Homeರಾಜ್ಯಗೌರಿ-ಗಣೇಶ ಹಬ್ಬಕ್ಕೂ ಮುನ್ನ ಕುಸಿದ ಚಿನ್ನ -ಬೆಳ್ಳಿ ದರ

ಗೌರಿ-ಗಣೇಶ ಹಬ್ಬಕ್ಕೂ ಮುನ್ನ ಕುಸಿದ ಚಿನ್ನ -ಬೆಳ್ಳಿ ದರ

ಬೆಂಗಳೂರು, ಸೆ.11: ಗೌರಿ–ಗಣೇಶ ಹಬ್ಬಕ್ಕೂ ಮುನ್ನ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆಯಾಗಿದೆ. ಒಂದು ಕೆ.ಜಿ. ಬೆಳ್ಳಿ ದರದಲ್ಲಿ 10 ಸಾವಿರ ರೂ. ಕುಸಿತವಾಗಿದ್ದರೆ, ಚಿನ್ನದ ದರ ಒಂದು ಗ್ರಾಂಗೆ 262 ರೂ.ವರೆಗೆ ಇಳಿಕೆಯಾಗಿದ್ದು, ಗ್ರಾಹಕರಿಗೆ ಕೊಂಚ ಸಮಾಧಾನ ತಂದಿದೆ.

ಕಳೆದ ಎಂಟು–ಹತ್ತು ದಿನಗಳಿಂದ ಏರಿಳಿತ ಕಾಣುತ್ತಿರುವ ಚಿನ್ನ ಮತ್ತು ಬೆಳ್ಳಿ ದರಗಳು ಮತ್ತೆ ಕುಸಿದಿವೆ. ಆಗಸ್ಟ್‌ನಲ್ಲಿ ಏರಿಳಿತ ಕಂಡಿದ್ದರೂ, ಸೆಪ್ಟೆಂಬರ್‌ನಲ್ಲಿ ಚಿನ್ನ–ಬೆಳ್ಳಿ ದರಗಳು ಹೆಚ್ಚಿನ ಮಟ್ಟದಲ್ಲಿಯೇ ಮುಂದುವರಿದಿವೆ.

ಲಭ್ಯ ಮಾರುಕಟ್ಟೆ ಮಾಹಿತಿಯಂತೆ, ನಿನ್ನೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದ 24 ಕ್ಯಾರೆಟ್‌ ಚಿನ್ನದ ದರ ಇಂದು ಒಂದು ಗ್ರಾಂಗೆ 262 ರೂ. ಇಳಿಕೆಯಾಗಿ 15,289 ರೂ. ತಲುಪಿದೆ. 22 ಕ್ಯಾರೆಟ್‌ ಚಿನ್ನದ ದರ ಒಂದು ಗ್ರಾಂಗೆ 240 ರೂ. ಕುಸಿದು 14,015 ರೂ. ಹಾಗೂ 18 ಕ್ಯಾರೆಟ್‌ ಚಿನ್ನದ ದರ 196 ರೂ. ಇಳಿದು 11,467 ರೂ. ಆಗಿದೆ.

ಸೆ.2ರಂದು ಚಿನ್ನದ ದರ ಇಳಿಕೆಯಾಗಿತ್ತು. ಬಳಿಕ ಸೆ.3 ಮತ್ತು 4ರಂದು ಅಲ್ಪ ಏರಿಕೆ ಕಂಡಿತ್ತು. ನಂತರ ಸತತ ಮೂರು ದಿನ ಇಳಿಕೆಯಾಗಿದ್ದ ದರ ನಿನ್ನೆ ಮತ್ತೆ ಏರಿಕೆಯಾಗಿತ್ತು. ಇದೀಗ ಇಂದು ಮತ್ತೊಮ್ಮೆ ಕುಸಿತ ಕಂಡಿದೆ.

ಬೆಳ್ಳಿ ದರದಲ್ಲೂ ಭಾರಿ ಇಳಿಕೆ

ಚಿನ್ನದಂತೆ ಬೆಳ್ಳಿ ದರವೂ ನಿರಂತರ ಏರಿಳಿತ ಕಾಣುತ್ತಿದೆ. ಸೆ.2ರಂದು ಒಂದು ಕೆ.ಜಿ. ಬೆಳ್ಳಿ ದರ 5 ಸಾವಿರ ರೂ. ಇಳಿಕೆಯಾಗಿತ್ತು. ಮರುದಿನವೇ 5 ಸಾವಿರ ರೂ. ಏರಿಕೆಯಾಗಿ 2.50 ಲಕ್ಷ ರೂ. ತಲುಪಿತ್ತು. ಈ ದರ ಸೆ.9ರವರೆಗೂ ಯಾವುದೇ ಬದಲಾವಣೆಯಿಲ್ಲದೆ ಮುಂದುವರಿದಿತ್ತು.ನಿನ್ನೆ ಮತ್ತೆ ಒಂದು ಕೆ.ಜಿ. ಬೆಳ್ಳಿ ದರ 5 ಸಾವಿರ ರೂ. ಏರಿಕೆಯಾಗಿ 2.55 ಲಕ್ಷ ರೂ. ತಲುಪಿತ್ತು. ಇಂದು 10 ಸಾವಿರ ರೂ. ಕುಸಿತ ಕಂಡಿದ್ದು, ಒಂದು ಕೆ.ಜಿ. ಬೆಳ್ಳಿ ದರ 2.45 ಲಕ್ಷ ರೂ. ಆಗಿದೆ.

ಪ್ಲಾಟಿನಮ್‌ ದರವೂ ಇಳಿಕೆ

ಚಿನ್ನ ಮತ್ತು ಬೆಳ್ಳಿ ಜತೆಗೆ ಪ್ಲಾಟಿನಮ್‌ ದರದಲ್ಲೂ ಇಳಿಕೆಯಾಗಿದೆ. 10 ಗ್ರಾಂ ಪ್ಲಾಟಿನಮ್‌ ದರ 3,030 ರೂ. ಕುಸಿದು 54,570 ರೂ. ತಲುಪಿದೆ. ಕಳೆದ ಒಂದು ವರ್ಷದಿಂದಲೂ ಚಿನಿವಾರ ಪೇಟೆಯಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ಸ್ಥಿರವಾಗಿರದೆ ಏರಿಳಿತ ಕಾಣುತ್ತಿವೆ. ಇತ್ತೀಚೆಗೆ ದರಗಳಲ್ಲಿ ಇಳಿಕೆ ಕಂಡುಬಂದಿದ್ದರೂ, ಪ್ರಸ್ತುತ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇನ್ನೂ ದುಬಾರಿ ಮಟ್ಟದಲ್ಲಿಯೇ ಇವೆ.

RELATED ARTICLES
spot_img

Latest News