ಬೆಂಗಳೂರು, ಆ.28- ಬಹಳ ದಿನಗಳ ಬಳಿಕ ನಗರ ಪೊಲೀಸರ ಪಿಸ್ತೂಲ್ ಸದ್ದು ಮಾಡಿದ್ದು, ಮಧ್ಯರಾತ್ರಿ ಮಾರಕಾಸ್ತ್ರ ಹಿಡಿದು ಬೈಕ್ನಲ್ಲಿ ಸಂಚರಿಸುತ್ತಿದ್ದ ಆರೋಪಿಯೊಬ್ಬ ಪೊಲೀಸರ ಗುಂಡೇಟಿನಿಂದ ಗಾಯಗೊಂಡಿದ್ದಾನೆ. ಬೇಗೂರಿನ ಸುಭಾಷ್ನಗರ ನಿವಾಸಿ ಸೈಯ್ಯದ್ ಜಿಶಾನ್ (34) ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ.
ಇತ್ತೀಚೆಗೆ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೆಡಿಕಲ್ ಸ್ಟೋರ್ ಮಾಲೀಕನ ಕೊಲೆ ನಡೆದಿತ್ತು. ಪ್ರಕರಣದ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ಜಿಶಾನ್ ಅವರಿಗೆ ಮಾರಕಾಸ್ತ್ರಗಳನ್ನು ಪೂರೈಸಿದ್ದ ಎಂಬುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಈತನ ವಿರುದ್ಧ ಬೇಗೂರು ಪೊಲೀಸ್ ಠಾಣೆಯಲ್ಲಿ ಈಗಾಗಲೇ ಒಂದು ಪ್ರಕರಣ ದಾಖಲಾಗಿದೆ.
ಜಿಶಾನ್ ಮಧ್ಯರಾತ್ರಿ ವೇಳೆ ಬೈಕ್ನಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಸಂಚರಿಸಿ ಸಾರ್ವಜನಿಕರಲ್ಲಿ ಭೀತಿ ಮೂಡಿಸುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಬಂಡೇಪಾಳ್ಯ ಠಾಣೆ ಪೊಲೀಸರು ಆತನ ಬಂಧನಕ್ಕೆ ಶೋಧ ನಡೆಸುತ್ತಿದ್ದರು.
ಗುರುವಾರ ಮಧ್ಯರಾತ್ರಿ ಸೋಮಸುಂದರಪಾಳ್ಯದಲ್ಲಿ ಜಿಶಾನ್ ಮಾರಕಾಸ್ತ್ರ ಹಿಡಿದು ಬೈಕ್ನಲ್ಲಿ ಸಂಚರಿಸುತ್ತಿರುವ ಬಗ್ಗೆ ಬಂಡೇಪಾಳ್ಯ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಸಚಿನ್ ಅವರಿಗೆ ಖಚಿತ ಮಾಹಿತಿ ಬಂದಿದೆ. ರಾತ್ರಿ ಸುಮಾರು 12.30ರ ವೇಳೆಗೆ ಸಿಬ್ಬಂದಿ ಸಂದೀಪ್ ಕಾಂಬ್ಳೆ ಅವರೊಂದಿಗೆ ಸೋಮಸುಂದರಪಾಳ್ಯ ಕೆರೆ ಬಳಿ ತೆರಳಿದ ಸಚಿನ್, ಜಿಶಾನ್ನನ್ನು ಬಂಧಿಸಲು ಮುಂದಾದರು.
ಈ ವೇಳೆ ಜಿಶಾನ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿ, ತನ್ನ ಬಳಿಯಿದ್ದ ಮಾರಕಾಸ್ತ್ರದಿಂದ ಕಾನ್ಸ್ಟೆಬಲ್ ಸಂದೀಪ್ ಕಾಂಬ್ಳೆ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಬಳಿಕ ಸಚಿನ್ ಅವರು ಶರಣಾಗುವಂತೆ ಎಚ್ಚರಿಕೆ ನೀಡಿದರೂ, ಅವರ ಮೇಲೂ ಹಲ್ಲೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಪೊಲೀಸರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಮತ್ತೊಮ್ಮೆ ಎಚ್ಚರಿಕೆ ನೀಡಿದರೂ ಜಿಶಾನ್ ಕಾರದ ಪುಡಿ ಎರಚಿ ದಾಳಿ ಮಾಡಲು ಮುಂದಾದಾಗ, ಆತ್ಮರಕ್ಷಣೆಗಾಗಿ ಸಚಿನ್ ಗುಂಡು ಹಾರಿಸಿದ್ದಾರೆ. ಗುಂಡು ಜಿಶಾನ್ನ ಬಲಗಾಲಿಗೆ ತಗುಲಿ ಆತ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.
ತಕ್ಷಣ ಆತನನ್ನು ವಶಕ್ಕೆ ಪಡೆದು ಚಿಕಿತ್ಸೆಗಾಗಿ ಸಂಜಯ್ ಗಾಂಧಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಜಿಶಾನ್ ಹಲ್ಲೆಗೆ ಯತ್ನಿಸಿದ ವೇಳೆ ಗಾಯಗೊಂಡಿರುವ ಕಾನ್ಸ್ಟೆಬಲ್ ಸಂದೀಪ್ ಕಾಂಬ್ಳೆ ಅವರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
