ಉಡುಪಿ,ಸೆ.11- ನ್ಯಾಯಾಲಯದಲ್ಲಿ ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿ ನೀಡಿದ ಆರೋಪದಡಿ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.ಬಂಧಿತರನ್ನು ಬಂಟ್ವಾಳದ ಉಮರ್ ಫಾರೂಕ್ (32) ಹಾಗೂ ಮಂಗಳೂರಿನ ನಿಶಾಂತ್ ಕುಮಾರ್ (24) ಎಂದು ಗುರುತಿಸಲಾಗಿದೆ.
ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ಪ್ರಕರಣವೊಂದರಲ್ಲಿ ನೋಮಾನ್ ಎಂಬಾತನಿಗೆ ಜಾಮೀನು ನೀಡುವ ಸಂದರ್ಭದಲ್ಲಿ ಆರೋಪಿಗಳು ನಕಲಿ ಆಧಾರ್ ಕಾರ್ಡ್ಗಳನ್ನು ಹಾಜರುಪಡಿಸಿದ್ದರು ಎನ್ನಲಾಗಿದೆ.
ಫಾರೂಕ್ ಹಾಗೂ ಪ್ರಶಾಂತ್ ಎಂಬವರ ಆಧಾರ್ ಕಾರ್ಡ್ಗಳಿಗೆ ಕೆ.ಟಿ. ಮೊಹಮ್ಮದ್ ಎಂಬ ವ್ಯಕ್ತಿಯ ಹೆಸರು ಮತ್ತು ವಿಳಾಸವನ್ನು ನಕಲಿಯಾಗಿ ನಮೂದಿಸಿ, ಅವುಗಳನ್ನು ಸೃಷ್ಟಿಸಲಾಗಿತ್ತು. ಬಳಿಕ ತಮ್ಮ ಸ್ವಂತ ಲಾಭಕ್ಕಾಗಿ ಆರೋಪಿಗಳು ಬೇರೊಬ್ಬ ವ್ಯಕ್ತಿಯಂತೆ ನಟಿಸಿ ನಕಲಿ ಆಧಾರ್ ಕಾರ್ಡ್ಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಉಮರ್ ಫಾರೂಕ್ ಹಾಗೂ ನಿಶಾಂತ್ ಕುಮಾರ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
