ಬೆಂಗಳೂರು, ಸೆ.17- ಯುಪಿಐ ಬಳಕೆ ಸೇವಾ ಶುಲ್ಕ ವಿಧಿಸುವ ಮೂಲಕ ವ್ಯಾಪಾರಿಗಳು ಹಾಗೂ ಗ್ರಾಹಕರ ಮೇಲೆ ಕೇಂದ್ರ ಸರ್ಕಾರ ಸರ್ಜಿಕಲ್ ಸ್ಟ್ರೈಕ್ ಮಾಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯ ಅಂಧಭಕ್ತರಿಗೆ ಈಗ ಪಶ್ಚಾತ್ತಾಪವಾಗುತ್ತಿದೆ. ಡಿಜಿಟಲ್ ಇಂಡಿಯಾ ಎಂದು ಹೇಳಿ, ಈಗ ಆದರ ಹೆಸರಿನಲ್ಲೂ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಯುಪಿಐ ಸೇವಾ ಶುಲ್ಕವನ್ನು ವರ್ತಕರು ಜನಸಾಮಾನ್ಯರಿದಂಲೇ ವಸೂಲಿ ಮಾಡುತ್ತಾರೆ. ಇದರಿಂದ ಗ್ರಾಹಕರಿಗೂ ತೊಂದರೆಯಾಗುತ್ತದೆ. ವ್ಯಾಪಾರ ವಹಿವಾಟುಗಳಿಗೂ ತೊಂದರೆಯಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಬಿಜೆಪಿ ಪಾದಯಾತ್ರೆಯಲ್ಲಿ ಆ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ರೈತರೊಂದಿಗೆ ಸಂವಾದ ನಡೆಸಿರುವುದನ್ನು ಪ್ರಶ್ನಿಸಿದರು. ನಿಜವಾದ ರೈತರಲ್ಲದ ಇಸ್ಪೀಟ್ ಗಿರಾಕಿಗಳೊಂದಿಗೆ ಬಿಜೆಪಿಯವರು ಸಂವಾದ ನಡೆಸಿದ್ದಾರೆ ಎಂದು ಹೇಳಿದರು. ಗಂಗಾವತಿಯಲ್ಲಿ ವಂದೇ ಮಾತರಂ ಗೀತೆಯನ್ನು ಸ್ಥಳೀಯ ಶಾಸಕರ ಒತ್ತಡಕ್ಕೆ ಮಣಿದು, ಪೂರ್ಣ ಪ್ರಮಾಣದಲ್ಲಿ ಹಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು. ಎರಡು ಚರಣ ಮಾತ್ರ ಹಾಡಬೇಕೆಂದು ಸರ್ಕಾರ ಸೂಚನೆ ನೀಡಿದೆ. ಅದನ್ನು ಉಲ್ಲಂಘಿಸಿ ಗಂಗಾವತಿ ಶಾಸಕ, ಜನಾರ್ದನ್ ರೆಡ್ಡಿ ಹೇಳಿದ್ದರೆಂದು ಪೂರ್ಣ ಪ್ರಮಾಣದಲ್ಲಿ ವಂದೇ ಮಾತರಂ ಗೀತೆ ಹಾಡಿರುವುದು ಸರಿಯಲ್ಲ. ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಮಾಜಿ ಸಚಿವ ಜನಾರ್ದನ್ ರೆಡ್ಡಿ ಅವರಿಗೆ ಮದ ಏರಿದೆ. ಹಾಗೆಂದು ನನ್ನ ವಿರುದ್ಧ ಮಾತನಾಡಿದರೆ, ಸುಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿ ಪುರಸ್ಕೃತರಾದ ಹಿರಿಯ ನಟ ಅನಂತನಾಗ್ ಅವರನ್ನು ತಾವೇ ಖುದ್ದಾಗಿ ಭೇಟಿ ಮಾಡಿ, ಇದೇ 20ರಂದು ಸನಾನಿಸುತ್ತೇನೆ. ಪ್ರಶಸ್ತಿ ಅನಂತನಾಗ್ ಅವರಿಗಷ್ಟೇ ಅಲ್ಲ, ಕನ್ನಡಿಗರಿಗೆ ಸಂದ ಗೌರವ ಎಂದರು.
ಬರ ಪೀಡಿತ ತಾಲ್ಲೂಕುಗಳ ಘೋಷಣೆಯ ವಿಚಾರದಲ್ಲೂ ಬಾಕಿ ತಾಲ್ಲೂಕುಗಳ ಪರಿಶೀಲನೆ ನಡೆಯುತ್ತಿದೆ. ಮೂರನೇ ಹಂತದಲ್ಲಿ ಮತ್ತಷ್ಟು ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಲಾಗುತ್ತದೆ ಎಂದರು.ಎಚ್.ಡಿ.ಕುಮಾರಸ್ವಾಮಿಯವರು ಕೇಂದ್ರ ಸರ್ಕಾರದಲ್ಲಿ ಪ್ರಬಲ ಖಾತೆಯ ಸಚಿವರಾಗಿದ್ದಾರೆ. ಅವರು ಪ್ರಧಾನಿಯವರನ್ನು ಭೇಟಿ ಮಾಡಿ ಬರ ಘೋಷಣೆಯ ನಿಯಮಾವಳಿಗಳನ್ನು ಸರಳೀಕರಣ ಮಾಡಿಸಲು ಒತ್ತಡ ಹೇರಲಿ ಎಂದು ಹೇಳಿದರು.
