Homeಬೆಂಗಳೂರುರಾಜಸ್ಥಾನದ ಯುವತಿ ಅಪಹರಣ ಯತ್ನ ಪ್ರಕರಣ : ಕಾರು ಚಾಲಕನಿಗಾಗಿ ಶೋಧ

ರಾಜಸ್ಥಾನದ ಯುವತಿ ಅಪಹರಣ ಯತ್ನ ಪ್ರಕರಣ : ಕಾರು ಚಾಲಕನಿಗಾಗಿ ಶೋಧ

ಬೆಂಗಳೂರು,ಸೆ.17-ನಗರದಲ್ಲಿ ನೆಲೆಸಿದ್ದ ರಾಜಸ್ಥಾನದ ಮೂಲದ ಯುವತಿಯನ್ನು ಅಪಹರಿಸಿಕೊಂಡು ಕರೆದೊಯ್ಯುವಾಗ ಅತೀ ವೇಗ ಹಾಗು ಅಜಾಗರೂಕತೆಯಿಂದ ಕಾರು ಚಾಲನೆ ಮಾಡಿ ಸರಣಿ ಅಪಘಾತವೆಸಗಿ ಪರಾರಿಯಾಗಿರುವ ಕಾರು ಚಾಲಕನಿಗಾಗಿ ಮಾಗಡಿ ರಸ್ತೆ ಠಾಣೆ ಪೊಲೀಸರು ಶೋಧ ಕೈಗೊಂಡಿದ್ದಾರೆ.

ಅಪಘಾತದಿಂದಾಗಿ ಗಾಯಗೊಂಡಿರುವ ಆರು ಮಂದಿಯ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ನೀಡಿದ ದೂರಿನನ್ವಯ ಮೂವರನ್ನು ಬಂಧಿಸಲಾಗಿದೆ. ಪ್ರತ್ಯಕ್ಷದರ್ಶಿಗಳ ಪ್ರಕಾರ ಕಾರಿನಲ್ಲಿ ನಾಲ್ವರು ಇದ್ದರು ಎಂದು ಗೊತ್ತಾಗಿದೆ.

ತಲೆಮರೆಸಿಕೊಂಡಿರುವ ಕಾರು ಚಾಲಕನಿಗಾಗಿ ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. ಘಟನೆ ವಿವರ:ರಾಜಸ್ಥಾನದ ಯುವತಿ ಪೂಜಾ ಎಂಬಾಕೆ ತಾನು ಪ್ರೀತಿಸುತ್ತಿದ್ದ ಯುವಕ ಓಂಪ್ರಕಾಶ್‌ ಜೊತೆ ಒಂಬತ್ತು ತಿಂಗಳ ಹಿಂದೆ ಪೋಷಕರ ವಿರೋಧದ ನಡುವೆಯೂ ವಿವಾಹವಾಗಿ ನಂತರ ಬೆಂಗಳೂರಿಗೆ ಬಂದು ಅಗ್ರಹಾರ ದಾಸರಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ವಾಸವಾಗಿದ್ದಾರೆ.

ಈ ನಡುವೆ ಯುವತಿ ಕುಟುಂಬಸ್ಥರು ಇವರ ಮೇಲೆ ಹಗೆ ಸಾಧಿಸುತ್ತಿದ್ದರು. ತಮ ಕುಟುಂಬದ ಯುವತಿಯನ್ನು ಕರೆದುಕೊಂಡು ಹೋಗಲು ರಾಜಸ್ಥಾನದಿಂದ ಬಂದಿದ್ದವರು ನಿನ್ನೆ ರಾತ್ರಿ ಯುವತಿಯನ್ನು ಅಪಹರಿಸಿಕೊಂಡು ಕಾರಿನಲ್ಲಿ ಹೋಗುತ್ತಿದ್ದಾಗ ರಕ್ಷಣೆಗಾಗಿ ಆಕೆ ಕೂಗಿಕೊಂಡಿದ್ದಾಳೆ.

ಸಾರ್ವಜನಿಕರು ಗಮನಿಸಿ ಕಾರನ್ನು ಹಿಂಬಾಲಿಸಿದಾಗ ಚಾಲನೆ ಮಾಡುತ್ತಿದ್ದವನು ಏಕಾಏಕಿ ಸಿನಿಮೀಯ ರೀತಿ ಚಾಲನೆ ಮಾಡಿಕೊಂಡು ಪರಾರಿಯಾಗುವ ವೇಳೆ ರ್ಯಾಶ್‌ ಡ್ರೈವ್‌ ಮಾಡಿದ ಪರಿಣಾಮ ಸುಮಾರು 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ ಹೊಡೆದಿದೆ.ಈ ಸರಣಿ ಅಪಘಾತದಿಂದಾಗಿ ಇಬ್ಬರು ಮಕ್ಕಳು ಸೇರಿದಂತೆ ಆರು ಮಂದಿ ಗಾಯಗೊಂಡಿದ್ದು, ಈ ಪೈಕಿ ಜಯಲಕ್ಷ್ಮೀ (57)ಎಂಬುವವರ ತಲೆಗೆ ಗಂಭೀರ ಪೆಟ್ಟಾಗಿದ್ದು, ಖಾಸಗಿ ಆಸ್ಪತ್ರೆಯ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಹರಣಕಾರರು ಕಾರು ನಿಲ್ಲಿಸದಿದ್ದಾಗ ಸಾರ್ವಜನಿಕರು ಹಿಂಬಾಲಿಸಿಕೊಂಡು ಹೋಗಿ ಕೊನೆಗೂ ಕಾರನ್ನು ತಡೆದು ಕಾರಿನಲ್ಲಿದ್ದವರನ್ನು ಹಿಡಿದುಕೊಂಡು ಥಳಿಸಿದ್ದಾರೆ. ಅಲ್ಲದೇ ಕಾರಿನ ಗಾಜುಗಳನ್ನು ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸುದ್ದು ತಿಳಿಯುತ್ತಿದ್ದಂತೆ ಮಾಗಡಿ ರಸ್ತೆ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೂವರನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES
spot_img

Latest News