Homeಬೆಂಗಳೂರುಬೆಂಗಳೂರಿಗರೇ ಹುಷಾರ್ : ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವವರ ಮೇಲೆ 24 ಗಂಟೆಯೂ ಹದ್ದಿನ ಕಣ್ಣು

ಬೆಂಗಳೂರಿಗರೇ ಹುಷಾರ್ : ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆಯುವವರ ಮೇಲೆ 24 ಗಂಟೆಯೂ ಹದ್ದಿನ ಕಣ್ಣು

ಬೆಂಗಳೂರು, ಆ.30– ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು ಹಾಗೂ ಖಾಲಿ ನಿವೇಶನಗಳಲ್ಲಿ ಅನಧಿಕೃತವಾಗಿ ಕಸ ಮತ್ತು ಕಟ್ಟಡ ತ್ಯಾಜ್ಯ ಸುರಿಯುವವರ ವಿರುದ್ಧ ಬೆಂಗಳೂರು ಉತ್ತರ ನಗರ ಪಾಲಿಕೆ (ಬಿಎನ್‌ಸಿಸಿ) ಕಣ್ಗಾವಲು ಮತ್ತಷ್ಟು ಬಿಗಿಗೊಳಿಸಿದೆ. ಈಗಿರುವ ಎರಡು ಪ್ರಹರಿ ವಾಹನಗಳ ಜೊತೆಗೆ ಹೊಸದಾಗಿ ಎರಡು ವಾಹನಗಳನ್ನು ಸೇರ್ಪಡೆಗೊಳಿಸಲಾಗಿದ್ದು, ಇನ್ನು ಮುಂದೆ ಒಟ್ಟು ನಾಲ್ಕು ವಾಹನಗಳು ದಿನದ 24 ಗಂಟೆಯೂ ಗಸ್ತು ನಡೆಸಲಿವೆ.

ಬೆಂಗಳೂರು ಉತ್ತರ ನಗರ ಪಾಲಿಕೆ ಆಯುಕ್ತ ಪೊಮಲ ಸುನೀಲ್‌ ಕುಮಾರ್‌ ಅವರು ನಾಲ್ಕು ಪ್ರಹರಿ ವಾಹನಗಳ ಕಾರ್ಯಾಚರಣೆಗೆ ಚಾಲನೆ ನೀಡಿದರು. ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವವರನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವ ಉದ್ದೇಶದಿಂದ ವಾಹನಗಳಿಗೆ ಅತ್ಯಾಧುನಿಕ ಜಿಪಿಎಸ್‌ ಆಧಾರಿತ ಡ್ಯಾಶ್‌ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

ಗಸ್ತಿನ ವೇಳೆ ನಿಯಮ ಉಲ್ಲಂಘನೆ ಕಂಡುಬಂದರೆ ಫೋಟೋ, ವಿಡಿಯೋ, ಸಮಯ ಹಾಗೂ ಸ್ಥಳದ ಮಾಹಿತಿಯೊಂದಿಗೆ ದೃಶ್ಯಗಳನ್ನು ದಾಖಲಿಸಲಾಗುತ್ತದೆ. ಈ ಮಾಹಿತಿಯ ಆಧಾರದ ಮೇಲೆ ಸಂಬಂಧಿಸಿದ ವ್ಯಕ್ತಿ, ಸಂಸ್ಥೆ ಅಥವಾ ವಾಹನವನ್ನು ಗುರುತಿಸಿ ದಂಡ ಸೇರಿದಂತೆ ಕಠಿಣ ಕ್ರಮ ಕೈಗೊಳ್ಳಲು ಪಾಲಿಕೆ ಮುಂದಾಗಿದೆ.

ಬ್ಲಾಕ್‌ ಸ್ಪಾಟ್‌ಗಳ ಮೇಲೆ ವಿಶೇಷ ನಿಗಾ

ಕಸ ಸುರಿಯುವಿಕೆ ಹೆಚ್ಚಾಗಿರುವ ಗಾರ್ಬೇಜ್‌ ವಲ್ನರಬಲ್‌ ಪಾಯಿಂಟ್ಸ್‌ (GVPs) ಹಾಗೂ ಬ್ಲಾಕ್‌ ಸ್ಪಾಟ್‌ಗಳು, ಪ್ರಮುಖ ರಸ್ತೆಗಳು, ಮಾರುಕಟ್ಟೆ ಪ್ರದೇಶಗಳು ಮತ್ತು ಖಾಲಿ ನಿವೇಶನಗಳ ಮೇಲೆ ಪ್ರಹರಿ ವಾಹನಗಳು ವಿಶೇಷ ನಿಗಾ ವಹಿಸಲಿವೆ. ಈಗಾಗಲೇ ಸ್ವಚ್ಛಗೊಳಿಸಿರುವ ಪ್ರದೇಶಗಳಲ್ಲಿ ಮತ್ತೆ ಕಸ ಸುರಿದು ಬ್ಲಾಕ್‌ ಸ್ಪಾಟ್‌ಗಳು ಮರುಸೃಷ್ಟಿಯಾಗದಂತೆ ತಡೆಯುವುದು ಈ ಕಾರ್ಯಾಚರಣೆಯ ಪ್ರಮುಖ ಉದ್ದೇಶವಾಗಿದೆ.

ರಸ್ತೆ ಬದಿ ಕಸ ಸುರಿಯುವುದು, ಕಟ್ಟಡ ಮತ್ತು ಅವಶೇಷ ತ್ಯಾಜ್ಯವನ್ನು ಅನಧಿಕೃತವಾಗಿ ವಿಲೇವಾರಿ ಮಾಡುವುದು, ವಾಣಿಜ್ಯ ಸಂಸ್ಥೆಗಳಿಂದ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವುದು ಹಾಗೂ ಸಾಗಣೆ ವೇಳೆ ರಸ್ತೆಯಲ್ಲಿ ಕಸ ಚೆಲ್ಲುವವರ ಮೇಲೂ ವಿಶೇಷ ನಿಗಾ ಇರಲಿದೆ.

ಕಂಟ್ರೋಲ್‌ ರೂಂನಿಂದ ನೇರ ಮೇಲ್ವಿಚಾರಣೆ

ನಾಲ್ಕು ಪ್ರಹರಿ ವಾಹನಗಳ ಸಂಚಾರ ಮತ್ತು ಕಾರ್ಯಾಚರಣೆಯನ್ನು ಆ್ಯಪ್‌ ಆಧಾರಿತ ರಿಮೋಟ್‌ ಆಕ್ಸೆಸ್‌ ಮೂಲಕ ಕಂಟ್ರೋಲ್‌ ರೂಂ ಹಾಗೂ ಹಿರಿಯ ಅಧಿಕಾರಿಗಳು ನೇರವಾಗಿ ಮೇಲ್ವಿಚಾರಣೆ ಮಾಡಲಿದ್ದಾರೆ. ವಾಹನಗಳಿಂದ ದಾಖಲಾಗುವ ದೃಶ್ಯಾವಳಿಗಳನ್ನು ಪಾಲಿಕೆಯ ಐಟಿ ತಂಡ ಪ್ರತಿದಿನ ಪರಿಶೀಲಿಸಲಿದೆ.

ಎರಡು ಶಿಫ್ಟ್‌ಗಳಲ್ಲಿ 24 ಗಂಟೆಯೂ ಕಾರ್ಯನಿರ್ವಹಿಸುವ ನಾಲ್ಕು ವಾಹನಗಳಲ್ಲಿ ಚಾಲಕರು ಹಾಗೂ ಮಾರ್ಷಲ್‌ಗಳು ಕರ್ತವ್ಯ ನಿರ್ವಹಿಸಲಿದ್ದು, ಒಟ್ಟು 24 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

“ಸಾರ್ವಜನಿಕ ಸ್ಥಳ ಕಸದ ತೊಟ್ಟಿಯಲ್ಲ. ಕಸ ಸುರಿದು ಯಾರಿಗೂ ಗೊತ್ತಾಗುವುದಿಲ್ಲ ಎಂಬ ಭಾವನೆ ಬೇಡ. ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು,” ಎಂದು ಆಯುಕ್ತ ಪೊಮಲ ಸುನೀಲ್‌ ಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಇನ್ನು ಮುಂದೆ ಪ್ರಹರಿ ವಾಹನಗಳು ಕೇವಲ ದೂರುಗಳಿಗೆ ಸ್ಪಂದಿಸುವ ವಾಹನಗಳಾಗಿರದೆ, ನಗರದಲ್ಲಿ ಅನಧಿಕೃತ ತ್ಯಾಜ್ಯ ವಿಲೇವಾರಿಯನ್ನು ಪತ್ತೆಹಚ್ಚುವ ಮೊಬೈಲ್‌ ಕಣ್ಗಾವಲು ಮತ್ತು ಜಾರಿ ಘಟಕಗಳಾಗಿ ಕಾರ್ಯನಿರ್ವಹಿಸಲಿವೆ.

RELATED ARTICLES
spot_img

Latest News