ಕಠ್ಮಂಡು, ಆ.29- ನೇಪಾಳ-ಟಿಬೆಟ್ ಗಡಿಯಲ್ಲಿ ಸಂಭವಿಸಿದ ಹಠಾತ್ ಪ್ರವಾಹ ಹಾಗೂ ಭೂಕುಸಿತದ ಭೀಕರ ದುರಂತದಲ್ಲಿ ಇನ್ಫೊಸಿಸ್ ಪಬ್ಲಿಕ್ ಸರ್ವಿಸಸ್ ಮುಖ್ಯಸ್ಥ ಲಕ್ಷ್ ಗೋಪಿಸೆಟ್ಟಿ ಅವರು ನಾಪತ್ತೆಯಾಗಿದ್ದಾರೆ.
ವೈಯಕ್ತಿಕ ಭೇಟಿಗಾಗಿ ನೇಪಾಳಕ್ಕೆ ತೆರಳಿದ್ದ ಅವರನ್ನು ಸದ್ಯಕ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಇನ್ಫೊಸಿಸ್ ಕಂಪನಿ ಅಧಿಕೃತವಾಗಿ ಖಚಿತಪಡಿಸಿದೆ. ಗೋಪಿಸೆಟ್ಟಿ ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕಂಪನಿಯು ಸ್ಥಳೀಯ ಆಡಳಿತ ಹಾಗೂ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ.
ನೇಪಾಳದ ಪ್ರವಾಹ ಪೀಡಿತ ಪ್ರದೇಶದಲ್ಲಿ ಒಟ್ಟು 320 ಭಾರತೀಯರು ನಾಪತ್ತೆಯಾಗಿದ್ದಾರೆ ಹಾಗೂ ಸುಮಾರು 400 ಮಂದಿ ಚೀನಾದ ಭಾಗದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. ಚೀನಾದ ಭಾಗದಲ್ಲಿ ಸಿಲುಕಿಕೊಂಡಿದ್ದವರ ಪೈಕಿ 153 ಭಾರತೀಯರು ಸುರಕ್ಷಿತವಾಗಿ ನೇಪಾಳ ಪ್ರವೇಶಿಸಿದ್ದಾರೆ.
ಸಂಕಷ್ಟದಲ್ಲಿರುವ ಭಾರತೀಯರನ್ನು ರಕ್ಷಿಸಿ ವಾಪಸ್ ಕರೆತರಲು ಅಗತ್ಯವಿರುವ ಎಲ್ಲ ನೆರವನ್ನು ನೇಪಾಳ ಸರ್ಕಾರಕ್ಕೆ ನೀಡಲು ಭಾರತ ಸಿದ್ಧವಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.“ನಮ್ಮ ಸಹೋದ್ಯೋಗಿ ಲಕ್ಷ್ ಗೋಪಿಸೆಟ್ಟಿ ಅವರ ಪತ್ತೆಗಾಗಿ ಸಂಬಂಧಪಟ್ಟ ಏಜೆನ್ಸಿಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಈ ಕಷ್ಟದ ಸಮಯದಲ್ಲಿ ಅವರ ಕುಟುಂಬಕ್ಕೆ ಅಗತ್ಯವಿರುವ ಸಂಪೂರ್ಣ ಬೆಂಬಲವನ್ನು ನೀಡಲಾಗುತ್ತಿದೆ” ಎಂದು ಇನ್ಫೊಸಿಸ್ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ಫೊಸಿಸ್ ಪಬ್ಲಿಕ್ ಸರ್ವಿಸಸ್ ಮುಖ್ಯಸ್ಥರಾಗಿರುವ ಗೋಪಿಸೆಟ್ಟಿ ಅವರು ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ತಂತ್ರಜ್ಞಾನ ಹಾಗೂ ಕಾರ್ಯಾಚರಣೆಗಳ ಕುರಿತು ಸಲಹೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಇನ್ಫೊಸಿಸ್‌ಗೆ ಸೇರುವ ಮೊದಲು ಆಕ್ಸೆಂಚರ್‌ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದ ಅವರು, ಐಬಿಎಂ, ಪಿಡಬ್ಲ್ಯೂಸಿ ಹಾಗೂ ಎಚ್‌ಸಿಎಲ್‌ನಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸಿಲುಕಿರುವ ಇತರೆ ಭಾರತೀಯರ ರಕ್ಷಣೆ ಹಾಗೂ ನಾಪತ್ತೆಯಾಗಿರುವವರ ಪತ್ತೆಗಾಗಿ ರಾಜತಾಂತ್ರಿಕ ಮತ್ತು ರಕ್ಷಣಾ ಮಟ್ಟದಲ್ಲಿ ತೀವ್ರ ಪ್ರಯತ್ನಗಳು ಮುಂದುವರಿದಿವೆ.
