ಬೆಂಗಳೂರು, ಸೆ.11- ನಗರದಲ್ಲಿ ಬಾಡಿಗೆಗೆ ಗಣಪ ಮೂರ್ತಿಗಳು ಸಿಗುತ್ತಿರುವುದು ಈ ಬಾರಿಯ ಗಣೇಶೋತ್ಸವದ ವಿಶೇಷವಾಗಿದೆ. ಗಣೇಶ ಹಬ್ಬಕ್ಕೆ ವೆರೈಟಿ ವೆರೈಟಿ ಗಣೇಶ ಮೂರ್ತಿಗಳು ಮಾರುಕಟ್ಟೆಗೆ ಲಗ್ಗೆ ಇಡುವುದು ಸಾಮಾನ್ಯ. ಸಣ್ಣ ಗಾತ್ರದ ಗಣಪನಿಂದ ಹಿಡಿದು ಬೃಹತ್ ಗಾತ್ರದ ಗಣೇಶ ಮೂರ್ತಿವರೆಗೆ ಎಲ್ಲ ಮಾದರಿಗಳ ಮೂರ್ತಿಗಳು ಮಾರಾಟಕ್ಕೆ ಸಿದ್ಧವಾಗಿವೆ. ಆದರೆ, ಈ ಬಾರಿಯ ಹಬ್ಬದ ಮಾರುಕಟ್ಟೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿರುವುದು ಮಾತ್ರ ಬಾಡಿಗೆ ಗಣಪ.
ಅರೇ… ಗಣೇಶನನ್ನೂ ಬಾಡಿಗೆಗೆ ಕೊಡ್ತಾರಾ ಎಂಬ ಅನುಮಾನ ಮೂಡಬಹುದು. ಆದರೆ, ಬೃಹತ್ ಗಾತ್ರದ ಫೈಬರ್ ಗಣೇಶ ಮೂರ್ತಿಗಳನ್ನು ವ್ಯಾಪಾರಿಗಳು ಬಾಡಿಗೆಗೆ ನೀಡುತ್ತಿದ್ದು, ಸಾರ್ವಜನಿಕ ಗಣೇಶೋತ್ಸವ ಆಚರಿಸುವ ಯುವಕರ ತಂಡಗಳು ಹಾಗೂ ಸಂಘ-ಸಂಸ್ಥೆಗಳಿಂದ ಇದಕ್ಕೆ ಬೇಡಿಕೆ ವ್ಯಕ್ತವಾಗುತ್ತಿದೆ.
ನಗರದಾದ್ಯಂತ ಈಗಾಗಲೇ ಹಬ್ಬದ ಸಂಭ್ರಮ ಮನೆ ಮಾಡಿದೆ. ಯಾವುದೇ ಭೇದ-ಭಾವವಿಲ್ಲದೆ ಎಲ್ಲರೂ ಒಟ್ಟಾಗಿ ವಿಜೃಂಭಣೆಯಿಂದ ಆಚರಿಸುವ ಗೌರಿ-ಗಣೇಶ ಹಬ್ಬಕ್ಕಾಗಿ ಜನರು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ರಸ್ತೆ ರಸ್ತೆಗಳಲ್ಲಿ, ಬಡಾವಣೆಗಳಲ್ಲಿ ಹಾಗೂ ಮನೆ ಮನೆಗಳಲ್ಲಿ ಗೌರಿ-ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲು ಸಿದ್ಧತೆ ನಡೆಯುತ್ತಿದೆ.ಹೀಗಾಗಿ ನಗರದ ಮಾರುಕಟ್ಟೆಗಳಲ್ಲಿ ವಿವಿಧ ವಿನ್ಯಾಸ, ಗಾತ್ರ ಹಾಗೂ ರೂಪದ ಗಣೇಶ ಮೂರ್ತಿಗಳು ಲಗ್ಗೆ ಇಟ್ಟಿವೆ.
ಸುಮಾರು 100 ರೂಪಾಯಿಯಿಂದ ಆರಂಭವಾಗಿ ಲಕ್ಷಾಂತರ ರೂಪಾಯಿ ಮೌಲ್ಯದವರೆಗಿನ ಗಣೇಶ ಮೂರ್ತಿಗಳು ಮಾರಾಟಕ್ಕೆ ಲಭ್ಯವಿದ್ದು, ದುಬಾರಿ ಹಾಗೂ ವಿಶೇಷ ವಿನ್ಯಾಸದ ಮೂರ್ತಿಗಳಿಗೆ ಹಬ್ಬಕ್ಕೂ ಮುನ್ನವೇ ಬುಕ್ಕಿಂಗ್ ಕೂಡ ನಡೆಯುತ್ತಿದೆ.
ಪರಿಸರ ಮಾಲಿನ್ಯ ಉಂಟುಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಓಪಿ) ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಹಾಗೂ ವಿಸರ್ಜನೆಗೆ ನಿರ್ಬಂಧ ಇರುವ ಹಿನ್ನೆಲೆಯಲ್ಲಿ, ಜನರು ಹೆಚ್ಚಾಗಿ ಮಣ್ಣಿನ ಗಣೇಶ ಮೂರ್ತಿಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಸಾರ್ವಜನಿಕ ಗಣೇಶೋತ್ಸವದ ವೇಳೆ ಬೃಹತ್ ಗಾತ್ರದ ಗಣಪನನ್ನು ಪ್ರತಿಷ್ಠಾಪಿಸಬೇಕು ಎಂಬ ಆಸೆ ಹಲವರಿಗೆ ಇರುತ್ತದೆ. ಇದೇ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕೆಲ ವ್ಯಾಪಾರಿಗಳು ಬೃಹತ್ ಫೈಬರ್ ಗಣೇಶ ಮೂರ್ತಿಗಳನ್ನು ಬಾಡಿಗೆಗೆ ನೀಡುವ ಹೊಸ ವ್ಯವಸ್ಥೆ ಆರಂಭಿಸಿದ್ದಾರೆ.
ಫೈಬರ್ನಿಂದ ತಯಾರಿಸಲಾದ ಬೃಹತ್ ಗಣೇಶ ಮೂರ್ತಿಯನ್ನು ಪ್ರತಿದಿನಕ್ಕೆ ಸುಮಾರು 30 ಸಾವಿರ ರೂಪಾಯಿ ಬಾಡಿಗೆಗೆ ನೀಡಲಾಗುತ್ತಿದೆ. ಒಂದು ದಿನ, ಮೂರು ದಿನ ಅಥವಾ ಐದು ದಿನಗಳ ಕಾಲ ಅಗತ್ಯಕ್ಕೆ ಅನುಗುಣವಾಗಿ ಮೂರ್ತಿಯನ್ನು ಬಾಡಿಗೆಗೆ ಪಡೆದುಕೊಳ್ಳಬಹುದು. ಹಬ್ಬ ಹಾಗೂ ಪೂಜೆ ಮುಗಿದ ಬಳಿಕ ಮೂರ್ತಿಯನ್ನು ಮತ್ತೆ ವ್ಯಾಪಾರಿಗಳಿಗೆ ವಾಪಸ್ ನೀಡಬೇಕಾಗುತ್ತದೆ.
ಈ ವ್ಯವಸ್ಥೆಯ ಮತ್ತೊಂದು ವಿಶೇಷವೆಂದರೆ, ಬೃಹತ್ ಫೈಬರ್ ಗಣೇಶ ಮೂರ್ತಿಯೊಂದಿಗೆ ಪೂಜಾ ವಿಧಿವಿಧಾನಗಳಿಗಾಗಿ ಮಣ್ಣಿನ ಗಣೇಶ ಮೂರ್ತಿಯನ್ನೂ ಉಚಿತವಾಗಿ ನೀಡಲಾಗುತ್ತದೆ. ಸಾರ್ವಜನಿಕರು ಮಣ್ಣಿನ ಗಣಪನಿಗೆ ಪೂಜೆ ಸಲ್ಲಿಸಿ, ಹಬ್ಬದ ಅಂತ್ಯದಲ್ಲಿ ಅದನ್ನು ಪರಿಸರ ಸ್ನೇಹಿಯಾಗಿ ವಿಸರ್ಜಿಸಬಹುದು.
ಈ ಕುರಿತು ಗಣೇಶ ಮೂರ್ತಿ ವ್ಯಾಪಾರಿ ಶ್ರೀನಿವಾಸ್ ಮಾತನಾಡಿ, ಯುವಕರ ತಂಡಗಳು ಮತ್ತು ಸಂಘಟನೆಗಳಿಗೆ ಬೃಹತ್ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಆಸೆ ಇರುತ್ತದೆ. ಆದರೆ, ಪಿಓಪಿ ಮೂರ್ತಿಗಳಿಗೆ ಕಾನೂನು ತೊಡಕುಗಳಿದ್ದು, ವಿಸರ್ಜನೆಗೂ ನಿರ್ಬಂಧವಿದೆ. ಈ ಹಿನ್ನೆಲೆಯಲ್ಲಿ ಫೈಬರ್ನಿಂದ ತಯಾರಿಸಿದ ಬೃಹತ್ ಗಣೇಶ ಮೂರ್ತಿಗಳನ್ನು ಬಾಡಿಗೆಗೆ ನೀಡುತ್ತಿದ್ದೇವೆ. ಪ್ರತಿದಿನಕ್ಕೆ 30 ಸಾವಿರ ರೂಪಾಯಿ ಬಾಡಿಗೆ ನಿಗದಿ ಮಾಡಿದ್ದೇವೆ. ಮೂರ್ತಿಯನ್ನು ತೆಗೆದುಕೊಂಡು ಹೋಗುವಾಗ ಮುಂಗಡ ಹಣ ಪಾವತಿಸಬೇಕು. ಹಬ್ಬ ಮುಗಿದ ನಂತರ ಮೂರ್ತಿಯನ್ನು ವಾಪಸ್ ನೀಡಿದರೆ, ಬಾಡಿಗೆ ಮೊತ್ತವನ್ನು ಕಡಿತಗೊಳಿಸಿ ಉಳಿದ ಮುಂಗಡ ಹಣವನ್ನು ಹಿಂದಿರುಗಿಸಲಾಗುತ್ತದೆ ಎಂದು ತಿಳಿಸಿದರು.
ಒಟ್ಟಾರೆ, ಪರಿಸರ ಸ್ನೇಹಿ ಹಬ್ಬ ಆಚರಣೆಯ ಜೊತೆಗೆ ಬೃಹತ್ ಗಣೇಶ ಪ್ರತಿಷ್ಠಾಪಿಸುವ ಸಂಭ್ರಮಕ್ಕೂ ಅವಕಾಶ ಕಲ್ಪಿಸಿರುವ ಈ ಬಾಡಿಗೆ ಗಣಪ ಪರಿಕಲ್ಪನೆ ಈ ಬಾರಿಯ ಗೌರಿ-ಗಣೇಶ ಹಬ್ಬದ ಮಾರುಕಟ್ಟೆಯಲ್ಲಿ ಹೊಸ ಆಕರ್ಷಣೆಯಾಗಿ ಪರಿಣಮಿಸಿದೆ.
