ಬೆಂಗಳೂರು, ಆ.28- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (ಆರ್ಡಿಪಿಆರ್) ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಎಚ್.ಡಿ. ಕುಮಾರಸ್ವಾಮಿ, ಪ್ರಕರಣದ ನೈತಿಕ ಹೊಣೆ ಹೊತ್ತು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಎಸ್ಸಿ ಮೂಲಕ ನಡೆದ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವುದು ಗೊತ್ತಿದ್ದರೂ, ಅಂದಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಪ್ರಿಯಾಂಕ್ ಖರ್ಗೆ ಏಕೆ ನೇಮಕಾತಿ ಆದೇಶ ನೀಡಿದರು? ಅವರ ಜವಾಬ್ದಾರಿ ಏನು? ಎಂದು ಪ್ರಶ್ನಿಸಿದರು.
‘ನಿತ್ಯ ಆಡು ಮುಟ್ಟದ ಸೊಪ್ಪಿಲ್ಲ, ಪ್ರಿಯಾಂಕ್ ಖರ್ಗೆ ಮಾತನಾಡದ ವಿಚಾರವಿಲ್ಲ ಎಂಬಂತಾಗಿದೆ. ನಾಲಿಗೆಗೆ ಗೌರವವಿದ್ದು, ಪಾರದರ್ಶಕ ಆಡಳಿತ ನೀಡುವ ಉದ್ದೇಶವಿದ್ದರೆ ತಕ್ಷಣ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ’ ಎಂದು ವಾಗ್ದಾಳಿ ನಡೆಸಿದರು.
ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳ ನೇಮಕಾತಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದು ಸೂಕ್ತ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ ಎಂದು ಕುಮಾರಸ್ವಾಮಿ ಹೇಳಿದರು. ಕೆಪಿಎಸ್ಸಿಯ ಉಪಸಮಿತಿ ವರದಿಯನ್ನು ಬದಿಗೊತ್ತಿ, ಅಧ್ಯಕ್ಷರ ಅನುಮತಿ ಇಲ್ಲದೆ ಕಾರ್ಯದರ್ಶಿಯವರೇ ಅಂತಿಮ ನೇಮಕಾತಿ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಂಜಿನಿಯರ್ಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಪರೀಕ್ಷೆಗಳು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಡೆದವು. ಪ್ರಿಯಾಂಕ್ ಖರ್ಗೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಅವಧಿಯಲ್ಲೇ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಅವರು ಆರೋಪಿಸಿದರು.
ಕೆಲ ಅಭ್ಯರ್ಥಿಗಳ ಒಎಂಆರ್ ಶೀಟ್ಗಳಲ್ಲಿ ತಾಳೆಯಾಗದಿರುವುದು ಕಂಡುಬಂದಿದೆ. ನ್ಯಾಯಾಲಯದ ಆದೇಶಕ್ಕೂ ಮುನ್ನವೇ 24 ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ನೀಡಲಾಗಿದ್ದು, ಅವರು ಸುಮಾರು ಒಂದು ವರ್ಷದಿಂದ ವೇತನ ಪಡೆಯುತ್ತಿದ್ದಾರೆ. ‘ಪ್ರತಿದಿನ ಆರ್ಎಸ್ಎಸ್ ಲೆಕ್ಕ ಕೊಡಿ ಎಂದು ಕೇಳುವ ಪ್ರಿಯಾಂಕ್ ಖರ್ಗೆ ಅವರು ಈ ಪ್ರಕರಣದ ಬಗ್ಗೆ ಯಾವ ಲೆಕ್ಕ ಕೊಡುತ್ತಾರೆ? ಪಾರದರ್ಶಕ ಆಡಳಿತ ನೀಡುತ್ತಿದ್ದರೆ ನ್ಯಾಯಾಲಯದ ಆದೇಶಕ್ಕೂ ಮುನ್ನವೇ ನೇಮಕಾತಿ ಆದೇಶ ನೀಡಿದ್ದು ಹೇಗೆ?’ ಎಂದು ಪ್ರಶ್ನಿಸಿದರು.
ಕೆಪಿಎಸ್ಸಿ ನೇಮಕಾತಿಯಲ್ಲೂ ಆರೋಪ
ಕೆಪಿಎಸ್ಸಿಗೆ 18 ಸದಸ್ಯರನ್ನು ಯಾವ ಮಾನದಂಡದ ಆಧಾರದ ಮೇಲೆ ನೇಮಕ ಮಾಡಲಾಗಿದೆ? ಜಾತಿ ಅಥವಾ ಹಣದ ಆಧಾರದ ಮೇಲೆ ನೇಮಕ ಮಾಡಲಾಗಿದೆಯೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು. ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅವರ ಕುರಿತು ಸರ್ಕಾರದಿಂದ ಪರಸ್ಪರ ವಿರೋಧಾಭಾಸದ ಹೇಳಿಕೆಗಳು ಬರುತ್ತಿವೆ. ಅವರು ಕೆಪಿಎಸ್ಸಿ ಪರೀಕ್ಷಾ ನಿಯಂತ್ರಕರಾಗಿಯೂ ಕಾರ್ಯನಿರ್ವಹಿಸಿದ್ದರು. ಪಶುವೈದ್ಯಕೀಯ ಅಧಿಕಾರಿಗಳ ನೇಮಕಾತಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಮುಚ್ಚಿಹಾಕಲು ಸರ್ಕಾರ ಮುಂದಾಗಿದೆ ಎಂದು ಅವರು ಆರೋಪಿಸಿದರು.
ಜ್ಞಾನೇಂದ್ರ ಕುಮಾರ್ ಅವರ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ಮಾಹಿತಿ ಇಲ್ಲದಿದ್ದರೆ ಗೃಹ ಇಲಾಖೆಯ ಕಾರ್ಯನಿರ್ವಹಣೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ನಡೆದಿರುವ ಹಲವು ಎಸ್ಐಟಿ ತನಿಖೆಗಳು ತಾರ್ಕಿಕ ಅಂತ್ಯ ಕಂಡಿಲ್ಲ ಎಂದು ಟೀಕಿಸಿದರು. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ಧಾರಾವಾಹಿ ರೀತಿಯಲ್ಲಿ ಚರ್ಚಿಸಬಹುದು. ಸರ್ಕಾರದ ಪಾರದರ್ಶಕ ಹಾಗೂ ಪರಿಶುದ್ಧ ಆಡಳಿತಕ್ಕೆ ಕೆಪಿಎಸ್ಸಿ ನೇಮಕಾತಿ ವಿಚಾರದಲ್ಲಿ ಕೇಳಿಬರುತ್ತಿರುವ ಆರೋಪಗಳೇ ಸಾಕ್ಷಿ ಎಂದು ಅವರು ಹೇಳಿದರು.
ನಿರುದ್ಯೋಗಿಗಳು ಹೋರಾಡಬೇಕು
ರಾಜ್ಯ ಸರ್ಕಾರ 75 ಸಾವಿರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಹೇಳಿದೆ. ಆದರೆ, ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮಗಳ ಆರೋಪಗಳು ಕೇಳಿಬರುತ್ತಿವೆ. ಇಂತಹ ವ್ಯವಸ್ಥೆಯನ್ನು ಸರಿಪಡಿಸಲು ನಿರುದ್ಯೋಗಿ ಯುವಕರು ಹೋರಾಟ ನಡೆಸಬೇಕು ಎಂದು ಕುಮಾರಸ್ವಾಮಿ ಕರೆ ನೀಡಿದರು. ಹಣ ನೀಡಿ ನೇಮಕಾತಿ ಪಡೆದು ಹುದ್ದೆ ಅಲಂಕರಿಸಿದರೆ ವ್ಯವಸ್ಥೆ ಸುಧಾರಿಸುವುದಿಲ್ಲ. ಮೊದಲು ನೇಮಕಾತಿ ವ್ಯವಸ್ಥೆ ಪಾರದರ್ಶಕವಾಗಬೇಕು. ಈ ನಿಟ್ಟಿನಲ್ಲಿ ಯುವಕರನ್ನು ಜಾಗೃತಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ಕೆಎಟಿ ಹಾಗೂ ಕೆಪಿಎಸ್ಸಿಯನ್ನು ಮುಚ್ಚುವುದಾಗಿ ಅಧಿಕಾರದಲ್ಲಿರುವವರು ಹೇಳುತ್ತಿದ್ದಾರೆ. ಸರ್ಕಾರದ ವಿರುದ್ಧ ಮಾತನಾಡುವವರ ಧ್ವನಿ ಅಡಗಿಸಲು ಸಾರ್ವಜನಿಕವಾಗಿ ಬೆದರಿಕೆ ಹಾಕುವ ಪ್ರಯತ್ನ ನಡೆಯುತ್ತಿದೆ. ಇಂತಹ ಕ್ರಮಗಳಿಂದ ತಮ್ಮ ಧ್ವನಿಯನ್ನು ಅಡಗಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಬರ ಪರಿಸ್ಥಿತಿ ಘೋಷಿಸಲಾಗಿದೆ. ಅದನ್ನು ಎದುರಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂದು ಪ್ರಶ್ನಿಸಿದ ಕುಮಾರಸ್ವಾಮಿ, ಬರ ನಿರ್ವಹಣೆಯ ಬಗ್ಗೆಯೂ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕರಾದ ಕೆ.ಎ. ತಿಪ್ಪೇಸ್ವಾಮಿ, ರಮೇಶ್ಗೌಡ, ಚೌಡರೆಡ್ಡಿ ಹಾಗೂ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಉಪಸ್ಥಿತರಿದ್ದರು.
