ಬೆಂಗಳೂರು, ಆ.29- ಕಳೆದ ನಾಲ್ಕು ವರ್ಷಗಳಿಂದ ಕಡಿಮೆ ಗುಣಮಟ್ಟದ ಔಷಧಿಗಳು ಸರಬರಾಜಾಗಿರುವ ಕುರಿತು ತನಿಖೆ ನಡೆಸಿ ವರದಿ ನೀಡಲು ತಜ್ಞರ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಟ್ಟು 98 ವಿವಿಧ ಔಷಧಿಗಳ ಗುಣಮಟ್ಟದ ಬಗ್ಗೆ ಆಕ್ಷೇಪಗಳು ಕೇಳಿಬಂದಿವೆ. ಈ ಕುರಿತು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರೊಂದಿಗೆ ಚರ್ಚೆ ನಡೆಸಲಾಗಿದೆ. ತಜ್ಞರ ಸಮಿತಿಯನ್ನು ರಚಿಸಿ ಸಮಗ್ರ ವರದಿ ನೀಡುವಂತೆ ಸೂಚಿಸಲಾಗಿದೆ. ವರದಿ ಬಂದ ಬಳಿಕ ಲೋಪಗಳಿದ್ದರೆ ಅವುಗಳನ್ನು ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಔಷಧಿ ಸರಬರಾಜಿನ ಟೆಂಡರ್ ಪ್ರಕ್ರಿಯೆಯಲ್ಲಿ ಕೆಲವು ಲೋಪದೋಷಗಳಿರುವುದು ನಿಜ. ಟೆಂಡರ್ ಕರೆದು ಔಷಧಿ ಸರಬರಾಜಿನ ಗುತ್ತಿಗೆ ನೀಡುವ ಹಂತದಲ್ಲಿ ವರದಿಯಲ್ಲಿ ಆಕ್ಷೇಪಗಳು ಕಂಡುಬಂದರೆ ಟೆಂಡರ್ ರದ್ದುಪಡಿಸಬೇಕಾಗುತ್ತದೆ. ಬಳಿಕ ಹೊಸದಾಗಿ ಗುತ್ತಿಗೆ ನೀಡುವ ಪ್ರಕ್ರಿಯೆ ಆರಂಭಿಸಬೇಕಾಗುತ್ತದೆ. ಇದಕ್ಕೆ ಮತ್ತೆ ಆರು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಇದು ಪ್ರತಿಬಾರಿಯೂ ಎದುರಾಗುತ್ತಿರುವ ಸಾಮಾನ್ಯ ಸಮಸ್ಯೆಯಾಗಿದ್ದು, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.
ಔಷಧಿ ಸರಬರಾಜಿನ ಗುತ್ತಿಗೆ ಪಡೆದ ಕಂಪನಿಗಳು ನೇರವಾಗಿ ಜಿಲ್ಲಾ ಕೇಂದ್ರಗಳಿಗೆ ಔಷಧಿಗಳನ್ನು ಪೂರೈಸುತ್ತವೆ. ಹೀಗಾಗಿ ಸರಬರಾಜಿನಲ್ಲಿ ಯಾವುದೇ ವಿಳಂಬವಾಗುವುದಿಲ್ಲ. ವೈದ್ಯರು ಅಗತ್ಯವಿರುವ ಔಷಧಿಗಳ ಪಟ್ಟಿಯನ್ನು ನೀಡುತ್ತಾರೆ. ತಜ್ಞರ ಸಮಿತಿ ಅದನ್ನು ಪರಿಶೀಲಿಸಿ ಶಿಫಾರಸು ಮಾಡುತ್ತದೆ. ಬಳಿಕ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಟೆಂಡರ್ ಕರೆದು ಗುತ್ತಿಗೆ ನೀಡುತ್ತದೆ ಎಂದು ಸಚಿವರು ವಿವರಿಸಿದರು.
