕ್ಷೀಯ ವ್ಯಾಪಾರ, ಹೂಡಿಕೆ ಮತ್ತು ಇಂಧನ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಹಾಗೂ ಬ್ರಿಕ್ಸ್‌ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರು ಇಂದು ಭಾರತಕ್ಕೆ ಮೂರು ದಿನಗಳ ಭೇಟಿಯನ್ನು ಆರಂಭಿಸಿದರು.

ಪುಟಿನ್‌ ಅವರೊಂದಿಗೆ ಉನ್ನತ ಮಟ್ಟದ ನಿಯೋಗವೂ ಆಗಮಿಸಿದೆ. 2022ರ ಫೆಬ್ರವರಿಯಲ್ಲಿ ಉಕ್ರೇನ್‌ ಸಂಘರ್ಷ ಆರಂಭವಾದ ಬಳಿಕ ರಷ್ಯಾದ ಹೊರಗೆ ನಡೆಯುತ್ತಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ಅವರು ವೈಯಕ್ತಿಕವಾಗಿ ಭಾಗವಹಿಸುತ್ತಿರುವುದು ಇದೇ ಮೊದಲು.

ಭಾರತದ ಆತಿಥ್ಯದಲ್ಲಿ ಶನಿವಾರದಿಂದ ಎರಡು ದಿನಗಳ ಕಾಲ ನಡೆಯಲಿರುವ ಬ್ರಿಕ್ಸ್‌ ಶೃಂಗಸಭೆಯಲ್ಲಿ ಆಹಾರ, ಇಂಧನ, ಆರೋಗ್ಯ, ವಿಪತ್ತು ನಿರ್ವಹಣೆ ಹಾಗೂ ಪ್ರಮುಖ ಪೂರೈಕೆ ಸರಪಳಿಗಳಲ್ಲಿ ಸಾಮೂಹಿಕ ಸ್ಥಿತಿಸ್ಥಾಪಕತ್ವ ಹೆಚ್ಚಿಸುವ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ. ಭೌಗೋಳಿಕ-ರಾಜಕೀಯ ಪರಿಸ್ಥಿತಿ ಬಿಗಡಾಯಿಸಿರುವ ಸಂದರ್ಭದಲ್ಲಿ ಬ್ರಿಕ್ಸ್‌ ಅನ್ನು ಪರಿಣಾಮಕಾರಿ ಜಾಗತಿಕ ವೇದಿಕೆಯಾಗಿ ಬಿಂಬಿಸಲು ನವದೆಹಲಿ ಮುಂದಾಗಿದೆ.

ರಷ್ಯಾ-ಉಕ್ರೇನ್‌ ಸಂಘರ್ಷ, ಪಶ್ಚಿಮ ಏಷ್ಯಾದ ಬಿಕ್ಕಟ್ಟು, ಹಾರ್ಮುಜ್‌ ಜಲಸಂಧಿಯ ದಿಗ್ಬಂಧನ ಹಾಗೂ ಅಮೆರಿಕದ ಟ್ರಂಪ್‌ ಆಡಳಿತದ ವ್ಯಾಪಾರ ಮತ್ತು ಸುಂಕ ನೀತಿಗಳ ಪರಿಣಾಮದಿಂದ ಜಾಗತಿಕ ಆರ್ಥಿಕತೆ ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಈ ಶೃಂಗಸಭೆ ನಡೆಯುತ್ತಿದೆ.

ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌, ಇರಾನ್‌ ಅಧ್ಯಕ್ಷ ಮಸೂದ್‌ ಪೆಜೆಶ್ಕಿಯನ್‌, ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್‌ ರಾಮಫೋಸಾ, ಇಂಡೋನೇಷ್ಯಾ ಅಧ್ಯಕ್ಷ ಪ್ರಬೊವೊ ಸುಬಿಯಾಂಟೊ, ಈಜಿಪ್ಟ್‌ ಅಧ್ಯಕ್ಷ ಅಬ್ದೆಲ್‌ ಫತ್ತಾಹ್‌ ಎಲ್‌-ಸಿಸಿ, ಮಲೇಷ್ಯಾ ಪ್ರಧಾನಿ ಅನ್ವರ್‌ ಇಬ್ರಾಹಿಂ, ಅಬುಧಾಬಿ ಕ್ರೌನ್‌ ಪ್ರಿನ್ಸ್‌ ಮೊಹಮ್ಮದ್‌ ಬಿನ್‌ ಜಾಯೆದ್‌ ಅಲ್‌ ನಹ್ಯಾನ್‌, ಇಥಿಯೋಪಿಯಾ ಪ್ರಧಾನಿ ಅಬಿಯ್‌ ಅಹ್ಮದ್‌ ಅಲಿ ಹಾಗೂ ವಿಯೆಟ್ನಾಂ ಪ್ರಧಾನಿ ಲೆ ಮಿನ್‌ ಹಂಗ್‌ ಸೇರಿದಂತೆ ಹಲವು ಪ್ರಮುಖ ನಾಯಕರು ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ.

ವಿಮಾನ ನಿಲ್ದಾಣದಲ್ಲಿ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೆ.ವಿ. ಸಿಂಗ್‌ ಅವರು ಪುಟಿನ್‌ ಅವರನ್ನು ಸ್ವಾಗತಿಸಿದರು. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌ ಅವರು ರಷ್ಯಾ ಮತ್ತು ಭಾರತವು ವಿಶೇಷ ಹಾಗೂ ವಿಶೇಷಾಧಿಕಾರಯುಕ್ತ ಕಾರ್ಯತಂತ್ರದ ಪಾಲುದಾರಿಕೆಯ ಆಧಾರದ ಮೇಲೆ ಬಹುಮುಖಿ ಮತ್ತು ದೀರ್ಘಕಾಲೀನ ಸಂಬಂಧ ಹೊಂದಿವೆ ಎಂದು ಹೇಳಿದರು.

ಮೋದಿ–ಪುಟಿನ್‌ ಮಾತುಕತೆ

ಪುಟಿನ್‌ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ ವ್ಯಾಪಕ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ರಕ್ಷಣೆ, ಇಂಧನ, ತಂತ್ರಜ್ಞಾನ, ಔಷಧೀಯ ಕ್ಷೇತ್ರ ಹಾಗೂ ಜನರ ನಡುವಿನ ವಿನಿಮಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಣೆಯ ಕುರಿತು ಚರ್ಚೆ ನಡೆಯುವ ನಿರೀಕ್ಷೆಯಿದೆ.

ಬ್ರಹ್ಮೋಸ್‌ ಕ್ಷಿಪಣಿಗಳ ಉನ್ನತೀಕರಣದ ಕುರಿತು ಉಭಯ ದೇಶಗಳು ಪರಿಶೀಲನೆ ನಡೆಸುತ್ತಿವೆ ಎಂದು ಕ್ರೆಮ್ಲಿನ್‌ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ತಿಳಿಸಿದ್ದಾರೆ. ಬಾಕಿ ಇರುವ ಎಸ್‌-400 ವ್ಯವಸ್ಥೆಗಳ ಪೂರೈಕೆಯನ್ನು ಪೂರ್ಣಗೊಳಿಸುವುದರ ಜೊತೆಗೆ ಪ್ರಸ್ತಾವಿತ ಸು-57 ಯುದ್ಧ ವಿಮಾನಗಳ ಪೂರೈಕೆ ಬಗ್ಗೆಯೂ ಚರ್ಚಿಸಲು ಮಾಸ್ಕೋ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

ಭಾರತದ ಹೊಸ ನಾಗರಿಕ ಪರಮಾಣು ರಿಯಾಕ್ಟರ್‌ಗಳನ್ನು ಸ್ಥಾಪಿಸುವ ಯೋಜನೆಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಎರಡೂ ದೇಶಗಳು ಮುಂದಾಗುತ್ತಿವೆ. ಉಭಯ ರಾಷ್ಟ್ರಗಳ ನಡುವಿನ ಇಂಧನ ಸಹಕಾರವೂ ಬಲವಾಗಿದೆ ಎಂದು ರಷ್ಯಾದ ಅಧಿಕಾರಿ ತಿಳಿಸಿದ್ದಾರೆ.

ಉಕ್ರೇನ್‌ ಸಂಘರ್ಷವೂ ಚರ್ಚೆ

ಮೋದಿ ಮತ್ತು ಪುಟಿನ್‌ ಅವರು ಕಳೆದ ವಾರ ಬಿಷ್ಕೆಕ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ ಭೇಟಿಯಾಗಿದ್ದರು. ಆಗ ಪ್ರಧಾನಿ ಮೋದಿ ಅವರು ಸಂಘರ್ಷವನ್ನು ತಕ್ಷಣವೇ ಅಂತ್ಯಗೊಳಿಸುವಂತೆ ಕರೆ ನೀಡಿದ್ದರು. ಅಂತ್ಯವಿಲ್ಲದ ಯುದ್ಧದ ಹಾದಿಯಿಂದ ಸಂಘರ್ಷದ ಅಂತ್ಯದತ್ತ ಸಾಗುವಂತೆ ರಷ್ಯಾ ನಾಯಕನಿಗೆ ಮನವಿ ಮಾಡಿದ್ದರು.

ಮುಂದಿನ ಮಾತುಕತೆಯಲ್ಲೂ ಉಕ್ರೇನ್‌ ಸಂಘರ್ಷ ಹಾಗೂ ಶಾಂತಿಯತ್ತ ಸಾಗುವ ಮಾರ್ಗಸೂಚಿ ಪ್ರಮುಖವಾಗಿ ಚರ್ಚೆಯಾಗುವ ನಿರೀಕ್ಷೆಯಿದೆ. ಸಂಘರ್ಷಕ್ಕೆ ಪರಿಹಾರ ಕಂಡುಕೊಳ್ಳಲು ಅಮೆರಿಕದ ಟ್ರಂಪ್‌ ಆಡಳಿತ ಸೇರಿದಂತೆ ಹಲವು ದೇಶಗಳು ಇತ್ತೀಚಿನ ದಿನಗಳಲ್ಲಿ ಹೊಸ ಪ್ರಯತ್ನಗಳನ್ನು ನಡೆಸಿವೆ.

RELATED ARTICLES
spot_img

Latest News