Homeರಾಷ್ಟ್ರೀಯದೆಹಲಿಯ ಐಷಾರಾಮಿ ಹೋಟೆಲ್‌ನಲ್ಲಿ ಏರ್ ಇಂಡಿಯಾದ ಮಾಜಿ ಪೈಲಟ್ ನಿಗೂಢ ಸಾವು

ದೆಹಲಿಯ ಐಷಾರಾಮಿ ಹೋಟೆಲ್‌ನಲ್ಲಿ ಏರ್ ಇಂಡಿಯಾದ ಮಾಜಿ ಪೈಲಟ್ ನಿಗೂಢ ಸಾವು

ನವದೆಹಲಿ, ಸೆ. 13: ದೆಹಲಿಯ ವಸಂತ್‌ ಕುಂಜ್‌ನ ಖಾಸಗಿ ಹೋಟೆಲ್‌ನಲ್ಲಿ ಏರ್‌ ಇಂಡಿಯಾ ಸಂಸ್ಥೆಯ ಬೋಯಿಂಗ್‌ ವಿಮಾನದ ಪೈಲಟ್‌ ನಿಗೂಢವಾಗಿ ಸಾವನ್ನಪ್ಪಿದ್ದಾರೆ.ಮುಂಬೈ ಮೂಲದ ಸನ್ನಿ ಅಸಲ್ದೇಕರ್‌ ಅವರು ಬೋಯಿಂಗ್‌ 787 ವಿಮಾನ ಚಾಲನಾ ತರಬೇತಿಗಾಗಿ ದೆಹಲಿಗೆ ಬಂದಿದ್ದರು. ಘಟನೆಯಲ್ಲಿ ಕೊಲೆ ಅಥವಾ ಸಂಚಿನಂತಹ ಯಾವುದೇ ಕೃತ್ಯ ನಡೆದಿಲ್ಲ ಎಂದು ಪ್ರಾಥಮಿಕ ತನಿಖೆ ನಡೆಸಿರುವ ದೆಹಲಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಬೋಯಿಂಗ್‌ 787 ತರಬೇತಿಗೆ ಬಂದಿದ್ದರು: ಈ ಹಿಂದೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಇತ್ತೀಚೆಗಷ್ಟೇ ಏರ್‌ ಇಂಡಿಯಾಕ್ಕೆ ವರ್ಗಾವಣೆಗೊಂಡಿದ್ದರು. ಬೋಯಿಂಗ್‌ 787 ಡ್ರೀಮ್‌ಲೈನರ್‌ ವಿಮಾನದ ಪರಿವರ್ತನಾ ತರಬೇತಿಗಾಗಿ ಸೆಪ್ಟೆಂಬರ್‌ 10ರಂದು ದೆಹಲಿಗೆ ಬಂದು ವಸಂತ್‌ ಕುಂಜ್‌ನ ಹೋಟೆಲ್‌ನಲ್ಲಿ ತಂಗಿದ್ದರು.

ಪೈಲಟ್‌ ಕುಟುಂಬದವರ ಮೊಬೈಲ್‌ ಕರೆಗಳಿಗೆ ಸ್ಪಂದಿಸದಿದ್ದಾಗ ಗಾಬರಿಗೊಂಡ ಅವರ ಸಹೋದರ, ಹೋಟೆಲ್‌ ಮ್ಯಾನೇಜರ್‌ಗೆ ಕರೆ ಮಾಡಿ ವಿಚಾರಿಸಿದ್ದಾರೆ. ಕೊಠಡಿಯು ಒಳಗಿನಿಂದ ಲಾಕ್‌ ಆಗಿದ್ದರಿಂದ ಸಿಬ್ಬಂದಿ ಮಾಸ್ಟರ್‌ ಕೀ ಬಳಸಿ ಬಾಗಿಲು ತೆರೆದಿದ್ದಾರೆ. ಈ ವೇಳೆ ಪೈಲಟ್‌ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡುಬಂದಿದೆ.

ಕೂಡಲೇ ವಸಂತ್‌ ಕುಂಜ್‌ ಉತ್ತರ ಪೊಲೀಸ್‌ ಠಾಣೆಗೆ ಮಾಹಿತಿ ನೀಡಲಾಗಿದ್ದು, ಪೈಲಟ್‌ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು. ತಮ್ಮ ಸಿಬ್ಬಂದಿಯ ಅಕಾಲಿಕ ನಿಧನಕ್ಕೆ ಏರ್‌ ಇಂಡಿಯಾ ತೀವ್ರ ಆಘಾತ ಮತ್ತು ದುಃಖ ವ್ಯಕ್ತಪಡಿಸಿದೆ. ಸಂಕಷ್ಟದಲ್ಲಿರುವ ಪೈಲಟ್‌ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ನೆರವು ನೀಡುವುದಾಗಿಯೂ ಭರವಸೆ ನೀಡಿದೆ.

ಅನುಮಾನಾಸ್ಪದ ಕೃತ್ಯವನ್ನು ತಳ್ಳಿಹಾಕಿದ ಪೊಲೀಸರು: ಅಪರಾಧ ವಿಭಾಗದ ತಂಡ ಮತ್ತು ವಿಧಿವಿಜ್ಞಾನ ತಜ್ಞರು ಹೋಟೆಲ್‌ ಕೊಠಡಿಯನ್ನು ತಪಾಸಣೆ ನಡೆಸಿದ್ದು, ಬಲವಂತವಾಗಿ ಪ್ರವೇಶಿಸಿದ ಕುರುಹು ಅಥವಾ ಯಾವುದೇ ಸಂಶಯಾಸ್ಪದ ವಸ್ತು ಪತ್ತೆಯಾಗಿಲ್ಲ. ಸೆಪ್ಟೆಂಬರ್‌ 12ರಂದು ಸಫ್ದರ್‌ಜಂಗ್‌ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸಾವಿಗೆ ನಿಖರ ಕಾರಣವೇನು ಎಂಬುದು ವೈದ್ಯಕೀಯ ವರದಿ ಬಂದ ಬಳಿಕ ತಿಳಿಯಲಿದೆ.

RELATED ARTICLES
spot_img

Latest News