Homeರಾಜ್ಯನಕಲಿ ಔಷಧ ಜಾಲ : ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದ ಎಸ್‌‍ಐಟಿ

ನಕಲಿ ಔಷಧ ಜಾಲ : ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದ ಎಸ್‌‍ಐಟಿ

ಬೆಂಗಳೂರು,ಸೆ.12- ನಕಲಿ ಔಷಧ ಜಾಲದ ಬಗ್ಗೆ ತನಿಖೆ ತೀವ್ರಗೊಳಿಸಿರುವ ವಿಶೇಷ ತನಿಖಾ ದಳ (ಎಸ್‌‍ಐಟಿ) ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ.ನಗರದ ಮಿನರ್ವ ಸರ್ಕಲ್‌ನಲ್ಲಿರುವ ಕೃಪಾ ಹೆಲ್ತ್‌ಕೇರ್‌ನ ಮಾಲೀಕ ವೀರೇಶ್‌ಕುಮಾರ್‌ ಬಂಧಿತ ಆರೋಪಿ. ಈಗಾಗಲೇ ಈ ಪ್ರಕರಣದಲ್ಲಿ ನಾಲ್ವರನ್ನು ಬಂಧಿಸಿದ್ದು, ಈಗ ಬಂಧಿತರ ಸಂಖ್ಯೆ 5ಕ್ಕೆ ಏರಿದೆ.

ನಿನ್ನೆ ಎಸ್‌‍ಐಟಿ ಹರಿಯಾಣ, ಹಿಮಾಚಲಪ್ರದೇಶ, ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ ಸೇರಿದಂತೆ ಆರು ರಾಜ್ಯಗಳ ಹತ್ತು ಕಡೆ ಏಕಕಾಲದಲ್ಲಿ ದಾಳಿ ನಡೆಸಿತ್ತು.
ನಗರದ ಮಿನರ್ವ ಸರ್ಕಲ್‌ ಸಮೀಪವಿರುವ ಕೃಪಾ ಹೆಲ್ತ್‌ಕೇರ್‌ನ ಕಚೇರಿ ಮತ್ತು ಗೋಡೌನ್‌ಗಳ ಮೇಲೆ ಎಸ್‌‍ಐಟಿ ಅಧಿಕಾರಿಗಳು ದಾಳಿ ನಡೆಸಿ, ಪರಿಶೀಲಿಸಿದಾಗ ನಕಲಿ ಔಷಧಿಗಳ ಭಾರೀ ಸಂಗ್ರಹ ಹಾಗೂ ನಕಲಿ ಔಷಧಿಗಳ ಸಾಗಾಣಿಕೆ ಮತ್ತು ವಿತರಣೆ, ಸಂಬಂಧಿಸಿದ ದಾಖಲೆಗಳು, ನಕಲಿ ಬಿಲ್‌ಗಳು ಇನ್ನೂ ಮಹತ್ವದ ದಾಖಲೆಗಳು ಪತ್ತೆಯಾಗಿವೆ.

ವೀರೇಶ್‌ಕುಮಾರ್‌ ಅವರು ಪ್ರಶಾಂತ್‌ ಉದ್ಯಮದ ಪಾಲುದಾರಿಕೆಯನ್ನು ಹೊಂದಿದ್ದರು ಎಂಬ ಮಾಹಿತಿ ಸಹ ಎಸ್‌‍ಐಟಿಗೆ ಲಭಿಸಿದೆ. ಈ ಹಿನ್ನೆಲೆಯಲ್ಲಿ ಎಸ್‌‍ಐಟಿ ದಾಳಿ ನಡೆಸಿದೆ.
ಕೃಪಾ ಹೆಲ್ತ್‌ಕೇರ್‌ ಮೂಲಕ ನಗರದ 90 ಕ್ಕೂ ಹೆಚ್ಚು ಆಸ್ಪತ್ರೆಗಳು, ಕ್ಲಿನಿಕ್‌ಗಳಿಗೆ ನಕಲಿ ಔಷಧಿಗಳನ್ನು ಶೇ.50 ರಷ್ಟು ರಿಯಾಯಿತಿ ದರದಲ್ಲಿ ಪೂರೈಸಲಾಗಿದೆ ಎಂದು ಸಹ ಎಸ್‌‍ಐಟಿಗೆ ತಿಳಿದುಬಂದಿದೆ.

ಈ ನಕಲಿ ಔಷಧಿ ಜಾಲದ ಪ್ರಮುಖ ಆರೋಪಿ ಎಂದು ಹೇಳಲಾಗಿರುವ ಪ್ರಶಾಂತ್‌ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ಆತನನ್ನು ಕರೆತರಲು ಎಲ್ಲಾ ಪ್ರಕ್ರಿಯೆಗಳನ್ನು ಎಸ್‌‍ಐಟಿ ಕೈಗೊಂಡಿದೆ.ನಗರದ ಹೊರವಲಯದ ಸಿ ಕೆ ತಾಂಡ್ಯದ ತೋಟದ ಮನೆಯೊಂದರ ಮೇಲೆ ದಾಳಿ ಮಾಡಿದಾಗ ಈ ನಕಲಿ ಔಷಧಿ ಜಾಲ ಪತ್ತೆಯಾಗಿದೆ.

ಈ ಬಗ್ಗೆ ತಾವರಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈಗಾಗಲೇ ನಾಲ್ವರನ್ನು ಬಂಧಿಸಿ 5 ಕೋಟಿ ರೂ.ಗೆ ಹೆಚ್ಚು ಬೆಲೆ ಬಾಳುವ ನಕಲಿ ಔಷಧಿಗಳು, ಬಿಲ್‌ಗಳು, ಮುಂತಾದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.ಪ್ರಕರಣದ ಗಂಭೀರತೆಯನ್ನು ಅರಿತ ಸರ್ಕಾರ ಹೆಚ್ಚಿನ ತನಿಖೆಗಾಗಿ ಇದನ್ನು ಎಸ್‌‍ಐಟಿಗೆ ವಹಿಸಿದೆ.ಬೆಂಗಳೂರು ನಗರದ ಪಶ್ಚಿಮ ವಲಯದ ಜಂಟಿ ಪೊಲೀಸ್‌‍ ಆಯುಕ್ತ ವಂಶಿಕೃಷ್ಣ ಅವರ ನೇತೃತ್ವದಲ್ಲಿ ಎಸ್‌‍ಐಟಿ ತನಿಖೆ ನಡೆಸುತ್ತಿದೆ.

RELATED ARTICLES
spot_img

Latest News