Homeಅಂತಾರಾಷ್ಟ್ರೀಯಮಾದಕವಸ್ತು ಉತ್ಪಾದಕ ದೇಶಗಳ ಪಟ್ಟಿಯಲ್ಲಿ ಭಾರತ

ಮಾದಕವಸ್ತು ಉತ್ಪಾದಕ ದೇಶಗಳ ಪಟ್ಟಿಯಲ್ಲಿ ಭಾರತ

ವಾಷಿಂಗ್ಟನ್‌, ಸೆ.16- ಅಕ್ರಮ ಅಫೀಮು ಗಸಗಸೆ ಕೃಷಿ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸ್ವಾಗತಿಸಿದ್ದಾರೆ.

ಇದೇ ವೇಳೆ ಅಮೆರಿಕದ 2027ನೇ ಹಣಕಾಸು ವರ್ಷದ ಪ್ರಮುಖ ಮಾದಕವಸ್ತು ಸಾಗಣೆ ಅಥವಾ ಅಕ್ರಮ ಮಾದಕವಸ್ತು ಉತ್ಪಾದಕ ದೇಶಗಳ ಪಟ್ಟಿಯಲ್ಲಿ ಭಾರತ, ಚೀನಾ ಮತ್ತು ಪಾಕಿಸ್ತಾನ ಸೇರಿದಂತೆ 23 ದೇಶಗಳನ್ನು ಸೇರಿಸಲಾಗಿದೆ. ಅಮೆರಿಕ ಕಾಂಗ್ರೆಸ್‌ಗೆ ಸಲ್ಲಿಸಿರುವ ಅಧ್ಯಕ್ಷೀಯ ನಿರ್ಣಯದಲ್ಲಿ ಟ್ರಂಪ್‌, ಅಮೆರಿಕ-ಭಾರತ ಮಾದಕವಸ್ತು ನೀತಿ ಚೌಕಟ್ಟಿನಡಿ ಮುಂದಿನ ಸಹಕಾರವನ್ನು ಮುಂದುವರಿಸಲು ಬಯಸುವುದಾಗಿ ತಿಳಿಸಿದ್ದಾರೆ.

ಅಕ್ರಮ ಅಫೀಮು ಗಸಗಸೆ ಕೃಷಿ ನಿಯಂತ್ರಣ ಮತ್ತು ಪೂರೈಕೆ ಸರಪಳಿಯ ಸಮಗ್ರತೆಯನ್ನು ಬಲಪಡಿಸುವ ಭಾರತದ ಪ್ರಯತ್ನಗಳನ್ನು ಸ್ವಾಗತಿಸುವುದಾಗಿ ಅವರು ಹೇಳಿದ್ದಾರೆ.ಆದರೆ ಈ ಪಟ್ಟಿಯಲ್ಲಿ ದೇಶವೊಂದು ಸೇರಿರುವುದು ಅದರ ಸರ್ಕಾರದ ಪ್ರಸ್ತುತ ಮಾದಕವಸ್ತು ನಿಯಂತ್ರಣ ಪ್ರಯತ್ನಗಳು ಅಥವಾ ಅಮೆರಿಕದೊಂದಿಗಿನ ಸಹಕಾರದ ಮೌಲ್ಯಮಾಪನವಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

ಭೌಗೋಳಿಕ, ವಾಣಿಜ್ಯ ಮತ್ತು ಆರ್ಥಿಕ ಅಂಶಗಳಿಂದಾಗಿ ಮಾದಕವಸ್ತುಗಳು ಅಥವಾ ಅವುಗಳ ಮೂಲ ರಾಸಾಯನಿಕಗಳು ಸಾಗಾಟವಾಗುವ ಅಥವಾ ಉತ್ಪಾದನೆಯಾಗುವ ಸಾಧ್ಯತೆ ಇರುವ ದೇಶಗಳನ್ನು ಕಾನೂನಿನ ಪ್ರಕಾರ ಪಟ್ಟಿಗೆ ಸೇರಿಸಲಾಗುತ್ತದೆ. ಪಟ್ಟಿಯಲ್ಲಿರುವ ಇತರ ದೇಶಗಳೆಂದರೆ ಅಫ್ಘಾನಿಸ್ತಾನ, ಬಹಾಮಾಸ್‌, ಬೆಲೀಜ್‌, ಬೊಲಿವಿಯಾ, ಮ್ಯಾನ್ಮಾರ್‌, ಕೊಲಂಬಿಯಾ, ಕೋಸ್ಟರಿಕಾ, ಡೊಮಿನಿಕನ್‌ ರಿಪಬ್ಲಿಕ್‌, ಈಕ್ವೆಡಾರ್‌, ಎಲ್‌ ಸಾಲ್ವಡಾರ್‌, ಗ್ವಾಟೆಮಾಲಾ, ಹೈಟಿ, ಹೊಂಡುರಾಸ್‌, ಜಮೈಕಾ, ಲಾವೋಸ್‌, ಮೆಕ್ಸಿಕೊ, ನಿಕರಾಗುವಾ, ಪನಾಮಾ, ಪೆರು ಮತ್ತು ವೆನೆಜುವೆಲಾ.

ಈ 23 ದೇಶಗಳ ಪೈಕಿ ಅಫ್ಘಾನಿಸ್ತಾನ, ಬೊಲಿವಿಯಾ, ಮ್ಯಾನ್ಮಾರ್‌ ಮತ್ತು ಕೊಲಂಬಿಯಾ ಕಳೆದ 12 ತಿಂಗಳಲ್ಲಿ ಅಂತರರಾಷ್ಟ್ರೀಯ ಮಾದಕವಸ್ತು ನಿಯಂತ್ರಣ ಬದ್ಧತೆಗಳನ್ನು ಪಾಲಿಸಲು ಅಗತ್ಯ ಪ್ರಯತ್ನಗಳನ್ನು ತೋರಿಸುವಲ್ಲಿ ವಿಫಲವಾಗಿವೆ ಎಂದು ಅಮೆರಿಕ ಹೇಳಿದೆ.

ಚೀನಾದಿಂದ ಫೆಂಟನಿಲ್‌, ಮೆಥಾಂಫೆಟಮೈನ್‌ ಸೇರಿದಂತೆ ಸಂಶ್ಲೇಷಿತ ಮಾದಕವಸ್ತುಗಳ ತಯಾರಿಕೆಗೆ ಬಳಸುವ ಮೂಲ ರಾಸಾಯನಿಕಗಳ ಹರಿವನ್ನು ತಡೆಯಲು ಹೆಚ್ಚಿನ ಕ್ರಮ ಕೈಗೊಳ್ಳುವಂತೆ ಟ್ರಂಪ್‌ ಕರೆ ನೀಡಿದ್ದಾರೆ.

RELATED ARTICLES
spot_img

Latest News