Homeರಾಷ್ಟ್ರೀಯತಮಿಳುನಾಡು : ಚರ್ಚ್‌ ಮೇಲ್ಛಾವಣಿ ಕುಸಿದು ಮೂವರ ದುರ್ಮರಣ

ತಮಿಳುನಾಡು : ಚರ್ಚ್‌ ಮೇಲ್ಛಾವಣಿ ಕುಸಿದು ಮೂವರ ದುರ್ಮರಣ

ವೆಲ್ಲೂರು, ಸೆ.11 (ಪಿಟಿಐ): ತಮಿಳುನಾಡಿನ ವೆಲ್ಲೂರು ಜಿಲ್ಲೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಚರ್ಚ್‌ನ ಮೇಲ್ಛಾವಣಿ ಕುಸಿದು ಬಿದ್ದ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟಿದ್ದು, 11 ಮಂದಿ ಗಾಯಗೊಂಡಿದ್ದಾರೆ.ಕಾಟ್ಪಾಡಿ ಸಮೀಪದ ಮಂಡಿ ಕೃಷ್ಣಪುರಂನಲ್ಲಿ ನಿರ್ಮಾಣವಾಗುತ್ತಿದ್ದ ಚರ್ಚ್‌ ಆಫ್‌ ಸೌತ್‌ ಇಂಡಿಯಾ ಕಟ್ಟಡದ ಮೇಲ್ಛಾವಣಿಗೆ ಕಾಂಕ್ರೀಟ್‌ ಹಾಕುವ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಸುಮಾರು 20 ಅಡಿ ಎತ್ತರದಲ್ಲಿದ್ದ ಉಕ್ಕಿನ ಆಧಾರ ರಚನೆ (ಸ್ಕಾಫೋಲ್ಡಿಂಗ್‌) ಏಕಾಏಕಿ ಕುಸಿದು, ಕಾರ್ಮಿಕರು ಭಾರೀ ಕಾಂಕ್ರೀಟ್‌ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಗಾಯಗೊಂಡ 11 ಕಾರ್ಮಿಕರನ್ನು ಆಂಬ್ಯುಲೆನ್ಸ್‌ಗಳ ಮೂಲಕ ವೆಲ್ಲೂರು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆ, ಕ್ರಿಶ್ಚಿಯನ್‌ ಮೆಡಿಕಲ್‌ ಕಾಲೇಜು ಆಸ್ಪತ್ರೆ ಹಾಗೂ ನೆರೆಯ ಆಂಧ್ರಪ್ರದೇಶದ ಚಿತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಕನಿಷ್ಠ ಎಂಟು ಮಂದಿ ಸ್ಥಿತಿ ಸ್ಥಿರವಾಗಿದೆ ಎಂದು ವೆಲ್ಲೂರು ಜಿಲ್ಲಾಧಿಕಾರಿ ಪಿ.ಎಸ್‌. ಲೀಲಾ ಅಲೆಕ್ಸ್‌ ತಿಳಿಸಿದ್ದಾರೆ.

ಸಿಲುಕಿದ್ದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯಲ್ಲಿ ಜಿಲ್ಲಾಡಳಿತ, ಪೊಲೀಸ್‌ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಪಾಲ್ಗೊಂಡಿದ್ದು, ಅರಕ್ಕೋಣಂನ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್‌) ತಂಡವೂ ಕಾರ್ಯಾಚರಣೆಗೆ ಕೈಜೋಡಿಸಿದೆ.

ತನಿಖೆಗೆ ಸಮಿತಿ: ನಿರ್ಮಾಣ ವೈಫಲ್ಯಕ್ಕೆ ನಿಖರ ಕಾರಣ ಪತ್ತೆಹಚ್ಚಲು ಆಡಳಿತವು ಸಮಿತಿಯೊಂದನ್ನು ರಚಿಸಲಿದೆ. ಅಲ್ಲದೆ, ಚರ್ಚ್‌ ನಿರ್ಮಾಣಕ್ಕೆ ಬಿಲ್ಡರ್‌ ಅಗತ್ಯವಿರುವ ಎಲ್ಲ ಅನುಮೋದನೆಗಳು ಹಾಗೂ ಕಟ್ಟಡ ಪರವಾನಗಿಗಳನ್ನು ಪಡೆದಿದ್ದಾರೆಯೇ ಎಂಬುದನ್ನೂ ಸಮಿತಿ ಪರಿಶೀಲಿಸಲಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

RELATED ARTICLES
spot_img

Latest News