ಬೆಂಗಳೂರು,ಸೆ.17- ಯುಪಿಐ ವಹಿವಾಟು ಮೇಲಿನ ಹೆಚ್ಚುವರಿ ಶುಲ್ಕದ ಪ್ರಸ್ತಾವನೆಯನ್ನು ಕೂಡಲೇ ಹಿಂಪಡೆಯಬೇಕು ಹಾಗೂ ದೇಶದ ಜನರ ಮೇಲಿನ ಆರ್ಥಿಕ ಹೊರೆಯನ್ನು ನಿಲ್ಲಿಸಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮನೋಹರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈಗಾಗಲೇ ಡಿಜಿಟಲ್ ಪಾವತಿಗಳು ಜನರ ದೈನಂದಿನ ಜೀವನದ ಅವಿಭಾಜ್ಯ ಭಾಗವಾಗಿರುವ ಸಂದರ್ಭದಲ್ಲಿ, ಅದರ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವ ಯಾವುದೇ ಕ್ರಮವು ಸಾಮಾನ್ಯ ಜನರು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ಮತ್ತೊಂದು ಇದು ಆರ್ಥಿಕ ಹೊರೆಯಾಗಲಿದೆ ಹಾಗೂ ಕೇಂದ್ರ ಸರ್ಕಾರ ನಡೆಸುತ್ತಿರುವ ದಬ್ಬಾಳಿಕೆಯು ಆಗಿದೆ ಎಂದು ಮನೋಹರ್ ಹೇಳಿದರು.
2,000ಕ್ಕಿಂತ ಹೆಚ್ಚಿನ ಪ್ರತಿಯೊಂದು ವಹಿವಾಟಿಗೂ ಶುಲ್ಕ ವಿಧಿಸುವ ಪ್ರಸ್ತಾವನೆಯಿಂದ ದಿನನಿತ್ಯದ ವ್ಯವಹಾರಗಳಲ್ಲಿ ಹೆಚ್ಚುವರಿ ವೆಚ್ಚ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಕೇಂದ್ರ ಸರ್ಕಾರವು ಈ ಪ್ರಸ್ತಾವನೆ ಕುರಿತು ಸ್ಪಷ್ಟನೆ ನೀಡಬೇಕು ಮತ್ತು ಜನಸಾಮಾನ್ಯರ ಮೇಲೆ ಹೆಚ್ಚುವರಿ ಹೊರೆ ಬೀಳದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಒಂದೆಡೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಆಹಾರ, ಸಾರಿಗೆ ಮತ್ತು ಕುಟುಂಬದ ಖರ್ಚುಗಳನ್ನು ನಿರ್ವಹಿಸುವುದು ಸಾಮಾನ್ಯ ಕುಟುಂಬಗಳಿಗೆ ಸವಾಲಾಗಿರುವ ಸಂದರ್ಭದಲ್ಲಿ, ಮತ್ತೊಂದೆಡೆ ಡಿಜಿಟಲ್ ಪಾವತಿಗಳ ಮೇಲೂ ಹೆಚ್ಚುವರಿ ಶುಲ್ಕ ವಿಧಿಸುವ ಪ್ರಸ್ತಾವನೆ ಜನರ ಮೇಲಿನ ಆರ್ಥಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸುವ ಆತಂಕ ಮೂಡಿಸಿದೆ ಎಂದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎ. ಆನಂದ್, ಜಿ ಪ್ರಕಾಶ್, ಲಕ್ಷ್ಮಿನಾರಾಯಣ್, ಉಮೇಶ್, ಆನಂದ್ , ಪುಟ್ಟರಾಜು , ಚಂದ್ರಶೇಖರ್, ಕುಶಾಲ್ ಹರವೇಗೌಡ, ರಂಜೀತ್ ಕುಮಾರ್ ಮಾಧವಹನೂರು, ಪ್ರವೀಣ್ ರಾವ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
