Monday, November 25, 2024
Homeರಾಜಕೀಯ | Politicsಚುನಾವಣಾ ಸಮೀಪಿಸಿದರೂ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ ರಾಜ್ಯ ಬಿಜೆಪಿ ಭಿನ್ನಮತ

ಚುನಾವಣಾ ಸಮೀಪಿಸಿದರೂ ಸದ್ಯಕ್ಕೆ ಬಗೆಹರಿಯುವಂತೆ ಕಾಣುತ್ತಿಲ್ಲ ರಾಜ್ಯ ಬಿಜೆಪಿ ಭಿನ್ನಮತ

ಬೆಂಗಳೂರು,ಮಾ.16- ಲೋಕಸಭೆ ಚುನಾವಣೆಯಲ್ಲಿ ಈ ಬಾರಿ ಎಲ್ಲಾ 28 ಲೋಕಸಭಾ ಕ್ಷೇತ್ರಗಳನ್ನು ಗೆದ್ದು , ದಾಖಲೆ ಸೃಷ್ಟಿಸುವ ತವಕದಲ್ಲಿರುವ ಬಿಜೆಪಿಗೆ ಪಕ್ಷದೊಳಗೆ ಎದ್ದಿರುವ ಭಿನ್ನಮತ ಬಗೆಹರಿಯುವ ಲಕ್ಷಣಗಳು ಕಾಣುತ್ತಿಲ್ಲ. ಅದರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ತವರು ಜಿಲ್ಲೆ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಸಿಗದೆ ಬಂಡಾಯ ಸಾರಿರುವ ಕೆ.ಎಸ್.ಈಶ್ವರಪ್ಪ ಮತ್ತೆ ಬಿ.ಎಸ್.ಯಡಿಯೂರಪ್ಪ ವಿರುದ್ಧ ನೇರಾನೇರ ಸಮರ ಸಾರಿದ್ದಾರೆ.

ಈಗಾಗಲೇ ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಘೋಷಣೆ ಮಾಡಿರುವ ಈಶ್ವರಪ್ಪ, ತಂದೆ ಮಕ್ಕಳ ಕೈಗೆ ಸಿಕ್ಕಿ ಬಿಜೆಪಿ ವಿಲವಿಲ ಒದ್ದಾಡುತ್ತಿದೆ. ನಾನು ಯಾವುದೇ ಕಾರಣಕ್ಕೂ ನನ್ನ ನಿಲುವಿನಲ್ಲಿ ಬದಲಾವಣೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಾನು ಕೂಡ ರಾಜ್ಯದಲ್ಲಿ ಬಿಜೆಪಿ ಕಟ್ಟಿ ಬೆಳೆಸಿದ ಪ್ರಮುಖರಲ್ಲಿ ಒಬ್ಬನಾಗಿದ್ದೇನೆ. ವಿಜಯೇಂದ್ರಗೆ ರಾಜ್ಯಾಧ್ಯಕ್ಷ ಸ್ಥಾನ ಕೊಡುವುದಾದರೆ ನನಗೇಕೆ ಕೊಡಬಾರದಿತ್ತು. ಲಿಂಗಾಯಿತರು ಕೇವಲ ಯಡಿಯೂರಪ್ಪ ಮತ್ತು ಅವರ ಕುಟುಂಬದವರ ಜೊತೆ ಇದ್ದಾರೆಯೇ ಎಂದು ಪ್ರಶ್ನೆ ಮಾಡಿದರು. ಇದೀಗ ಈಶ್ವರಪ್ಪನವರಿಗೆ ಬಂಡಾಯವನ್ನು ಶಮನಗೊಳಿಸುವುದೇ ಸವಾಲಾಗಿ ಪರಿಣಮಿಸಿದೆ. ದಾವಣಗೆರೆಯಲ್ಲೂ ಪರಿಸ್ಥಿತಿ ದಿನದಿಂದ ದಿನಕ್ಕೆ ಕೈ ಬಿಡುವ ಹಂತಕ್ಕೆ ತಲುಪಿದೆ.

ಭಿನ್ನಮತವನ್ನು ಶಮನ ಮಾಡಲು ದಾವಣಗೆರೆಗೆ ತೆರಳಿದ್ದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಸಚಿವ ಭೈರತಿ ಬಸವರಾಜ್ ಆಗಮಿಸಿದ್ದರೂ ಟಿಕೆಟ್ ವಂಚಿತರ ಸಂಧಾನ ನಡೆಸುವ ಪ್ರಯತ್ನ ಕೈಗೂಡಲಿಲ್ಲ. ಪ್ರಮುಖರಾದ ಎಂ.ಪಿ.ರೇಣುಕಾಚಾರ್ಯ, ಮಾಡಾಳು ವಿರೂಪಾಕ್ಷಪ್ಪ, ಕರುಣಾಕರ ರೆಡ್ಡಿ ಸೇರಿದಂತೆ ಅನೇಕರು ಪಕ್ಷದಿಂದ ದೂರ ಉಳಿದಿದ್ದಾರೆ.

ಚಿಕ್ಕಮಗಳೂರು, ಉಡುಪಿಯಲ್ಲೂ ಭಿನ್ನಮತ ಶಮನವಾಗುವ ಲಕ್ಷಣಗಳು ಕಾಣುತ್ತಿಲ್ಲ. ಟಿಕೆಟ್ ಆಕಾಂಕ್ಷಿಯಾಗಿದ್ದ ಸಿ.ಟಿ.ರವಿ ಮುನಿಸಿಕೊಂಡಿರುವುದು ಪಕ್ಷಕ್ಕೆ ದುಬಾರಿಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಉತ್ತರಕನ್ನಡ ಜಿಲ್ಲೆಯಲ್ಲೂ ಹಾಲಿ ಸಂಸದ ಅನಂತಕುಮಾರ್ ಹೆಗಡೆ ಹಾಗೂ ಮಾಜಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ನಡುವೆ ಟಿಕೆಟ್ ಸ್ಪರ್ಧೆ ಏರ್ಪಟ್ಟಿದೆ.

ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಘೋಷಣೆಯಾಗುವ ಹಂತದಲ್ಲಿರುವಾಗಲೇ ಬೆಳಗಾವಿ ಜಿಲ್ಲೆಯ ಬಿಜೆಪಿ ಮುಖಂಡರ ಅಸಮಾಧಾನ ಸ್ಪೋಟಗೊಂಡಿದೆ. ನಗರದಲ್ಲಿ ಜಿಲ್ಲಾ ಬಿಜೆಪಿ ಮುಖಂಡರ ಸಭೆ ನಡೆದಿದ್ದು, ಸ್ಥಳೀಯರನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವಂತೆ ಪಕ್ಷದ ರಾಷ್ಟ್ರೀಯ ಮುಖಂಡರ ಮನವೊಲಿಸಲು ನಿರ್ಧರಿಸಲಾಗಿದೆ.

ಹುಬ್ಬಳ್ಳಿ-ಧಾರವಾಡ, ಹಾವೇರಿ ಅಥವಾ ಬೆಳಗಾವಿ ಕ್ಷೇತ್ರದಿಂದ ಕಣಕ್ಕಿಳಿಯುವ ಬಗ್ಗೆ ಶೆಟ್ಟರ್ ಬಿಜೆಪಿ ವರಿಷ್ಠರ ಜತೆ ಚರ್ಚೆ ನಡೆಸಿದ್ದು, ಈ ಪೈಕಿ ಹುಬ್ಬಳ್ಳಿ-ಧಾರವಾಡ ಮತ್ತು ಹಾವೇರಿ ಕ್ಷೇತ್ರಗಳಲ್ಲಿ ಈಗಾಗಲೇ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರು ಅಂತಿಮವಾಗಿದೆ. ಶೆಟ್ಟರ್ ಅವರಿಗೆ ಪ್ರಸ್ತುತ ಬೆಳಗಾವಿ ಕ್ಷೇತ್ರವೇ ಅಂತಿಮ ಎನ್ನಲಾಗುತ್ತಿದೆ. ಈ ಸುದ್ದಿ ಖಚಿತವಾಗುತ್ತಿದ್ದಂತೆ ಬೆಳಗಾವಿಯ ಬಿಜೆಪಿ ಮುಖಂಡರು ಸಿಡಿಮಿಡಿಗೊಳ್ಳುವ ಹಂತ ತಲುಪಿದ್ದಾರೆ. ಬೆಳಗಾವಿಯಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ಅನೇಕ ನಾಯಕರಿರುವಾಗ ಹೊರಗಿನ ಅಭ್ಯರ್ಥಿಗೆ ಮಣೆ ಹಾಕುವ ಅಗತ್ಯವೇನು? ಎಂಬುದು ಜಿಲ್ಲಾ ಬಿಜೆಪಿ ಮುಖಂಡರ ಪ್ರಶ್ನೆ.

ಶುಕ್ರವಾರ ಬೆಳಗ್ಗೆಯಿಂದಲೇ ಜಿಲ್ಲಾ ಬಿಜೆಪಿ ಮುಖಂಡರ ಸಭೆ ನಗರದಲ್ಲಿ ನಡೆದಿದ್ದು, ಬಳಿಕ ಡಾ ಪ್ರಭಾಕರ ಕೋರೆ ಅವರ ಮನೆಗೆ ತೆರಳಿ ಚರ್ಚಿಸಲಾಗಿದೆ. ಜಗದೀಶ್ ಶೆಟ್ಟರ್ ಅವರನ್ನು ಬೆಳಗಾವಿ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ ಮಾಡುವುದನ್ನು ಮುಖಂಡರು ಒಕ್ಕೊರಲಿನಿಂದ ತಿರಸ್ಕರಿಸಿದ್ದು, ಸ್ಥಳೀಯರಿಗೇ ಟಿಕೆಟ್ ನೀಡುವಂತೆ ಪಕ್ಷದ ಹೈಕಮಾಂಡ್‍ಗೆ ಒತ್ತಾಯಿಸಲು ನಿರ್ಣಯಿಸಿದ್ದಾರೆ.

ಈ ಬಗ್ಗೆ ರಾಷ್ಟ್ರೀಯ ಮುಖಂಡರ ಮನವೊಲಿಸುವ ಹೊಣೆಗಾರಿಕೆಯನ್ನು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರಿಗೆ ಹಾಗೂ ರಾಜ್ಯ ಮುಖಂಡರ ಮನವೊಲಿಸುವ ಜವಾಬ್ದಾರಿಯನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷ ಅನಿಲ್ ಬೆನಕೆ ಅವರಿಗೆ ವಹಿಸಲು ತೀರ್ಮಾನಿಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಇಕ್ಕಟ್ಟಿನಲ್ಲಿ ಸಂಸದೆ!
ಜಗದೀಶ್ ಶೆಟ್ಟರ್ ಅವರ ಬೀಗಿತ್ತಿಯಾಗಿರುವ ಸಂಸದೆ ಮಂಗಳಾ ಅಂಗಡಿ ಅವರು ಈವರೆಗೂ ಜಿಲ್ಲಾ ಬಿಜೆಪಿ ಮುಖಂಡರೊಂದಿಗೆ ಉತ್ತಮ ಸಂಪರ್ಕ ಕಾಯ್ದುಕೊಂಡಿದ್ದಾರೆ. ಆದರೆ, ಶೆಟ್ಟರ್‍ಗೆ ಬೆಳಗಾವಿ ಟಿಕೆಟ್ ನೀಡುವ ವಿದ್ಯಮಾನದಿಂದ ಇತ್ತ ಬೆಳಗಾವಿ ಬಿಜೆಪಿ ಮುಖಂಡರನ್ನೂ ಎದುರು ಹಾಕಿಕೊಳ್ಳಲಾಗದೆ ಅವರು ಅಡಗತ್ತರಿಯಲ್ಲಿ ಸಿಲುಕಿದ್ದಾರೆ. ಶುಕ್ರವಾರ ನಡೆದ ಸಭೆಗೆ ಅವರನ್ನು ಆಹ್ವಾನಿಸಿರಲಿಲ್ಲ. ಇನ್ನು ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಕೂಡ ಸಭೆಯಿಂದ ದೂರ ಉಳಿದಿದ್ದರು.

ಗೋ ಬ್ಯಾಕ್ ಶೆಟ್ಟರ್ ಅಭಿಯಾನ
ಇನ್ನೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಬೆಳಗಾವಿಯ ಬಿಜೆಪಿ ಕಾರ್ಯಕರ್ತರು ಮತ್ತು ವಿವಿಧ ಮುಖಂಡರ ಅಭಿಮಾನಿಗಳಿಂದ ಗೋ ಬ್ಯಾಕ್ ಶೆಟ್ಟರ್ ಅಭಿಯಾನವೂ ಪ್ರಾರಂಭವಾಗಿದೆ. ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿಗೆ ಸಿಗಬೇಕಿದ್ದ ಹಲವು ಯೋಜನೆಗಳಿಗೆ ಕೊಕ್ಕೆ ಹಾಕಿದ್ದಾರೆ ಎಂದು ಕೆಲವರು ಎಕ್ಸ್‍ನಲ್ಲಿ ಅಸಮಾಧಾನ ಹಂಚಿಕೊಂಡಿದ್ದರೆ, ಇನ್ನೂ ಕೆಲವರು ಶೆಟ್ಟರ್ ಬದಲು ಪ್ರತಾಪ್ ಸಿಂಹ, ಈರಣ್ಣ ಕಡಾಡಿ, ಮಹಾಂತೇಶ ಕವಟಗಿಮಠ ಅವರಿಗೆ ಟಿಕೆಟ್ ಕೊಡಿ ಎಂದು ಆಗ್ರಹಿಸಿದ್ದಾರೆ.

ಬೆಳಗಾವಿ ಜಿಲ್ಲಾ ಬಿಜೆಪಿ ಮುಖಂಡರು ಹಾಗೂ ಕೋರ್ ಕಮಿಟಿ ಸಭೆ ನಡೆದಿದೆ. ಪಕ್ಷ ಸಂಘಟನೆ ಸೇರಿದಂತೆ ವಿವಿಧ ವಿಷಯಗಳನ್ನು ಚರ್ಚಿಸಲಾಗಿದೆ. ಸಭೆಯಲ್ಲಿ ಚರ್ಚೆಯಾದ ವಿಷಯಗಳನ್ನು ಪಕ್ಷದ ವರಿಷ್ಠರಿಗೆ ವರದಿ ಮಾಡಲಾಗುವುದು ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ.

RELATED ARTICLES

Latest News