Homeರಾಜ್ಯಕೆನರಾ ಬ್ಯಾಂಕ್‌ ಸಹಭಾಗಿತ್ವದಲ್ಲಿ ಕ್ಯಾನ್ ಫಿನ್ ಹೋಮ್ಸ್ 296.95 ಕೋಟಿ ರೂ. ವೆಚ್ಚದ ‘ಪ್ರಾಜೆಕ್ಟ್ ತೇಜಸ್’

ಕೆನರಾ ಬ್ಯಾಂಕ್‌ ಸಹಭಾಗಿತ್ವದಲ್ಲಿ ಕ್ಯಾನ್ ಫಿನ್ ಹೋಮ್ಸ್ 296.95 ಕೋಟಿ ರೂ. ವೆಚ್ಚದ ‘ಪ್ರಾಜೆಕ್ಟ್ ತೇಜಸ್’

ಬೆಂಗಳೂರು: ಕೆನರಾ ಬ್ಯಾಂಕ್‌ ಸಹಭಾಗಿತ್ವದ ಕ್ಯಾನ್ ಫಿನ್ ಹೋಮ್ಸ್ ಲಿಮಿಟೆಡ್ ತನ್ನ ಡಿಜಿಟಲ್ ಪರಿವರ್ತನಾ ಕಾರ್ಯಕ್ರಮವಾದ ‘ಪ್ರಾಜೆಕ್ಟ್ ತೇಜಸ್’ ಅನ್ನು ಅನಾವರಣಗೊಳಿಸಿದೆ. ಬರೋಬ್ಬರಿ 296.95 ಕೋಟಿ ರೂ. ಮೌಲ್ಯದ ಈ ಏಳು ವರ್ಷದ ಯೋಜನೆಯ ಮೂಲಕ ಸಂಸ್ಥೆಯ ಸಾಲ ಸೇವೆಗಳು, ತಂತ್ರಜ್ಞಾನ ವ್ಯವಸ್ಥೆಗಳು ಮತ್ತು ಗ್ರಾಹಕ ಅನುಭವವನ್ನು ಮತ್ತಷ್ಟು ಆಧುನಿಕರಣಗೊಳಿಸುವ ಗುರಿ ಹೊಂದಲಾಗಿದೆ.

‘ತೇಜಸ್’ ಎಂದರೆ ಟೆಕ್ ಎನ್‌ಹಾನ್ಸ್ಡ್ ಜರ್ನಿ ಫಾರ್ ಅಜಿಲಿಟಿ ಅಂಡ್ ಸ್ಕೇಲಬಿಲಿಟಿ ಎಂಬುದರ ಸಂಕ್ಷಿಪ್ತ ರೂಪವಾಗಿದೆ. ಯೋಜನೆಯಡಿ ಸಂಸ್ಥೆಯ ಪ್ರಮುಖ ಅನ್ವಯಿಕೆಗಳು ಮತ್ತು ಎಂಟರ್‌ಪ್ರೈಸ್ ವ್ಯವಸ್ಥೆಗಳನ್ನು ಎಪಿಐ ಆಧಾರಿತ, ವಿಸ್ತರಣಾಶೀಲ ಮತ್ತು ಸಂಪರ್ಕಿತ ಡಿಜಿಟಲ್ ವೇದಿಕೆಯಲ್ಲಿ ಏಕೀಕರಿಸಲಾಗುತ್ತಿದೆ.

ಸಾಲ ಪ್ರಾರಂಭ ಮತ್ತು ನಿರ್ವಹಣೆ, ವಸೂಲಿ, ಠೇವಣಿ, ಹಣಕಾಸು ಮತ್ತು ಲೆಕ್ಕಪತ್ರ, ದಾಖಲೆ ನಿರ್ವಹಣೆ, ಅಪಾಯ ಮತ್ತು ಆಸ್ತಿ-ಬಾಧ್ಯತೆ ನಿರ್ವಹಣೆ, ಮಾನವ ಸಂಪನ್ಮೂಲ ಹಾಗೂ ಸಂಸ್ಥಾ ಮಟ್ಟದ ವರದಿಗಾರಿಕೆ ಸೇರಿದಂತೆ ಹಲವು ಪ್ರಮುಖ ಕಾರ್ಯಗಳು ಈ ಪರಿವರ್ತನೆಯ ವ್ಯಾಪ್ತಿಗೆ ಒಳಪಡುತ್ತವೆ. ಇದಕ್ಕೆ ಕ್ಲೌಡ್ ಮೂಲಸೌಕರ್ಯ, ಎಸ್‌ಡಿ-ವ್ಯಾನ್, ನೆಟ್‌ವರ್ಕ್ ಮತ್ತು ಭದ್ರತಾ ಕಾರ್ಯಾಚರಣೆ ಕೇಂದ್ರಗಳು, ಎಪಿಐ ನಿರ್ವಹಣೆ ಹಾಗೂ ವಿಪತ್ತು ಮರುಸ್ಥಾಪನಾ ವ್ಯವಸ್ಥೆಗಳು ಬೆಂಬಲ ನೀಡಲಿವೆ.

ಕ್ಯಾನ್ ಫಿನ್ ಹೋಮ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುರೇಶ್ ಅಯ್ಯರ್ ಮಾತನಾಡಿ, “ಪ್ರಾಜೆಕ್ಟ್ ತೇಜಸ್ ಸಂಸ್ಥೆಯ ಕಾರ್ಯವೈಖರಿ, ಗ್ರಾಹಕ ಸೇವೆ ಮತ್ತು ಭವಿಷ್ಯದ ಬೆಳವಣಿಗೆಯಲ್ಲಿ ಮೂಲಭೂತ ಪರಿವರ್ತನೆ ತರಲಿದೆ. ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸಿಕೊಂಡು ಗ್ರಾಹಕರ ಪ್ರಯಾಣವನ್ನು ಸರಳಗೊಳಿಸುವುದು, ಅಪಾಯ ನಿರ್ವಹಣೆಯನ್ನು ಬಲಪಡಿಸುವುದು ಹಾಗೂ ದತ್ತಾಂಶ ಆಧಾರಿತ ವೇಗದ ನಿರ್ಧಾರಗಳಿಗೆ ನೆರವಾಗುವುದು ನಮ್ಮ ಉದ್ದೇಶ,” ಎಂದರು.

ಯೋಜನೆಯಡಿ ಗೃಹ ಸಾಲದ ಆರಂಭದಿಂದ ಅಂತ್ಯದವರೆಗಿನ ಪ್ರಕ್ರಿಯೆಯನ್ನು ಡಿಜಿಟಲೀಕರಿಸಲಾಗುತ್ತಿದ್ದು, ವೇಗವಾದ ಪ್ರಕ್ರಿಯೆ, ಕಡಿಮೆ ಮಾನವ ಹಸ್ತಕ್ಷೇಪ ಮತ್ತು ತಕ್ಷಣದ ಕಾರ್ಯಾಚರಣಾ ಮಾಹಿತಿ ಲಭ್ಯವಾಗಲಿದೆ. 25ಕ್ಕೂ ಹೆಚ್ಚು ಫಿನ್‌ಟೆಕ್ ಪಾಲುದಾರರನ್ನು ವೇದಿಕೆಗೆ ಸಂಪರ್ಕಿಸಲಾಗುತ್ತಿದೆ.

ಪಿಡಬ್ಲ್ಯುಸಿ, ಕೆಪಿಎಂಜಿ ಮತ್ತು ಐಬಿಎಂ ಇಂಡಿಯಾ ಯೋಜನೆಯ ಸಲಹಾ, ಅನುಷ್ಠಾನ ಮತ್ತು ತಾಂತ್ರಿಕ ಏಕೀಕರಣದಲ್ಲಿ ಭಾಗಿಯಾಗಿವೆ. ಜೊತೆಗೆ ಅಮೆಜಾನ್ ವೆಬ್ ಸರ್ವಿಸಸ್, ಮೈಕ್ರೋಸಾಫ್ಟ್ ಸೇರಿದಂತೆ ಹಲವು ತಂತ್ರಜ್ಞಾನ ಸಂಸ್ಥೆಗಳು ಸಹಭಾಗಿಯಾಗಿವೆ. ದಾಖಲೆ ಸಂಸ್ಕರಣೆ, ಬ್ಯಾಂಕ್ ಖಾತೆ ವಿವರಗಳ ವಿಶ್ಲೇಷಣೆ, ವಂಚನೆ ತಡೆ ಮತ್ತು ಉದ್ಯೋಗಿ ಸೇವೆಗಳಲ್ಲಿ ಕೃತಕ ಬುದ್ಧಿಮತ್ತೆ ಆಧಾರಿತ ಸಾಮರ್ಥ್ಯಗಳನ್ನು ಹಂತ ಹಂತವಾಗಿ ಅಳವಡಿಸಲಾಗುತ್ತಿದ್ದು, ಮುಂದಿನ ಹಂತದಲ್ಲಿ ಸಾಲ ಮೌಲ್ಯಮಾಪನ, ವಸೂಲಿ ಮತ್ತು ಗ್ರಾಹಕ ಸೇವೆಯಲ್ಲಿಯೂ ಇದರ ಬಳಕೆಯನ್ನು ವಿಸ್ತರಿಸುವ ಸಾಧ್ಯತೆ ಪರಿಶೀಲಿಸಲಾಗುತ್ತಿದೆ.

RELATED ARTICLES
spot_img

Latest News