Homeರಾಜ್ಯವಿದೇಶದಲ್ಲಿ ಬಂಡವಾಳ ಹೂಡಿದರೆ ತಪ್ಪೇನು..? : ಪ್ರಿಯಾಂಕ್‌ ಖರ್ಗೆ ಪ್ರಶ್ನೆ

ವಿದೇಶದಲ್ಲಿ ಬಂಡವಾಳ ಹೂಡಿದರೆ ತಪ್ಪೇನು..? : ಪ್ರಿಯಾಂಕ್‌ ಖರ್ಗೆ ಪ್ರಶ್ನೆ

ಬೆಂಗಳೂರು, ಸೆ.12- ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಗುತ್ತಿಗೆ ದಾರರಿಂದ ಲಂಚ ಪಡೆದಿದ್ದಾರೆ ಎಂಬ ಗಾಳಿ ಸುದ್ದಿಗೆ ಪ್ರತಿಕ್ರಿಯಿಸುವ ಅಗತ್ಯ ಇಲ್ಲ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸತೀಶ್‌ ಜಾರಕಿಹೊಳಿ ವಿದೇಶದಲ್ಲಿ ಕಾನೂನು ಬದ್ಧವಾಗಿ ಹೂಡಿಕೆ ಮಾಡಿದ್ದರೆ ತಪ್ಪೇನು? ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಭಾರತೀಯರು ದೇಶದಲ್ಲಿ ಮತ್ತು ವಿದೇಶದಲ್ಲಿ ಹೂಡಿಕೆ ಮಾಡುವಂತಾಗಬೇಕೆಂದು ಕರೆ ನೀಡಿದ್ದಾರೆ. ಅದೇ ರೀತಿ ಜಾರಕಿ ಹೊಳಿ ವಿದೇಶದಲ್ಲಿ ಹೂಡಿಕೆ ಮಾಡಲು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. ಕಾಂಗೋ ಅಥವಾ ಕೆನಡಾ ಎಲ್ಲಿಯೇ ಆಗಲಿ ಹೂಡಿಕೆ ಮಾಡುವುದರಲ್ಲಿ ತಪ್ಪೇನಿದೆ? ಎಂದು ಪ್ರಶ್ನಿಸಿದರು.

ಇಡಿಯವರು ಅನಗತ್ಯವಾಗಿ ಪತ್ರಿಕಾ ಹೇಳಿಕೆ ನೀಡಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಲಂಚ ಪಡೆದು ವಿದೇಶದಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಆರೋಪ ಮಾಡಿರುವುದರಲ್ಲಿ ಹುರುಳಿಲ್ಲ. ಜಾರಿ ನಿರ್ದೇಶನಾಲಯ ತಾನು ಮಾಡಿದ ಆರೋಪಕ್ಕೆ ದಾಖಲೆ ನೀಡಲಿ ಎಂದು ಸವಾಲು ಹಾಕಿದರು.

ಈ ಹಿಂದೆ ಇದೇ ರೀತಿಯ 100 ಹೇಳಿಕೆಗಳನ್ನು ಬಿಡುಗಡೆ ಮಾಡಿ ಆರೋಪಿಸಿದ್ದಾರೆ. ಅದರಲ್ಲಿ ಶಿಕ್ಷೆಯ ಪ್ರಮಾಣವೆಷ್ಟು? ಇದನ್ನು ರಾಜ್ಯಕೀಯ ಪ್ರೇರಿತವಲ್ಲವೇ? ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಎಷ್ಟು ಬಾರಿ ವಿದೇಶ ಪ್ರವಾಸ ಮಾಡಿದ್ದಾರೆ ಮತ್ತು ಬಂಡವಾಳ ಹೂಡಿಕೆ ಮಾಡಿದ್ದಾರೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹಲವು ಬಾರಿ ಹೇಳಿದ್ದಾರೆ. ನಾವು ನಮ ಪಾಸ್‌‍ ಪೋರ್ಟ್‌ಗಳನ್ನು ನೀಡಲು ಸಿದ್ಧರಿದ್ದೇವೆ. ಬಿಜೆಪಿಯವರು ಪಾಸ್‌‍ಪೋರ್ಟ್‌ಗಳನ್ನು ಪರಿಶೀಲಿಸಲು ಕೊಡುತ್ತಾರೆಯೇ ಎಂದು ಸವಾಲು ಹಾಕಿದರು.

ಹೆದರಿಸುವ ಸಲುವಾಗಿಯೇ ಇಡಿ ಆರೋಪ ಮಾಡುತ್ತಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಎಷ್ಟೆಲ್ಲಾ ಆರೋಪ ಮಾಡಿದ್ದರು. ಈಗ ಅದರಲ್ಲಿ ಯಾವುದೂ ಉಳಿದಿಲ್ಲ. ನ್ಯಾಯಾಲಯ ಎಲ್ಲವನ್ನು ವಜಾ ಮಾಡಿದೆ. ಇದಕ್ಕೆ ಕೇಂದ್ರ ಸರ್ಕಾರ ಅಥವಾ ಬಿಜೆಪಿಯಾಗಲಿ ಕ್ಷಮೆ ಕೇಳಿದೆಯೇ? ಡಿ.ಕೆ.ಶಿವಕುಮಾರ್‌ ಮತ್ತು ಅವರ ಕುಟುಂಬದವರಿಗಾದ ಮಾನಸಿಕ ಹಿಂಸೆ ಹಾಗೂ ಚಾರಿತ್ರ್ಯ ವಧೆಗೆ ಹೊಣೆ ಯಾರು? ಎಂದರು.

ಅತಿ ಭ್ರಷ್ಟ ಎಂದು ಬಿಜೆಪಿಯವರು ಆರೋಪ ಮಾಡಿದ ರಾಜಕಾರಣಿಗಳೆಲ್ಲಾ ಈಗ ಬಿಜೆಪಿಯಲ್ಲಿದ್ದಾರೆ. ಗಂಗಾ ಜಲದಂತೆ ಶುದ್ಧವಾಗಿದ್ದಾರೆಯೇ? ಎಂದು ಲೇವಡಿ ಮಾಡಿದರು.
ನನ್ನ ಮೇಲೂ ಇಡಿ ದಾಳಿಯಾಗುವ ಸಾಧ್ಯತೆ ಇದೆ. ಕೆಪಿಎಸ್‌‍ಸಿ ಹಗರಣದಲ್ಲಿ ಹಿಟ್‌ ಆ್ಯಂಡ್‌ ರನ್‌ ಆರೋಪ ಮಾಡಿದ್ದರು. ನಾವು ಬಿಜೆಪಿಯವರ ಹಗರಣ ಮತ್ತು ವೈಫಲ್ಯಗಳನ್ನು ಪ್ರಶ್ನೆ ಮಾಡುತ್ತೇವೆ ಎಂಬ ಕಾರಣಕ್ಕೆ ಗುರಿಯಾಗಿದ್ದೇವೆ ಎಂದು ಹೇಳಿದರು.

ಕೇಂದ್ರ ತನಿಖಾ ಸಂಸ್ಥೆಗಳು ವಿರೋಧ ಪಕ್ಷದವರಿಗೆ ಕಿರುಕುಳ ನೀಡಲು ಮಾತ್ರ ಸೀಮಿತವಾಗಿದೆ. ರಾಜಕೀಯ ಆರೋಪ ಮಾಡುವುದು, ಚಾರಿತ್ರ್ಯ ಹರಣ ಮಾಡುವುದು ಅವರ ಉದ್ದೇಶವಾಗಿದೆ. ಉಳಿದಂತೆ ಯಾವುದನ್ನೂ ಅವರು ಸಾಬೀತು ಪಡಿಸಿಲ್ಲ ಎಂದರು. ರಾಜ್ಯದಲ್ಲಿ ವಿದ್ಯುತ್‌ ಕಡಿತವಾಗುತ್ತಿಲ್ಲ. ಸಾರ್ವಜನಿಕರು ಆತಂಕಕ್ಕೊಳಗಾಗುವ ಅಗತ್ಯ ಇಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷಾ ವರದಿ ಬಗ್ಗೆ ಮುಖ್ಯಮಂತ್ರಿಯವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ತಮಗೆ ಅದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಲಭ್ಯವಿರುವ ದತ್ತಾಂಶಗಳ ಪರಿಶೀಲನೆ ನಡೆಯುತ್ತಿದೆ ಎಂದು ಹೇಳಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜ್ಞಾನ ಮತ್ತು ಅನುಭವ ಮುಂದಿನ ಪೀಳಿಗೆಗೂ ಅಗತ್ಯ ಇದೆ. ಇನ್ನು ರಾಜಕೀಯ ನಿವೃತ್ತಿ ಬಗ್ಗೆ ಅವರೇ ಖುದ್ದು ನಿರ್ಧಾರ ಮಾಡಬೇಕು ಎಂದರು.

RELATED ARTICLES
spot_img

Latest News