Homeರಾಜ್ಯಮದ್ದೂರು ಗಣೇಶೋತ್ಸವ ವಿವಾದ : ಸರ್ಕಾರದ ವಿರುದ್ಧ ಆರ್‌.ಅಶೋಕ್‌ ವಾಗ್ದಾಳಿ

ಮದ್ದೂರು ಗಣೇಶೋತ್ಸವ ವಿವಾದ : ಸರ್ಕಾರದ ವಿರುದ್ಧ ಆರ್‌.ಅಶೋಕ್‌ ವಾಗ್ದಾಳಿ

ಮದ್ದೂರು,ಸೆ.16- ಗಣೇಶ ವಿಸರ್ಜನೆ ಮೆರವಣಿಗೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ರಾಜಕೀಯ ವಾಕ್ಸಮರ ತೀವ್ರಗೊಂಡಿದೆ. ಮದ್ದೂರಿನಲ್ಲಿ ಮಾತನಾಡಿದ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನೇತೃತ್ವದ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡಿ, ಗಣೇಶೋತ್ಸವ ಮೆರವಣಿಗೆಗಳ ವಿಚಾರದಲ್ಲಿ ಹಿಂದೂಗಳಿಗೆ ನಿರ್ಬಂಧ ವಿಧಿಸಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಹಿಂದೂಗಳ ಧಾರ್ಮಿಕ ಆಚರಣೆಗಳಿಗೆ ಸರ್ಕಾರ ಅಡ್ಡಿಪಡಿಸಬಾರದು. ರಾಜ್ಯ ಸರ್ಕಾರ ತಾಲಿಬಾನ್‌ ಸರ್ಕಾರ ಎಂದು ಆರೋಪಿಸಿ ಡಿಕೆಶಿ ಮಾಡುತ್ತಿರುವುದು ಡೋಂಗಿ ಹಿಂದುತ್ವ ಎಂದು ಟೀಕಿಸಿದರು. ಇತ್ತೀಚೆಗೆ ಮೈಸೂರು ಜಿಲ್ಲೆಯ ತೀ.ನರಸೀಪುರದಲ್ಲಿ ಪೊಲೀಸ್‌‍ ಅಧಿಕಾರಿಯೊಬ್ಬರು ಮಸೀದಿ ಬಳಿ ಮೆರವಣಿಗೆ ಮತ್ತು ಪಟಾಕಿ ಸಿಡಿಸುವ ವಿಚಾರದಲ್ಲಿ ಸಂಘಟಕರಿಗೆ ಎಚ್ಚರಿಕೆ ನೀಡಿದ ಘಟನೆ ರಾಜಕೀಯ ಚರ್ಚೆಗೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರದ ಕ್ರಮವನ್ನು ಪ್ರಶ್ನಿಸಿದೆ.

ಮಸೀದಿ ಮುಂದೆ ಗಣೇಶ ಮೆರವಣಿಗೆ ಹೋಗಲು ಅವಕಾಶ ಇಲ್ಲ ಎಂದು ಆದೇಶ ಹೊರಡಿಸಿ ಎಂದು ಡಿ.ಕೆ.ಶಿವಕುಮಾರ್‌ ಅವರಿಗೆ ಸವಾಲು ಹಾಕಿದ ಅಶೋಕ್‌, ಇದೇ ರೀತಿಯಲ್ಲಿ ಹಿಂದೂ ದೇವಸ್ಥಾನಗಳ ಮುಂದೆ ಇತರ ಧಾರ್ಮಿಕ ಮೆರವಣಿಗೆಗಳಿಗೂ ನಿರ್ಬಂಧ ವಿಧಿಸುವಂತೆ ಪ್ರಶ್ನಿಸಿದರು. ಹಿಂದೂಗಳು ಮಾತ್ರ ಮಸೀದಿ ಮುಂದೆ ಹೋಗಬಾರದಾ? ಎಂದು ಪ್ರಶ್ನಿಸಿದರು.

ಆಜಾನ್‌ಗಾಗಿ ಧ್ವನಿವರ್ಧಕ ಬಳಕೆಯ ಬಗ್ಗೆ ಪ್ರಸ್ತಾಪಿಸಿದ ಅಶೋಕ್‌, ಗಣೇಶೋತ್ಸವವು ವರ್ಷದಲ್ಲಿ ಒಂದು ಬಾರಿ ನಡೆಯುವ ಆಚರಣೆಯಾಗಿದ್ದು, ಮೆರವಣಿಗೆಯಲ್ಲಿ ಧ್ವನಿವರ್ಧಕ ಬಳಸುವುದನ್ನು ವಿರೋಧಿಸುವುದು ಸರಿಯಲ್ಲ ಎಂದು ವಾದಿಸಿದರು. ಱಱಡಿಕೆಶಿ ನಾಮ ಹಾಕಿದರೆ ಹಿಂದೂ ಆಗುವುದಿಲ್ಲ; ಚುನಾವಣೆಯಲ್ಲಿ ಮಾತ್ರ ಡೋಂಗಿ ಹಿಂದುತ್ವ ನಡೆಯುತ್ತದೆ ಎಂದು ಟೀಕಿಸಿದರು.

ಗಣೇಶೋತ್ಸವ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಾಗದೆ, ಹಿಂದೂ ಸಮಾಜದಲ್ಲಿ ಒಗ್ಗಟ್ಟು ಮತ್ತು ಹಿಂದುತ್ವದ ಬಗ್ಗೆ ಜಾಗೃತಿ ಮೂಡಿಸುವ ಸಾರ್ವಜನಿಕ ಉತ್ಸವವಾಗಬೇಕು ಎಂದು ಬಿಜೆಪಿ ನಾಯಕ ಸಿ.ಟಿ. ರವಿ ಹೇಳಿದ್ದಾರೆ.

ಮದ್ದೂರಿನಲ್ಲಿ ಗಣೇಶೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಮಾತನಾಡಿದ ಅವರು, ಹಿಂದುತ್ವ ದುರ್ಬಲವಾದರೆ ರಾಷ್ಟ್ರ ದುರ್ಬಲವಾಗುತ್ತದೆ. ಹಿಂದೂ ದುರ್ಬಲನಾದರೆ ಸಂವಿಧಾನ ಉಳಿಯುವುದಿಲ್ಲ. ದೇಶದಲ್ಲಿ ಜಾತ್ಯತೀತತೆ ಸತ್ತುಹೋಗುತ್ತದೆ ಎಂದು ಅಭಿಪ್ರಾಯಪಟ್ಟರು.
ಗಣೇಶೋತ್ಸವ ಕೇವಲ ಕಡುಬು ತಿನ್ನುವ ಅಥವಾ ಪೂಜೆ ಮಾಡುವ ಕಾರ್ಯಕ್ರಮವಾಗಿರದೆ, ಹಿಂದೂ ಸಮಾಜದ ಒಗ್ಗಟ್ಟನ್ನು ಪ್ರತಿಬಿಂಬಿಸುವ ಉತ್ಸವವಾಗಬೇಕು ಎಂದರು.

ವಿಧಾನಪರಿಷತ್‌ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, 108 ಗಣೇಶ ಮೂರ್ತಿಗಳ ಮೆರವಣಿಗೆ ನಡೆಯುತ್ತಿರುವುದು ಸಂತೋಷದ ವಿಚಾರ. ಆದರೆ ಕಳೆದ ಬಾರಿ ನಡೆದಂತಹ ಕಲ್ಲು ತೂರಾಟ ಹಾಗೂ ಗಲಭೆಯ ಘಟನೆಗಳು ಈ ಬಾರಿ ಯಾವುದೇ ಕಾರಣಕ್ಕೂ ಮರುಕಳಿಸಬಾರದು ಎಂದು ಹೇಳಿದರು.

ಕಳೆದ ವರ್ಷದ ಘಟನೆಯಲ್ಲಿ ಕಲ್ಲು ತೂರಾಟ ನಡೆದ ಬಳಿಕ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ಪ್ರತಿಭಟನೆಗಳು ನಡೆದಿದ್ದವು ಹಾಗೂ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಾಠಿಚಾರ್ಜ್‌ ನಡೆಸಿದ್ದರು. ಘಟನೆಯ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹವೂ ಕೇಳಿಬಂದಿತ್ತು. ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.

ಗಣೇಶ ಮೆರವಣಿಗೆಗೆ ಸರ್ಕಾರ ಹಲವು ಷರತ್ತುಗಳನ್ನು ವಿಧಿಸಿರುವುದನ್ನೂ ಪ್ರಶ್ನಿಸಿರುವ ಅವರು, ಸರ್ಕಾರ ಹಿಂದುತ್ವದ ವಿರೋಧಿ ಧೋರಣೆ ಅನುಸರಿಸುತ್ತಿದೆ ಎಂಬುದು ತಮ ಆರೋಪ ಎಂದು ಹೇಳಿದ ಅವರು, ಗಣೇಶೋತ್ಸವದಂತಹ ಧಾರ್ಮಿಕ ಆಚರಣೆಗಳಿಗೆ ಅತಿಯಾದ ನಿರ್ಬಂಧ ವಿಧಿಸುವ ಬದಲು ಎಲ್ಲರಿಗೂ ಸಮಾನ ಅವಕಾಶ ಮತ್ತು ಸುರಕ್ಷತೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

RELATED ARTICLES
spot_img

Latest News