Homeರಾಜಕೀಯಸತೀಶ್‌ ಜಾರಕಿಹೊಳಿಗೆ 'ಇಡಿ ಶಾಕ್' ಹೂಡೆಸಿದ ಕಾಣದ 'ಕೈ' ಯಾರದ್ದು..?

ಸತೀಶ್‌ ಜಾರಕಿಹೊಳಿಗೆ ‘ಇಡಿ ಶಾಕ್’ ಹೂಡೆಸಿದ ಕಾಣದ ‘ಕೈ’ ಯಾರದ್ದು..?

ಬೆಂಗಳೂರು,ಸೆ.13- ರಾಜ್ಯ ರಾಜಕಾರಣದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿರುವ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಕುಟುಂಬದ ಸದಸ್ಯರು ಮತ್ತು ಆಪ್ತರ ಮೇಲಿನ ಜಾರಿ ನಿರ್ದೇಶನಾಲಯ ಇಡಿ ದಾಳಿಯ ಹಿಂದೆ ಕಾಣದ ಕೈಗಳ ಪ್ರಭಾವ ಇದೆ ಎಂಬ ಗುಮಾನಿ ಎದ್ದಿದೆ.

ಇದಕ್ಕೆ ಪುಷ್ಟಿ ನೀಡುವಂತೆ ಸ್ವತಹ ಸಚಿವ ಸತಿ ಜಾರಕಿಹೊಳಿಯವರು ಈಡಿಗೇ ದೂರು ನೀಡಿರುವುದು ಕಾಂಗ್ರೆಸ್‌‍ ಪಕ್ಷದವರೇ ಇರಬಹುದು ಆದರೆ ಅವರ ಸಂಬಂಧ ಬಿಜೆಪಿ ಜೊತೆಗೂ ಇದೆ ಎಂದು ಹೇಳಿರುವುದು ದಾಳಿಯ ಹಿಂದೆ ವ್‌ಯವಸ್ಥಿತ ಷಡ್ಯಂತ್ರ ಅಡಗಿದೆ ಎಂಬ ಸಂಶಯ ವ್ಯಕ್ತವಾಗಿದೆ.

ವಿದೇಶಿ ಹೂಡಿಕೆ ಹಾಗೂ ಫೆಮಾ ಉಲ್ಲಂಘನೆ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ತಿಳಿಸಿದ್ದರೂ, ಇದರ ಹಿಂದೆ ಪ್ರಬಲ ರಾಜಕೀಯ ಷಡ್ಯಂತ್ರವಿರುವ ಶಂಕೆ ವ್‌ಯಕ್ತವಾಗಿದೆ. ರಾಜ್ಯ ಕಾಂಗ್ರೆಸ್‌‍ ರಾಜಕಾರಣದಲ್ಲಿ ಸತೀಶ್‌ ಜಾರಕಿಹೊಳಿ ಅವರು ಪ್ರಬಲ ಧ್ವನಿಯ, ಬಂಡಾಯ ಹಾಗೂ ಪ್ರಗತಿಪರ ಚಿಂತನೆಯ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಈ ಹಿಂದೆ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿ ಅವರ ಹೆಸರು ಮುಂಚೂಣಿಗೆ ಬಂದಿತ್ತು. ಪರಿಶಿಷ್ಟ ಪಂಗಡದ ಅತ್ಯಂತ ಪ್ರಭಾವಿ ನಾಯಕರಾಗಿ ಬೆಳೆಯುತ್ತಿರುವುದು ಮತ್ತು ಪಕ್ಷ ಹಾಗೂ ಸರ್ಕಾರದೊಳಗೆ ಅವರು ಬೆಳೆಯುತ್ತಿರುವ ವರ್ಚಸ್ಸು ಕೆಲವರಿಗೆ ನುಂಗಲಾರದ ತುತ್ತಾಗಿತ್ತೆನ್ನಲಾಗಿದೆ.ಈ ಹಿನ್ನೆಲೆಯಲ್ಲಿ, ಅವರನ್ನು ರಾಜಕೀಯವಾಗಿ ಹತ್ತಿಕ್ಕಲು ಮತ್ತು ಅವರ ನಾಯಕತ್ವಕ್ಕೆ ಲಗಾಮು ಹಾಕಲು ಕೇಂದ್ರ ತನಿಖಾ ಸಂಸ್ಥೆಗಳಿಗೆ ನಿಖರವಾದ ಮಾಹಿತಿಗಳನ್ನು ರವಾಯಿಸಿರುವವರು ಸ್ವಪಕ್ಷದವರೇ ಎಂಬ ಅನುಮಾನಗಳು ಕೇಳಿ ಬರುತ್ತಿವೆ.

ಇಡಿ ದಾಳಿ ಪ್ರಕರಣದ ಬೆನ್ನಲ್ಲೇ ಮಾತನಾಡಿರುವ ಸತೀಶ್‌ ಜಾರಕಿಹೊಳಿ ಹಾಗೂ ಅವರ ಬೆಂಬಲಿಗರು, ತನಿಖಾ ಸಂಸ್ಥೆಗಳಿಗೆ ಕರಾರುವಾಕ್ಕಾಗಿ ಮಾಹಿತಿ ಸೋರಿಕೆಯಾಗಿರುವುದು ಮತ್ತು ದಾಳಿಯ ಹಿಂದೆ ಆಂತರಿಕ ಶತ್ರುಗಳ ಕೈವಾಡವಿರುವ ಬಗ್ಗೆ ಅನುಮಾನ ವ್‌ಯಕ್ತಪಡಿಸಿದ್ದಾರೆ. ಕಾಂಗ್ರೆಸ್‌‍ನಲ್ಲಿದ್ದುಕೊಂಡು ಬಿಜೆಪಿಗೆ ಅನುಕೂಲ ಮಾಡಿಕೊಡುವ ಉದ್ದೇಶ ಇರಬಹುದು ಎಂದು ಸೂಚ್ಯವಾಗಿ ಹೇಳಿರುವುದು ನಾನಾ ಸಂಶಯಗಳನ್ನು ಹುಟ್ಟುಹಾಕಿದೆ.

ಸತೀಶ್‌ ಜಾರಕಿಹೊಳಿ ಏಕೆ ಪ್ರಮುಖ? :
ಸತೀಶ್‌ ಜಾರಕಿಹೊಳಿ ಸಾಮಾನ್ಯ ಕಾಂಗ್ರೆಸ್‌‍ ನಾಯಕ ಮಾತ್ರವಲ್ಲ. ಬೆಳಗಾವಿ ಭಾಗದಲ್ಲಿ ದಶಕಗಳಿಂದ ತಮ್ಮದೇ ರಾಜಕೀಯ ಪ್ರಭಾವವನ್ನು ಹೊಂದಿರುವ ಅವರು, ಕಾಂಗ್ರೆಸ್‌‍ನ ಪ್ರಭಾವಿ ನಾಯಕರಲ್ಲಿ ಒಬ್ಬರು. ಸಚಿವ ಸ್ಥಾನದಲ್ಲಿರುವುದರ ಜೊತೆಗೆ ಉತ್ತರ ಕರ್ನಾಟಕದಲ್ಲಿ ತಮ್ಮದೇ ರಾಜಕೀಯ ನೆಲೆಯನ್ನು ನಿರ್ಮಿಸಿಕೊಂಡಿದ್ದಾರೆ.

ಒಂದು ಹಂತದಲ್ಲಿ ಸತೀಶ್‌ ಜಾರಕಿಹೊಳಿ ಅವರ ಹೆಸರೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬಂದಿತ್ತು. ಕಾಂಗ್ರೆಸ್‌‍ ಸರ್ಕಾರದಲ್ಲಿ ನಾಯಕತ್ವದ ಸಮೀಕರಣಗಳ ಚರ್ಚೆ ನಡೆದಾಗಲೆಲ್ಲ ಅವರ ಹೆಸರು ಮುನ್ನೆಲೆಗೆ ಬರುತ್ತಿತ್ತು. ಹೀಗಾಗಿ, ಇಂತಹ ಸಂದರ್ಭದಲ್ಲಿ ಅವರ ಕುಟುಂಬ ಮತ್ತು ಆಪ್ತರ ಮೇಲೆ ಕೇಂದ್ರ ತನಿಖಾ ಸಂಸ್ಥೆಯ ಶೋಧ ನಡೆದಿರುವುದು ಸಹಜವಾಗಿಯೇ ರಾಜಕೀಯ ಮಹತ್ವ ಪಡೆದುಕೊಂಡಿದೆ.

ಇದೀಗ ಕಾಂಗ್ರೆಸ್‌‍ ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವ ಪ್ರಮುಖ ಪ್ರಶ್ನೆ ಇದೇ.
ಸತೀಶ್‌ ಜಾರಕಿಹೊಳಿ ಅವರನ್ನು ಗುರಿಯಾಗಿಸಿಕೊಂಡು ಯಾರಾದರೂ ಕಾಂಗ್ರೆಸ್‌‍ ನಾಯಕರೇ ತನಿಖಾ ಸಂಸ್ಥೆಗಳಿಗೆ ಮಾಹಿತಿ ನೀಡಿದ್ದಾರೆಯೇ? ಅವರ ವ್ಯವಹಾರಗಳು, ಕುಟುಂಬದ ಆಸ್ತಿ, ವಿದೇಶಿ ಹೂಡಿಕೆಗಳು ಅಥವಾ ಆಪ್ತರ ಹಣಕಾಸು ವ್ಯವಹಾರಗಳ ಕುರಿತು ದೂರು ಅಥವಾ ದಾಖಲೆಗಳನ್ನು ಯಾರಾದರೂ ನೀಡಿದ್ದಾರೆಯೇ? ಎಂಬ ಅನುಮಾನಗಳು ರಾಜಕೀಯ ವಲಯದಲ್ಲಿ ವ್ಯಕ್ತವಾಗುತ್ತಿವೆ.

ಪಕ್ಷದಲ್ಲೇ ಮುಗಿಸುವ ಪ್ರಯತ್ನ ಎಂಬ ಚರ್ಚೆ :
ಸತೀಶ್‌ ಜಾರಕಿಹೊಳಿ ವಿರುದ್ಧ ಕಾಂಗ್ರೆಸ್‌‍ನೊಳಗೇ ಒಂದು ಗುಂಪು ಅಸಮಾಧಾನ ಹೊಂದಿದೆ ಎಂಬುದು ಹೊಸ ಚರ್ಚೆಯಲ್ಲ. ಆದರೆ ಇಡಿ ದಾಳಿಯ ನಂತರ ಈ ಚರ್ಚೆ ಮತ್ತೊಮ್ಮೆ ತೀವ್ರಗೊಂಡಿದೆ.

ರಾಜಕೀಯವಾಗಿ ಪ್ರಭಾವಿ ನಾಯಕರೊಬ್ಬರ ವಿರುದ್ಧ ತನಿಖೆ ಆರಂಭವಾದರೆ, ಅವರ ಪಕ್ಷದೊಳಗಿನ ಸ್ಥಾನಮಾನ, ಭವಿಷ್ಯದ ನಾಯಕತ್ವದ ಅವಕಾಶ ಮತ್ತು ಚುನಾವಣಾ ಸಾಮರ್ಥ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇದೇ ಕಾರಣಕ್ಕೆ ಸತೀಶ್‌ ಜಾರಕಿಹೊಳಿ ಅವರನ್ನು ದುರ್ಬಲಗೊಳಿಸುವ ರಾಜಕೀಯ ಪ್ರಯತ್ನವೇನಾದರೂ ನಡೆಯುತ್ತಿದೆಯೇ ಎಂಬ ಪ್ರಶ್ನೆ ಕೇಳಿಬರುತ್ತಿದೆ.

ಇಡಿ ದಾಳಿಯ ಬಳಿಕ ಸತೀಶ್‌ ಜಾರಕಿಹೊಳಿ ನೀಡಿರುವ ಹೇಳಿಕೆಗಳೂ ರಾಜಕೀಯ ಚರ್ಚೆಗೆ ಕಾರಣವಾಗಿವೆ. ತಮ್ಮ ವ್‌ಯವಹಾರಗಳಲ್ಲಿ ಸಣ್ಣಪುಟ್ಟ ತಪ್ಪುಗಳಿರಬಹುದು, ಆದರೆ ದೊಡ್ಡ ಪ್ರಮಾಣದ ಅಕ್ರಮ ನಡೆದಿಲ್ಲ ಎಂಬ ನಿಲುವನ್ನು ಅವರು ವ್‌ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಕಾಂಗ್ರೆಸ್‌‍ನ ಒಳರಾಜಕೀಯದ ಬಗ್ಗೆ ಅವರು ಈ ಹಿಂದೆ ವ್‌ಯಕ್ತಪಡಿಸಿದ್ದ ಅಸಮಾಧಾನ, ಪಕ್ಷದ ವಿರುದ್ಧ ಮತದಾರರು ತಿರುಗಬಹುದು ಎಂಬ ರೀತಿಯ ಹೇಳಿಕೆಗಳು, ಪಕ್ಷದ ಕೆಲವು ನಾಯಕರೊಂದಿಗೆ ಅವರ ಭಿನ್ನಾಭಿಪ್ರಾಯಗಳು ಸೇರಿದಂತೆ ಹಲವು ಸಂಗತಿಗಳನ್ನು ಒಟ್ಟಾಗಿ ನೋಡಲಾಗುತ್ತಿದೆ.

ಇದರಿಂದಾಗಿ, ಸತೀಶ್‌ ಜಾರಕಿಹೊಳಿ ವಿರುದ್ಧದ ತನಿಖೆ ಕೇವಲ ಕಾನೂನು ವಿಚಾರವೇ ಅಥವಾ ಕಾಂಗ್ರೆಸ್‌‍ನ ಒಳರಾಜಕೀಯದ ಮೇಲೂ ಪರಿಣಾಮ ಬೀರುವ ಬೆಳವಣಿಗೆಯೇ? ಎಂಬ ಪ್ರಶ್ನೆ ಮುನ್ನೆಲೆಗೆ ಬಂದಿದೆ.

ಬಿಜೆಪಿಗೆ ಹೊಸ ರಾಜಕೀಯ ಅಸ್ತ್ರ :
ಇಡಿ ದಾಳಿ ಕಾಂಗ್ರೆಸ್‌‍ಗೆ ಎರಡು ರೀತಿಯ ಸವಾಲು ತಂದಿದೆ. ಒಂದು ಕಡೆ, ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆ ಎಂಬ ಆರೋಪವನ್ನು ಮುಂದುವರಿಸುವ ಅನಿವಾರ್ಯತೆ. ಮತ್ತೊಂದೆಡೆ, ತನಿಖೆಯಲ್ಲಿರುವ ಹಣಕಾಸು ಆರೋಪಗಳಿಗೆ ಸ್ಪಷ್ಟನೆ ನೀಡಬೇಕಾದ ಒತ್ತಡ. ಬಿಜೆಪಿಗೆ ಮಾತ್ರ ಈ ಬೆಳವಣಿಗೆ ಸರ್ಕಾರವನ್ನು ಗುರಿಯಾಗಿಸಲು ಮತ್ತೊಂದು ರಾಜಕೀಯ ಅಸ್ತ್ರವಾಗಿದೆ. ಭ್ರಷ್ಟಾಚಾರವಿಲ್ಲದ ಆಡಳಿತ ಎಂಬ ಕಾಂಗ್ರೆಸ್‌‍ನ ಪ್ರತಿಪಾದನೆಗೆ ವಿರುದ್ಧವಾಗಿ, ಸಚಿವರ ಕುಟುಂಬ ಮತ್ತು ಆಪ್ತರ ಮೇಲೆ ನಡೆದ ತನಿಖೆಯನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುವ ಸಾಧ್ಯತೆ ಇದೆ.

ಇಡಿ ವಶಪಡಿಸಿಕೊಂಡಿರುವ ದಾಖಲೆಗಳು, ಹಣದ ಮೂಲ, ವಿದೇಶಿ ಹೂಡಿಕೆಗಳ ಸ್ವರೂಪ, ವ್‌ಯವಹಾರಗಳ ಕಾನೂನುಬದ್ಧತೆ ಹಾಗೂ ಸಚಿವರು ಅಥವಾ ಅವರ ಕುಟುಂಬ ಸದಸ್ಯರೊಂದಿಗೆ ಅವುಗಳ ಸಂಬಂಧ ಕುರಿತು ತನಿಖೆ ಮುಂದುವರಿಯಲಿದೆ. ಆದರೆ ಒಂದು ಸಂಗತಿ ಮಾತ್ರ ಸ್ಪಷ್ಟಇಡಿ ದಾಳಿ ಈಗ ಸತೀಶ್‌ ಜಾರಕಿಹೊಳಿ ಅವರ ವೈಯಕ್ತಿಕ ಅಥವಾ ಕುಟುಂಬದ ಹಣಕಾಸು ತನಿಖೆಯ ಮಿತಿಯನ್ನು ಮೀರಿ, ಕಾಂಗ್ರೆಸ್‌‍ನ ಒಳರಾಜಕೀಯ, ಮುಖ್ಯಮಂತ್ರಿ ಹುದ್ದೆಯ ಭವಿಷ್ಯದ ಸಮೀಕರಣ ಮತ್ತು ಕರ್ನಾಟಕದ ಮುಂದಿನ ರಾಜಕೀಯ ಸಂಘರ್ಷದ ಕೇಂದ್ರಬಿಂದುವಾಗಿ ರೂಪುಗೊಳ್ಳುವ ಸಾಧ್ಯತೆ ಇದೆ.

ಸತೀಶ್‌ ಜಾರಕಿಹೊಳಿ ಅವರ ನಿವಾಸದ ಮೇಲಿನ ಇಡಿ ದಾಳಿಯು ಕೇವಲ ಆರ್ಥಿಕ ಅಥವಾ ತಾಂತ್ರಿಕ ತನಿಖೆಯಾಗಿ ಉಳಿಯದೆ, ರಾಜ್ಯ ಕಾಂಗ್ರೆಸ್‌‍ ಸರ್ಕಾರದ ಆಂತರಿಕ ಭಿನ್ನಮತ, ಮುಖ್ಯಮಂತ್ರಿ ಹುದ್ದೆಯ ಪೈಪೋಟಿ ಹಾಗೂ ಜಾತಿ ರಾಜಕಾರಣದ ಸೂಕ್ಷ್ಮತೆಗಳನ್ನು ಮತ್ತೊಮೆ ಮುನ್ನೆಲೆಗೆ ತಂದಿದೆ. ತನಿಖೆ ಮುಂದುವರಿದಂತೆ ಇದು ರಾಜ್ಯದಲ್ಲಿ ಯಾವ ಹಂತದ ರಾಜಕೀಯ ತಿರುವುಗಳನ್ನುಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

RELATED ARTICLES
spot_img

Latest News