Homeಬೆಂಗಳೂರುಕಳೆದ 3 ವರ್ಷದಲ್ಲಿ ಬೆಂಗಳೂರಿನಲ್ಲಿ 14,042 ಹಳೆಯ ವಾಹನಗಳು ಗುಜರಿಗೆ

ಕಳೆದ 3 ವರ್ಷದಲ್ಲಿ ಬೆಂಗಳೂರಿನಲ್ಲಿ 14,042 ಹಳೆಯ ವಾಹನಗಳು ಗುಜರಿಗೆ

ಬೆಂಗಳೂರು, ಸೆ.12- ನಗರದಲ್ಲಿ ಹೆಚ್ಚುತ್ತಿರುವ ಹಳೆಯ ವಾಹನಗಳಿಂದ ಉಂಟಾಗುತ್ತಿರುವ ವಾಯುಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ರಾಜ್ಯ ಸಾರಿಗೆ ಇಲಾಖೆ ಜಾರಿಗೆ ತಂದಿರುವ ವಾಹನ ಗುಜರಿ ನೀತಿಯಡಿ ಕಳೆದ ಮೂರು ವರ್ಷಗಳಲ್ಲಿ 14,042 ಹಳೆಯ ವಾಹನಗಳನ್ನು ಗುಜರಿಗೆ ಹಾಕಲಾಗಿದೆ.

ಕಳೆದ 2022ರ ಡಿಸೆಂಬರ್‌ನಲ್ಲಿ ಕೇಂದ್ರದ ಸೂಚೆಯಂತೆ ರಾಜ್ಯದಲ್ಲಿ ವಾಹನ ಗುಜರಿ ನೀತಿ ಜಾರಿಗೆ ಬಂದಿದ್ದು, 2023ರ ಸೆ.1ರಿಂದ 2026ರ ಜು.31ರವರೆಗೆ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್‌ ಕೇಂದ್ರಗಳ ಮೂಲಕ ಒಟ್ಟು 14,042 ವಾಹನಗಳನ್ನು ಗುಜರಿಗೆ ಹಾಕಲಾಗಿದೆ. ಇದರಲ್ಲಿ 9,976 ಖಾಸಗಿ ಹಾಗೂ 3,390 ಸರ್ಕಾರಿ ಹಳೆಯ ವಾಹನಗಳು ಸೇರಿವೆ.

ರಾಜ್ಯದಲ್ಲಿ 15 ವರ್ಷಕ್ಕಿಂತ ಹಳೆಯದಾದ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವ ವ್ಯವಸ್ಥೆ ಜಾರಿಯಲ್ಲಿದೆ. ಅಲ್ಲದೆ, ವಾಹನ ಮಾಲೀಕರು ತಮ್ಮ ಹಳೆಯ ವಾಹನಗಳನ್ನು ಸ್ವಯಂಪ್ರೇರಿತವಾಗಿ ಸ್ಕ್ರ್ಯಾಪ್‌ ಮಾಡಿಸಿಕೊಳ್ಳಲು ಅವಕಾಶವಿದೆ.

ಹಳೆಯ ವಾಹನವನ್ನು ಗುಜರಿಗೆ ಹಾಕಿ ಹೊಸ ವಾಹನ ಖರೀದಿಸುವವರಿಗೆ ಸಾರಿಗೆ ಇಲಾಖೆ ತೆರಿಗೆ ವಿನಾಯಿತಿ ನೀಡುತ್ತಿದೆ. ದ್ವಿಚಕ್ರ ವಾಹನಗಳನ್ನು ಸ್ಕ್ರ್ಯಾಪ್‌ ಮಾಡಿದರೆ 1,000ರಿಂದ 5,000ರವರೆಗೆ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ 10,000ರಿಂದ 50,000ರವರೆಗೆ ತೆರಿಗೆ ವಿನಾಯಿತಿ ದೊರೆಯಲಿದೆ.

ಬಳಕೆಯ ಅವಧಿ ಮುಗಿದ ವಾಹನಗಳನ್ನು ಸ್ವಯಂಪ್ರೇರಿತವಾಗಿ ಗುಜರಿಗೆ ಹಾಕಲು ಪ್ರೋತಾಹಿಸುವುದು ಹಾಗೂ ಅವುಗಳ ವಿವಿಧ ಭಾಗಗಳು ಮತ್ತು ಲೋಹಗಳನ್ನು ವೈಜ್ಞಾನಿಕವಾಗಿ ಮರುಬಳಕೆ ಮಾಡುವ ವ್ಯವಸ್ಥೆ ರೂಪಿಸುವುದು ನೀತಿಯ ಪ್ರಮುಖ ಉದ್ದೇಶವಾಗಿದೆ. ಇದರಿಂದ ಹಳೆಯ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವುದರ ಜೊತೆಗೆ ಪರಿಸರ ಸಂರಕ್ಷಣೆಗೆ ಸಹಕಾರಿಯಾಗಲಿದೆ.

ಇದೇ ವೇಳೆ, ವಾಹನ ಮಾಲೀಕರು ದೆಹಲಿ ಮಾದರಿಯಲ್ಲಿ 15 ಮತ್ತು 20 ವರ್ಷಕ್ಕಿಂತ ಹಳೆಯ ವಾಹನಗಳನ್ನು ಕಡ್ಡಾಯವಾಗಿ ಗುಜರಿಗೆ ಹಾಕುವ ನಿಯಮವನ್ನು ರಾಜ್ಯದಲ್ಲೂ ಜಾರಿಗೆ ತರಬೇಕು ಎಂಬ ಒತ್ತಾಯ ಕೇಳಿಬಂದಿದೆ.

RELATED ARTICLES
spot_img

Latest News