ಚಿತ್ರದುರ್ಗ, ಮಾ.17- ನನ್ನ ಜತೆ ಚರ್ಚಿಸದೆ ಶ್ರೀರಾಮುಲು ಅವರಿಗೆ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಿದ್ದಾರೆ ಎಂದು ಮಾಜಿ ಶಾಸಕ ಎಸ್.ತಿಪ್ಪೆಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿಯಲ್ಲಿ ಸಾಕಷ್ಟು ದುಡಿದಿರುವ ನನಗೆ ಈ ಹಿಂದೆ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದಿಂದ ಸ್ರ್ಪಧಿಸಲು ತಪ್ಪಿಸಲಾಗಿತ್ತು. ಆಗ ಶ್ರೀರಾಮುಲು ಅವರು ನನಗೆ ಹಲವಾರು ಭರವಸೆಗಳನ್ನು ನೀಡಿದ್ದರು. ಆದರೆ, ಈಗ ಅದನ್ನು ಮುರಿದಿದ್ದಾರೆ. ಇದಕ್ಕಾಗಿ ನಾನು ಬಳ್ಳಾರಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ರ್ಪಧಿಸಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಬಿ.ಎಸ್.ಯಡಿಯೂರಪ್ಪ ಆಗಲಿ, ಬಸವರಾಜ ಬೊಮ್ಮಾಯಿ ಅವರಾಗಲಿ, ನನ್ನ ಜತೆ ಮಾತನಾಡಲಿಲ್ಲ. ಮುಂದೆ ಚಿತ್ರದುರ್ಗಕ್ಕಾದರೂ ನನ್ನನ್ನು ಪರಿಗಣಿಸಬೇಕು ಎಂದು ಹೇಳಿದರೂ ಸ್ಪಂದಿಸಿಲ್ಲ. ಹೀಗಾಗಿ ಮುಂದೆ ನಾನು ಬಳ್ಳಾರಿ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ರ್ಪಧಿಸಲು ನಿರ್ಧರಿಸಿದ್ದೇನೆ ಎಂದರು.
ಕಳೆದ 2013ರಲ್ಲಿ ಬಿಆರ್‍ಎಸ್ ಪಕ್ಷದಿಂದ ಮೊಳಕಾಲ್ಮೂರು ಕ್ಷೇತ್ರದಿಂದ ಆಯ್ಕೆಯಾಗಿದ್ದ ಎಸ್.ತಿಪ್ಪೇಸ್ವಾಮಿ ಅವರು ಬಿಜೆಪಿಗೆ ಮರಳಿ ನಂತರ ಶ್ರೀರಾಮುಲುಗಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದರು. ಆದರೆ, ಈಗ ನನ್ನನ್ನು ಕಡೆಗಣಿಸಲಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕಾಂಗ್ರೆಸ್‍ಗೆ ವಲಸೆ ಹೋಗಿದ್ದ ತಿಪ್ಪೆಸ್ವಾಮಿ ಅವರನ್ನು ಕಳೆದ 2023ರ ರಾಜ್ಯ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶ್ರೀರಾಮುಲು ಅವರು ಮೊಳಕಾಲ್ಮೂರು ಕ್ಷೇತ್ರದಿಂದ ಟಿಕೆಟ್ ಕೊಡಿಸುವುದಾಗಿ ಹೇಳಿ ನಂತರ ಕೈಕೊಟ್ಟಿದ್ದರು. ಇದರಿಂದಾಗಿ ನಾನು ಪರಾಭವ ಅನುಭವಿಸಬೇಕಾಯಿತು ಎಂದು ಕಿಡಿಕಾರಿದರು.