Homeರಾಜ್ಯಸತೀಶ್‌ ಜಾರಕಿಹೊಳಿಗೆ ವಿರುದ್ಧ ಪಿಎಂಎಲ್‌ಎ ಅಡಿಯಲ್ಲಿ ತನಿಖೆ

ಸತೀಶ್‌ ಜಾರಕಿಹೊಳಿಗೆ ವಿರುದ್ಧ ಪಿಎಂಎಲ್‌ಎ ಅಡಿಯಲ್ಲಿ ತನಿಖೆ

ಬೆಂಗಳೂರು,ಸೆ.16- ರಾಜ್ಯ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ತನ್ನ ತನಿಖಾ ಜಾಲವನ್ನು ಮತ್ತಷ್ಟು ಬಿಗಿಗೊಳಿಸುತ್ತಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಹೊಸ ಪ್ರಕರಣ ದಾಖಲಿಸಲು ಸಿದ್ಧತೆ ನಡೆಸಿದೆ.

ಮೂಲಗಳ ಪ್ರಕಾರ, ಇತ್ತೀಚೆಗೆ ಬೆಂಗಳೂರು, ಬೆಳಗಾವಿ, ಗೋಕಾಕ್‌ ಹಾಗೂ ಕೋಲ್ಕತ್ತಾಗಳಲ್ಲಿ ಸಚಿವರ ಆಪ್ತರು ಮತ್ತು ಕುಟುಂಬಸ್ಥರ ನಿವಾಸಗಳ ಮೇಲೆ ನಡೆದ ಇಡಿ ದಾಳಿ ವೇಳೆ 3.3 ಕೋಟಿ ನಗದು, 15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಹಾಗೂ ಹಲವಾರು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಲಾಗಿತ್ತು.

ಹವಾಲಾ ದಂಧೆ ಹಾಗೂ ಗಡಿಯಾಚೆಗಿನ ವಿದೇಶಿ ವಹಿವಾಟು ನಡೆಸಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆಯನ್ನು ತೀವ್ರಗೊಳಿಸಲು ಇ.ಡಿ ನಿರ್ದೇಶಕ ರಾಹುಲ್‌ ನವೀನ್‌ ಅವರು ಕರ್ನಾಟಕ ಮತ್ತು ಗೋವಾ ವಲಯದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.ವಿದೇಶಿ ಹೂಡಿಕೆ, ಗಡಿಯಾಚೆಗಿನ ವ್ಯವಹಾರಗಳು ಹಾಗೂ ಹಣಕಾಸು ಅಕ್ರಮಗಳ ಆರೋಪಗಳ ಹಿನ್ನೆಲೆಯಲ್ಲಿ ನಡೆದಿರುವ ತನಿಖೆ ಇದೀಗ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಮುಂದಿನ ಹಂತಕ್ಕೆ ಸಾಗುವ ಸಾಧ್ಯತೆ ಕುರಿತು ವರದಿಗಳು ಹೊರಬಿದ್ದಿವೆ.

ಸೆ.9-10ರಂದು ಬೆಂಗಳೂರು, ಬೆಳಗಾವಿ, ಗೋಕಾಕ್‌ ಹಾಗೂ ಕೋಲ್ಕತ್ತಾದಲ್ಲಿ ಸತೀಶ್‌ ಜಾರಕಿಹೊಳಿ ಮತ್ತು ಅವರ ಆಪ್ತರಿಗೆ ಸಂಬಂಧಿಸಿದ 21 ಸ್ಥಳಗಳಲ್ಲಿ ಇಡಿ ಶೋಧ ನಡೆಸಿತ್ತು. ಈ ಕಾರ್ಯಾಚರಣೆಯಲ್ಲಿ 3.3 ಕೋಟಿ ನಗದು, ಸುಮಾರು 15 ಲಕ್ಷ ಮೌಲ್ಯದ ವಿದೇಶಿ ಕರೆನ್ಸಿ ಹಾಗೂ ವಿದೇಶಿ ಹೂಡಿಕೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಇಡಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇದುವರೆಗೆ ಈ ಕಾರ್ಯಾಚರಣೆ ಮುಖ್ಯವಾಗಿ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಇಎಂಎ)ವ್ಯಾಪ್ತಿಯಲ್ಲಿನ ಅಘೋಷಿತ ವಿದೇಶಿ ಹೂಡಿಕೆಗಳು, ಗಡಿಯಾಚೆಗಿನ ವ್ಯವಹಾರಗಳು ಮತ್ತು ಹಣಕಾಸು ಅಕ್ರಮಗಳ ಪರಿಶೀಲನೆಗೆ ಸಂಬಂಧಿಸಿದೆ ಎಂದು ಇಡಿ ಹೇಳಿದೆ. ಆದರೆ ಶೋಧ ಕಾರ್ಯದಲ್ಲಿ ದೊರೆತ ದಾಖಲೆಗಳು ಮತ್ತು ಹಣದ ವಹಿವಾಟಿನ ವಿವರಗಳ ಆಧಾರದ ಮೇಲೆ ಹಣದ ಮೂಲ, ಅದರ ವರ್ಗಾವಣೆ ಹಾಗೂ ಅಂತಿಮ ಬಳಕೆಯ ಬಗ್ಗೆ ತನಿಖೆ ವಿಸ್ತರಿಸುವ ಸಾಧ್ಯತೆ ಇದೆ ಎಂಬುದು ಈಗಿನ ಚರ್ಚೆಯ ಕೇಂದ್ರವಾಗಿದೆ. ಗುತ್ತಿಗೆದಾರರಿಂದ ಸಂಗ್ರಹಿಸಲಾಗಿದೆ ಎನ್ನಲಾದ ಹಣವನ್ನು ವಿದೇಶಿ ಆಸ್ತಿಗಳು ಹಾಗೂ ಆಫ್ರಿಕಾದ ಗಣಿಗಾರಿಕೆ ಉದ್ಯಮಗಳಲ್ಲಿ ಹೂಡಿಕೆ ಮಾಡಿರುವ ಆರೋಪಗಳನ್ನೂ ಇಡಿ ಪರಿಶೀಲಿಸುತ್ತಿದೆ.

ಕಾಂಗೋದ Magnitude Star SARL, Eldorado Mining Resource ಹಾಗೂ ಜಾಂಬಿಯಾದ Nava Aurum Mining ಸೇರಿದಂತೆ ಕೆಲವು ವಿದೇಶಿ ಸಂಸ್ಥೆಗಳಿಗೆ ಸಂಬಂಧಿಸಿದ ದಾಖಲೆಗಳು ತನಿಖಾಧಿಕಾರಿಗಳ ಗಮನಕ್ಕೆ ಬಂದಿವೆ ಎಂದು ವರದಿಯಾಗಿದೆ. ಇವುಗಳ ಕುರಿತು ಅಂತಿಮ ನಿರ್ಣಯ ತನಿಖೆ ಮತ್ತು ಕಾನೂನು ಪ್ರಕ್ರಿಯೆಯ ನಂತರವೇ ಸಾಧ್ಯ. ಇಡಿ ಕಾರ್ಯಾಚರಣೆಯಲ್ಲಿ ಪತ್ತೆಯಾದ 3.3 ಕೋಟಿ ಭಾರತೀಯ ಕರೆನ್ಸಿ ಮತ್ತು 15 ಲಕ್ಷದಷ್ಟು ವಿದೇಶಿ ಕರೆನ್ಸಿ ತನಿಖೆಯ ಪ್ರಮುಖ ಅಂಶವಾಗಿದೆ. ಹಣದ ಮೂಲ, ಅದರ ಮಾಲೀಕತ್ವ ಹಾಗೂ ವ್ಯವಹಾರಗಳಿಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಅದರ ಹೊಂದಾಣಿಕೆ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ಸತೀಶ್‌ ಜಾರಕಿಹೊಳಿ ಅವರು ವಶಪಡಿಸಿಕೊಂಡಿರುವ ಹಣ ತಮ ಕುಟುಂಬಕ್ಕೆ ಸೇರಿದ್ದಾಗಿದ್ದು, ಅದರ ಮೂಲವನ್ನು ದಾಖಲೆಗಳ ಮೂಲಕ ವಿವರಿಸುವುದಾಗಿ ಹೇಳಿರುವುದಾಗಿ ವರದಿಯಾಗಿದೆ.
ಇಡಿ ನಿರ್ದೇಶಕರಿಂದ ತನಿಖೆಗೆ ವೇಗ ಇದೇ ಸಂದರ್ಭದಲ್ಲಿ ಇಡಿ ನಿರ್ದೇಶಕ ರಾಹುಲ್‌ ನವೀನ್‌ ಅವರು ಸೆಪ್ಟೆಂಬರ್‌ 14-15ರಂದು ಬೆಂಗಳೂರಿನ ಐಐಎಂನಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಮೇಳನದಲ್ಲಿ ತನಿಖೆಗಳನ್ನು ವೇಗಗೊಳಿಸುವುದು, ವಿವಿಧ ತನಿಖಾ ಸಂಸ್ಥೆಗಳ ನಡುವೆ ಮಾಹಿತಿ ಹಂಚಿಕೆ ಹೆಚ್ಚಿಸುವುದು ಹಾಗೂ ಪ್ರಮುಖ ಪಿಎಂಎಲ್‌ಎ ಪ್ರಕರಣಗಳ ವಿಚಾರಣೆಯನ್ನು ತ್ವರಿತಗೊಳಿಸುವ ಕುರಿತು ಸೂಚನೆ ನೀಡಿದ್ದಾರೆ. ಪ್ರತಿ ವಲಯದಲ್ಲಿ ಕನಿಷ್ಠ 10 ಪ್ರಮುಖ ಪ್ರಕರಣಗಳನ್ನು ವೇಗವಾಗಿ ವಿಚಾರಣೆಗೆ ತರುವ ಗುರಿಯನ್ನೂ ಅವರು ಪ್ರಸ್ತಾಪಿಸಿದ್ದಾರೆ ಎಂದು ವರದಿಯಾಗಿದೆ.

ಇದರ ಬೆನ್ನಲ್ಲೇ ಕರ್ನಾಟಕಕ್ಕೆ ಸಂಬಂಧಿಸಿದ ಹಲವು ಪ್ರಮುಖ ಪ್ರಕರಣಗಳ ತನಿಖೆಗೆ ವೇಗ ನೀಡಲಾಗುತ್ತಿದೆ ಎಂಬ ವರದಿಗಳು ಮಹತ್ವ ಪಡೆದಿವೆ. ವಾಲೀಕಿ ಅಭಿವೃದ್ಧಿ ನಿಗಮದ ಹಣಕಾಸು ಅಕ್ರಮ, ಮುಡಾ, ಕೆಪಿಎಸ್‌‍ಸಿ ಅಕ್ರಮ ಸೇರಿದಂತೆ ವಿವಿಧ ಪ್ರಕರಣಗಳು ಈಗಾಗಲೇ ಇಡಿ ತನಿಖೆಯ ವ್ಯಾಪ್ತಿಗೆ ಬಂದಿವೆ. ಕೆಪಿಎಸ್‌‍ಸಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ತನಿಖೆಗಳು ಮುಂದುವರಿದಿದ್ದು, ಇತ್ತೀಚಿನ ನ್ಯಾಯಾಲಯದ ಬೆಳವಣಿಗೆಗಳೂ ಪ್ರಕರಣದ ವ್ಯಾಪ್ತಿಯನ್ನು ತೋರಿಸುತ್ತವೆ.

ಸತೀಶ್‌ ಜಾರಕಿಹೊಳಿ ವಿರುದ್ಧದ ಇಡಿ ಕ್ರಮ ರಾಜಕೀಯವಾಗಿಯೂ ಚರ್ಚೆಗೆ ಕಾರಣವಾಗಿದೆ. ಕಾಂಗ್ರೆಸ್‌‍ ನಾಯಕರು ಕೇಂದ್ರ ತನಿಖಾ ಸಂಸ್ಥೆಗಳ ಕ್ರಮವನ್ನು ರಾಜಕೀಯ ಉದ್ದೇಶಿತ ಎಂದು ಟೀಕಿಸಿರುವುದಾಗಿ ವರದಿಯಾಗಿದೆ. ಮತ್ತೊಂದೆಡೆ, ಇಡಿ ತನ್ನ ಕ್ರಮವನ್ನು ವಿದೇಶಿ ಹೂಡಿಕೆ, ಎಫ್‌ಇಎಂಎ ಉಲ್ಲಂಘನೆ ಮತ್ತು ಹಣಕಾಸು ಅಕ್ರಮಗಳ ತನಿಖೆಯ ಭಾಗವೆಂದು ಮುಂದಿಟ್ಟಿದೆ. ಹೀಗಾಗಿ, ಶೋಧ ಕಾರ್ಯಾಚರಣೆ, ದಾಖಲೆ ಮತ್ತು ಹಣ ವಶ ಹಣದ ಮೂಲ ಹಾಗೂ ವಿದೇಶಿ ವ್ಯವಹಾರಗಳ ಪರಿಶೀಲನೆ, ಅಗತ್ಯವಿದ್ದರೆ ಪಿಎಂಎಲ್‌ಎ ಅಡಿ ಮುಂದಿನ ಕ್ರಮ ಎಂಬ ಹಂತಗಳಲ್ಲಿ ಪ್ರಕರಣ ಸಾಗುವ ಸಾಧ್ಯತೆ ಈಗ ಗಮನ ಸೆಳೆಯುತ್ತಿದೆ. .

ಸೆಪ್ಟೆಂಬರ್‌ 9-10ರ ಶೋಧದಿಂದ ಆರಂಭವಾದ ಜಾರಕಿಹೊಳಿ ಪ್ರಕರಣದಲ್ಲಿ ಇಡಿ ಇದೀಗ ಹಣದ ಮೂಲ ಮತ್ತು ಅದರ ಅಂತಿಮ ಗಮ್ಯವನ್ನು ಪತ್ತೆಹಚ್ಚುವತ್ತ ಗಮನ ಹರಿಸಿರುವುದು ಪ್ರಮುಖ ಬೆಳವಣಿಗೆಯಾಗಿದೆ. ಮುಂದಿನ ದಿನಗಳಲ್ಲಿ ವಶಪಡಿಸಿಕೊಂಡ ದಾಖಲೆಗಳ ಪರಿಶೀಲನೆ, ಹಣಕಾಸು ವಹಿವಾಟಿನ ಜಾಡು ಹಾಗೂ ಸಂಬಂಧಪಟ್ಟ ವ್ಯಕ್ತಿಗಳ ಹೇಳಿಕೆಗಳು ಪ್ರಕರಣದ ದಿಕ್ಕನ್ನು ನಿರ್ಧರಿಸುವ ಸಾಧ್ಯತೆಯಿದೆ.

RELATED ARTICLES
spot_img

Latest News