ವಾಷಿಂಗ್ಟನ್, ಆ.29- ದಕ್ಷಿಣ ಅಮೆರಿಕದ ವೆನೆಜುವೆಲಾದ 65 ಶತಕೋಟಿ ಬ್ಯಾರೆಲ್ ತೈಲ ಸಂಗ್ರಹದ ಮೇಲೆ ನಿಯಂತ್ರಣ ಸಾಧಿಸಲು ಅಮೆರಿಕ ಒಪ್ಪಂದ ಮಾಡಿಕೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಮಾಹಿತಿ ನೀಡಿರುವ ಟ್ರಂಪ್, ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ, ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಹಾಗೂ ವೆನೆಜುವೆಲಾದ ಹಂಗಾಮಿ ಅಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರು ಒಪ್ಪಂದದ ಮಾತುಕತೆಯಲ್ಲಿ ಭಾಗವಹಿಸಿದ್ದರು ಎಂದು ತಿಳಿಸಿದ್ದಾರೆ.
ಅಮೆರಿಕವು ವೆನೆಜುವೆಲಾ ಜತೆ ವಿಶ್ವ ಇತಿಹಾಸದಲ್ಲೇ ಅತಿದೊಡ್ಡ ತೈಲ ಒಪ್ಪಂದ ಮಾಡಿಕೊಂಡಿದೆ ಎಂದು ಟ್ರಂಪ್ ತಮ್ಮ ಪೋಸ್ಟ್ನಲ್ಲಿ ಹೇಳಿದ್ದಾರೆ.
ವೆನೆಜುವೆಲಾ ಅಧ್ಯಕ್ಷ ನಿಕೊಲಸ್ ಮದುರೊ ಅವರನ್ನು ಅಮೆರಿಕ ಸೇನಾ ಕಾರ್ಯಾಚರಣೆ ನಡೆಸಿ ಬಂಧಿಸಿ, ಮಾದಕವಸ್ತು ಕಳ್ಳಸಾಗಣೆ ಹಾಗೂ ನಾರ್ಕೊ-ಭಯೋತ್ಪಾದನೆ ಆರೋಪದಡಿ ಅಮೆರಿಕಕ್ಕೆ ಕರೆದೊಯ್ದ ಸುಮಾರು ಒಂಬತ್ತು ತಿಂಗಳ ಬಳಿಕ ಈ ಒಪ್ಪಂದದ ಘೋಷಣೆ ಹೊರಬಿದ್ದಿದೆ.
ಇರಾನ್ ಯುದ್ಧ ಆರು ತಿಂಗಳು ಪೂರೈಸಿದರೂ ಅಂತ್ಯಗೊಳ್ಳುವ ಲಕ್ಷಣಗಳು ಕಾಣದ ಹಿನ್ನೆಲೆಯಲ್ಲಿ ಅಮೆರಿಕದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿರುವ ಬಗ್ಗೆ ಟ್ರಂಪ್ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ. ಈ ನಡುವೆ ಅಮೆರಿಕ ತನ್ನ ಕಾರ್ಯತಂತ್ರದ ಪೆಟ್ರೋಲಿಯಂ ಸಂಗ್ರಹದಿಂದ ತೈಲವನ್ನು ಬಳಸಿಕೊಂಡಿದ್ದು, ಆಗಸ್ಟ್ ಆರಂಭದಲ್ಲಿ ಅದರ ಪ್ರಮಾಣ 300 ಮಿಲಿಯನ್ ಬ್ಯಾರೆಲ್ಗಿಂತ ಕಡಿಮೆಯಾಗಿತ್ತು ಎಂದು ವರದಿಯಾಗಿದೆ.
ವೆನೆಜುವೆಲಾ ವಿಶ್ವದಲ್ಲೇ ಅತಿದೊಡ್ಡ ತೈಲ ಸಂಗ್ರಹ ಹೊಂದಿರುವ ರಾಷ್ಟ್ರವಾಗಿದ್ದು, ಭೂಗರ್ಭದಲ್ಲಿ ಅಂದಾಜು 303 ಶತಕೋಟಿ ಬ್ಯಾರೆಲ್ ಕಚ್ಚಾ ತೈಲ ಸಂಗ್ರಹವಿದೆ. ಇದು ಜಾಗತಿಕ ತೈಲ ಸಂಗ್ರಹದ ಸುಮಾರು ಶೇ.17ರಷ್ಟಾಗಿದೆ ಎಂದು ಅಮೆರಿಕದ ಇಂಧನ ಮಾಹಿತಿ ಆಡಳಿತ ತಿಳಿಸಿದೆ.
ಆದರೆ, ಹಳೆಯದಾದ ಮತ್ತು ಹದಗೆಟ್ಟಿರುವ ಮೂಲಸೌಕರ್ಯದ ಕಾರಣ ವೆನೆಜುವೆಲಾ ಪ್ರಸ್ತುತ ಜಾಗತಿಕ ತೈಲ ಉತ್ಪಾದನೆಯಲ್ಲಿ ಕೇವಲ ಶೇ.1ರಷ್ಟು ಮಾತ್ರ ಉತ್ಪಾದಿಸುತ್ತಿದೆ ಎಂದು ತಜ್ಞರು ಹೇಳಿದ್ದಾರೆ.
