Homeರಾಜ್ಯಕೆಪಿಎಸ್‌‍ಸಿ ಹಗರಣ : ಮತ್ತಷ್ಟು ಸ್ಫೋಟಕ ಸಂಗತಿಗಳು ಬಹಿರಂಗ, 5 ಕೋಟಿ ರೂ. ವಹಿವಾಟು ಪತ್ತೆ

ಕೆಪಿಎಸ್‌‍ಸಿ ಹಗರಣ : ಮತ್ತಷ್ಟು ಸ್ಫೋಟಕ ಸಂಗತಿಗಳು ಬಹಿರಂಗ, 5 ಕೋಟಿ ರೂ. ವಹಿವಾಟು ಪತ್ತೆ

ಬೆಂಗಳೂರು,ಸೆ.13- ಕರ್ನಾಟಕ ಲೋಕ ಸೇವಾ ಆಯೋಗ(ಕೆಪಿಎಸ್‌‍ಸಿ)ದ ಮೂಲಕ ಪಶುವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ಮುಂದುವರಿದಿದ್ದು, ಹಲವು ಸ್ಫೋಟಕ ಸಂಗತಿಗಳು ಬೆಳಕಿಗೆ ಬಂದಿವೆ. ಪ್ರಾಥಮಿಕ ತನಿಖೆಯಲ್ಲಿ 5 ಕೋಟಿ ರೂ. ವಹಿವಾಟು ನಡೆದಿರುವುದು ಪತ್ತೆಯಾಗಿದ್ದು, 85 ಲಕ್ಷ ಹಣ ವಿವಿಧ ಬ್ಯಾಂಕ್‌ ಖಾತೆಗಳಿಗೆ ವರ್ಗಾವಣೆಯಾಗಿರುವುದು ದೃಢಪಟ್ಟಿದೆ. ಪ್ರಕರಣದಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆದಿರುವ ಸುಳಿವು ಸಿಕ್ಕಿದ್ದು, ಹಲವು ಬ್ಯಾಂಕ್‌ ಖಾತೆಗಳ ಮೂಲಕ ನಡೆದ ಹಣ ವರ್ಗಾವಣೆಗಳನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ನೂರಾರು ಮಂದಿಯನ್ನು ವಿಚಾರಣೆಗೊಳಪಡಿಸಲಾಗಿದ್ದು, ಹಲವು ಅಭ್ಯರ್ಥಿಗಳ ಹೇಳಿಕೆಗಳು ತನಿಖೆಗೆ ಹೊಸ ದಿಕ್ಕು ನೀಡಿವೆ.

ಪಶುವೈದ್ಯಾಧಿಕಾರಿ ನೇಮಕಾತಿ ಅಕ್ರಮದಲ್ಲಿ ಸುಮಾರು 5 ಕೋಟಿ ಮೊತ್ತದ ವಹಿವಾಟಿನ ಸುಳಿವು ಸಿಕ್ಕಿದೆ ಎಂಬ ಮಾಹಿತಿ ತನಿಖೆಯ ಗಂಭೀರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಇದರ ಜೊತೆಗೆ ಸುಮಾರು 80 ಲಕ್ಷದಷ್ಟು ಹಣ ಬ್ಯಾಂಕ್‌ ಖಾತೆಗಳ ಮೂಲಕ ವರ್ಗಾವಣೆಯಾಗಿರುವುದನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ ಎಂಬ ವರದಿಗಳೂ ಹೊರಬಿದ್ದಿವೆ.

ಆದರೆ, ತನಿಖೆಯಲ್ಲಿರುವ ವಿವಿಧ ಮೂಲಗಳಲ್ಲಿ ಒಟ್ಟು ವಹಿವಾಟಿನ ಮೊತ್ತದ ಕುರಿತು ವಿಭಿನ್ನ ಅಂಕಿಅಂಶಗಳು ಕೇಳಿಬರುತ್ತಿವೆ. ಕೆಲ ವರದಿಗಳ ಪ್ರಕಾರ 24 ಅಭ್ಯರ್ಥಿಗಳಿಂದ ಸುಮಾರು 10 ಕೋಟಿಯಷ್ಟು ಹಣ ಸಂಗ್ರಹವಾಗಿರಬಹುದು ಎಂಬ ಶಂಕೆ ವ್‌ಯಕ್ತವಾಗಿದೆ. ಮತ್ತೊಂದು ತನಿಖಾ ಹಂತದಲ್ಲಿ 12 ಕೋಟಿಗೂ ಹೆಚ್ಚು ಹಣದ ಸಂಗ್ರಹದ ಸಾಧ್ಯತೆಯನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಮುಖ್ಯವಾಗಿ, ಅಭ್ಯರ್ಥಿಗಳಿಂದ ಪ್ರತಿ ಹುದ್ದೆಗೆ 30 ಲಕ್ಷದಿಂದ 80 ಲಕ್ಷದವರೆಗೆ ಹಣ ಕೇಳಲಾಗಿತ್ತು ಎಂಬ ಆರೋಪಗಳು ಈಗಾಗಲೇ ತನಿಖೆಯ ಭಾಗವಾಗಿವೆ. ಕೆಲ ಅಭ್ಯರ್ಥಿಗಳಿಂದ ಮುಂಗಡ ಹಣ ಪಡೆದಿರುವ ಕುರಿತು ಹೇಳಿಕೆಗಳು ಮತ್ತು ಬ್ಯಾಂಕ್‌ ವ್‌ಯವಹಾರಗಳ ದಾಖಲೆಗಳನ್ನೂ ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಇಡಿ ತನಿಖೆಯಿಂದಲೂ ಹಣದ ಜಾಲದ ಪರಿಶೀಲನೆ :
ಸಿಐಡಿ ತನಿಖೆಯ ಜೊತೆಗೆ ಜಾರಿ ನಿರ್ದೇಶನಾಲಯವೂ ಪ್ರಕರಣಕ್ಕೆ ಪ್ರವೇಶಿಸಿರುವುದು ಹಗರಣದ ಹಣಕಾಸು ಆಯಾಮದ ಗಂಭೀರತೆಯನ್ನು ಸೂಚಿಸುತ್ತದೆ. ಪಿಎಂಎಲ್‌ಎ ಅಡಿಯಲ್ಲಿ ಇಡಿ 21 ಸ್ಥಳಗಳಲ್ಲಿ ಶೋಧ ನಡೆಸಿದ್ದು, ಕೆಪಿಎಸ್‌‍ಸಿ ಕಚೇರಿ, ಅಧಿಕಾರಿಗಳು, ಮಧ್ಯವರ್ತಿಗಳು, ಆಯ್ಕೆಯಾದ ಅಭ್ಯರ್ಥಿಗಳು ಹಾಗೂ ಪರೀಕ್ಷಾ ಮೌಲ್ಯಮಾಪನಕ್ಕೆ ಸಂಬಂಧಿಸಿದ ಸಂಸ್ಥೆಗಳ ಸ್ಥಳಗಳನ್ನು ಪರಿಶೀಲಿಸಿದೆ.

ಹೀಗಾಗಿ ತನಿಖೆ ಈಗ ಕೇವಲ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆಯೇ? ಎಂಬ ಪ್ರಶ್ನೆಗೆ ಸೀಮಿತವಾಗದೆ, ಹಣ ಯಾರಿಂದ ಬಂದಿತು, ಯಾರಿಗೆ ತಲುಪಿತು, ಯಾವ ಮಾರ್ಗದಲ್ಲಿ ವರ್ಗಾವಣೆಯಾಯಿತು ಮತ್ತು ಆ ಹಣದ ಅಂತಿಮ ಫಲಾನುಭವಿಗಳು ಯಾರು? ಎಂಬ ಪ್ರಶ್ನೆಗಳತ್ತ ಸಾಗುತ್ತಿದೆ.

ಇದುವರೆಗೆ ಪ್ರಕರಣದಲ್ಲಿ 273 ಜನರ ವಿಚಾರಣೆ ನಡೆಸಲಾಗಿದ್ದು, 15 ಅಭ್ಯರ್ಥಿಗಳು ಸೇರಿದಂತೆ ಕೆಲ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.ನಗದು ವಹಿವಾಟು ಹೆಚ್ಚಿನ ಪ್ರಮಾಣದಲ್ಲಿ ನಡೆದಿರುವುದು ಪತ್ತೆಯಾಗಿದ್ದು, ಬೀದರ್‌ ಸೌಹಾರ್ದ ಬ್ಯಾಂಕ್‌ ಮ್ಯಾನೇಜರ್‌ ವಿಚಾರಣೆ ವೇಳೆ ಕನ್ನಾಳೆ ಜೊತೆಗಿನ ವ್ಯವಹಾರವನ್ನು ಒಪ್ಪಿಕೊಂಡಿದ್ದಾರೆ.

ಐಎಎಸ್‌‍ ಅಧಿಕಾರಿ ಜ್ಞಾನೇಂದ್ರ ಅವರನ್ನು ಈಗಾಗಲೇ ವಿಚಾರಣೆ ನಡೆಸಲಾಗಿದ್ದು, ಅವರ ಜೊತೆಗಿದ್ದ ಯುವತಿ ಬಳಿಯಿದ್ದ 23 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಆರೋಪಿ ಬಸವರಾಜ್‌ ಕನ್ನಾಳೆ ಸಹಚರರಿಗಾಗಿ ಶೋಧ ಮುಂದುವರಿದಿದ್ದು, ಇನ್ನೂ ಹಲವರನ್ನು ಬಂಧಿಸುವ ಸಾಧ್ಯತೆಯಿದೆ.ವಿಚಾರಣೆಗೆ ಹಾಜರಾಗದ ಕೆಪಿಎಸ್‌‍ಸಿ ಸದಸ್ಯೆ ಶಾಂತಾ ಹೊಸಮನಿ ಅವರಿಗೆ ಮತ್ತೊಮೆ ನೋಟಿಸ್‌‍ ನೀಡಲು ಸಿಐಡಿ ತಯಾರಿ ನಡೆಸುತ್ತಿದೆ.

ಶಾಂತಾ ಹೊಸಮನಿ ಸುತ್ತ ಎಡವಟ್ಟುಗಳ ಸುಳಿ :
ಕೆಪಿಎಸ್‌‍ಸಿಯ 3 ನೇಮಕಾತಿ ವಿಚಾರ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಎಇ ಅಕ್ರಮದಲ್ಲೂ ಶಾಂತಾ ಹೊಸಮನಿ ಹೆಸರು ತಳಕುಹಾಕಿಕೊಂಡಿದೆ.2023ರಲ್ಲಿ ಎಎಇ ಅಕ್ರಮ ತನಿಖೆಗೆ ಉಪ ಸಮಿತಿ ನೇಮಿಸಲಾಗಿತ್ತು.

ಆದರೆ ಇತರ ಸದಸ್ಯರಿಗೆ ತಿಳಿಸದೆ ಆಯ್ಕೆ ಪಟ್ಟಿ ಪ್ರಕಟಿಸಲು ಶಾಂತಾ ಹೊಸಮನಿ ಮುಂದಾಗಿದ್ದರು. ಆಗಿನ ಕಾರ್ಯದರ್ಶಿ ಲತಾ ಕುಮಾರಿ ಮೂಲಕ ಪ್ರಕಟಣೆಗೆ ಯತ್ನ ನಡೆಸಲಾಗಿತ್ತು.ಇತರೆ ಸದಸ್ಯರ ಆಕ್ಷೇಪದಿಂದಾಗಿ ಆ ಪಟ್ಟಿ ಪ್ರಕಟವಾಗಿರಲಿಲ್ಲ ಮತ್ತು ಬಳಿಕ ಶಾಂತಾ ಹೊಸಮನಿ ಅವರನ್ನು ಉಪ ಸಮಿತಿಯಿಂದ ಹೊರಗಿಡಲಾಗಿತ್ತು ಎಂಬ ಅಂಶ ತನಿಖೆಯಲ್ಲಿ ಬಹಿರಂಗವಾಗಿದೆ. 2026ರ ಜನವರಿ 8 ಮತ್ತು 9ರಂದು 400 ಪಶುವೈದ್ಯಾಧಿಕಾರಿ ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು. ಸುಮಾರು 1,400 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ನಂತರ ಪ್ರಕಟವಾದ ಫಲಿತಾಂಶದಲ್ಲಿ 329 ಅಭ್ಯರ್ಥಿಗಳು ಆಯ್ಕೆಯಾಗಿದ್ದರು.

ಈ ಪೈಕಿ 29 ಅಭ್ಯರ್ಥಿಗಳ ಅಸಾಮಾನ್ಯವಾಗಿ ಹೆಚ್ಚಿನ ಅಂಕಗಳ ಕುರಿತು ಅನುಮಾನ ವ್‌ಯಕ್ತವಾಗಿತ್ತು. ವಿಶೇಷವಾಗಿ ಶೈಕ್ಷಣಿಕ ದಾಖಲೆಗಳಲ್ಲಿ ಸಾಮಾನ್ಯ ಅಥವಾ ಕಡಿಮೆ ಸಾಧನೆ ತೋರಿದ್ದ ಕೆಲವರು ಪ್ರವೇಶ ಪರೀಕ್ಷೆಯಲ್ಲಿ 450ಕ್ಕೂ ಹೆಚ್ಚು ಅಂಕ ಗಳಿಸಿರುವುದು ತನಿಖಾಧಿಕಾರಿಗಳ ಗಮನ ಸೆಳೆದಿದೆ. ಈ ಹಿನ್ನೆಲೆಯಲ್ಲಿ 758 ಒಎಂಆರ್‌ ಶೀಟ್‌ಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಅಭ್ಯರ್ಥಿಗಳ ಮೂಲ ಒಎಂಆರ್‌ ಹಾಗೂ ಅವರ ಪ್ರತಿಗಳಲ್ಲಿನ ಗುರುತುಗಳನ್ನು ಹೋಲಿಸಿ ಅಕ್ರಮ ನಡೆದಿದೆಯೇ ಎಂಬುದನ್ನು ಪತ್ತೆಹಚ್ಚುವ ಪ್ರಯತ್ನ ಮುಂದುವರಿದಿದೆ.

ತನಿಖಾ ಸಂಸ್ಥೆಯ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರಿಗೆ ಮತ್ತೊಮೆ ನೋಟಿಸ್‌‍ ನೀಡುವ ಸಾಧ್ಯತೆ ಇದೆ ಎಂಬ ಮಾಹಿತಿ ಹೊರಬಂದಿದೆ. ಅವರ ವಿರುದ್ಧ ಲುಕ್‌ಔಟ್‌ ನೋಟಿಸ್‌‍ ಹೊರಡಿಸಲಾಗಿದೆ.

ರೆಸಾರ್ಟ್‌ಗಳಲ್ಲಿ ತರಬೇತಿ ಆರೋಪ :
ಸಿಐಡಿ ತನಿಖೆಯಲ್ಲಿ ಹೊರಬರುತ್ತಿರುವ ಮಾಹಿತಿಯ ಪ್ರಕಾರ, ಕೆಲ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಮುನ್ನವೇ ಪ್ರಶ್ನೆಪತ್ರಿಕೆಯ ಅಂಶಗಳು ಲಭ್ಯವಾಗಿದ್ದವು ಎಂಬ ಆರೋಪವಿದೆ.ಕೆಲವು ಅಭ್ಯರ್ಥಿಗಳನ್ನು ಪರೀಕ್ಷೆಗೆ ಮುನ್ನ ಹೋಟೆಲ್‌ಗಳು ಹಾಗೂ ರೆಸಾರ್ಟ್‌ಗಳಿಗೆ ಕರೆದೊಯ್ದು ಪ್ರಶ್ನೆಗಳಿಗೆ ಉತ್ತರಿಸುವ ರೀತಿಯ ತರಬೇತಿ ನೀಡಲಾಗಿತ್ತು ಎಂಬ ಆರೋಪವೂ ಕೇಳಿಬಂದಿದೆ. ಪರೀಕ್ಷಾ ದಿನದಂದು ಅಭ್ಯರ್ಥಿಗಳು, ಮಧ್ಯವರ್ತಿಗಳು ಮತ್ತು ಅಧಿಕಾರಿಗಳ ನಡುವೆ ನಡೆದ ಸಂಪರ್ಕಗಳನ್ನೂ ಕರೆ ದಾಖಲೆಗಳ ಮೂಲಕ ಪರಿಶೀಲಿಸಲಾಗಿದೆ.

ಪ್ರಕರಣದ ತನಿಖೆಗೆ ಪ್ರಮುಖ ತಿರುವು ನೀಡಿದ್ದು ಒಬ್ಬ ಆಯ್ಕೆಯಾದ ಅಭ್ಯರ್ಥಿಯ ಹೇಳಿಕೆ ಎನ್ನಲಾಗಿದೆ. 40 ಲಕ್ಷಕ್ಕೆ ನೇಮಕಾತಿ ಖಚಿತಪಡಿಸುವ ಭರವಸೆ ನೀಡಲಾಗಿತ್ತು ಮತ್ತು 20 ಲಕ್ಷ ಮುಂಗಡವಾಗಿ ಪಾವತಿಸಿದ್ದಾಗಿ ಆ ಅಭ್ಯರ್ಥಿ ಹೇಳಿಕೆ ನೀಡಿದ್ದಾನೆ ಎಂಬ ವರದಿ ಹೊರಬಿದ್ದಿದೆ. ಆ ಹೇಳಿಕೆ ಹಾಗೂ ತಾಂತ್ರಿಕ ಪರಿಶೀಲನೆಯ ಬಳಿಕ ಮಧ್ಯವರ್ತಿ ಬಸವರಾಜ್‌ ಕನ್ನಾಳೆ ಮತ್ತು ಅಮಾನತುಗೊಂಡ ಐಎಎಸ್‌‍ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ನಡುವಿನ ಸಂಪರ್ಕದ ಬಗ್ಗೆ ತನಿಖೆ ಮುಂದುವರಿದಿದೆ.

ಪ್ರಕರಣದಲ್ಲಿ ಪ್ರಮುಖ ಆರೋಪಿಗಳೆಂದು ತನಿಖಾ ಸಂಸ್ಥೆಗಳು ಪರಿಗಣಿಸಿರುವ ಮಾಜಿ ಕೆಪಿಎಸ್‌‍ಸಿ ಪರೀಕ್ಷಾ ನಿಯಂತ್ರಕ ಜ್ಞಾನೇಂದ್ರ ಕುಮಾರ್‌ ಗಂಗ್ವಾರ್‌ ಮತ್ತು ಮಧ್ಯವರ್ತಿ ಬಸವರಾಜ್‌ ಕನ್ನಾಳೆ ಅವರನ್ನು ಸಿಐಡಿ ಬಂಧಿಸಿತ್ತು.10 ದಿನಗಳ ಪೊಲೀಸ್‌‍ ಕಸ್ಟಡಿ ಮುಗಿದ ಬಳಿಕ ಇಬ್ಬರನ್ನೂ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ತನಿಖಾಧಿಕಾರಿಗಳು ಡಿಜಿಟಲ್‌ ಸಾಕ್ಷ್ಯಗಳು, ಹಣಕಾಸು ದಾಖಲೆಗಳು, ಅಭ್ಯರ್ಥಿಗಳ ಪಟ್ಟಿಗಳು ಹಾಗೂ ಇತರ ದಾಖಲೆಗಳನ್ನು ಆಧರಿಸಿ ವಿಚಾರಣೆ ಮುಂದುವರಿಸುತ್ತಿದ್ದಾರೆ. ಕನ್ನಾಳೆ ಅವರನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಅವರು ವಿದೇಶಕ್ಕೆ ತೆರಳಲು ಸಿದ್ಧರಾಗಿದ್ದ ವೇಳೆ ಸಿಐಡಿ ವಶಕ್ಕೆ ಪಡೆದಿತ್ತು.

ಕೆಪಿಎಸ್‌‍ಸಿ ಅಧ್ಯಕ್ಷರ ಮೇಲೂ ಆರೋಪದ ನೆರಳು :
ಪ್ರಕರಣದ ತನಿಖೆ ಕೆಪಿಎಸ್‌‍ಸಿ ಅಧ್ಯಕ್ಷ ಸ್ಥಾನದಲ್ಲಿದ್ದ ಸಾಹುಕಾರ್‌ ಎಸ್‌‍. ಶಿವಶಂಕರಪ್ಪ ಅವರತ್ತವೂ ತಿರುಗಿದೆ. ಅವರ ವಿರುದ್ಧದ ಆರೋಪಗಳ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದ್ದು, ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಮಧ್ಯವರ್ತಿಗಳು ಮತ್ತು ಅಧಿಕಾರಿಗಳೊಂದಿಗೆ ಸಂಪರ್ಕವಿದ್ದ ಬಗ್ಗೆ ಸಿಐಡಿ ತನಿಖೆ ನಡೆಸುತ್ತಿದೆ. ತನಿಖೆಯಲ್ಲಿ ಅಧ್ಯಕ್ಷರು, ಅವರ ಪುತ್ರ ಹಾಗೂ ಮಧ್ಯವರ್ತಿಗಳ ನಡುವೆ ಪರೀಕ್ಷಾ ಅವಧಿಯಲ್ಲಿ ಎನ್‌ಕ್ರಿಪ್ಟೆಡ್‌‍ ಕರೆಗಳು ನಡೆದಿದ್ದವು ಎಂಬ ಮಾಹಿತಿ ಹೊರಬಂದಿದೆ ಎಂದು ವರದಿಯಾಗಿದೆ. ಈ ಆರೋಪಗಳ ಹಿನ್ನೆಲೆಯಲ್ಲಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನೂ ಕರ್ನಾಟಕ ಹೈಕೋರ್ಟ್‌ ತಿರಸ್ಕರಿಸಿದೆ.

RELATED ARTICLES
spot_img

Latest News