ತುಮಕೂರು,ಸೆ.19- ನನ್ನ ಮಾತು ನಡೆಯುವುದಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಅವರನ್ನೇ ಕೇಳಬೇಕು. ಏನು ನಡೆದಿದೆ, ಏನು ನಡೆದಿಲ್ಲ ಎಂಬುದನ್ನು ಅವರೇ ಸ್ಪಷ್ಟಪಡಿಸುತ್ತಾರೆ ಎಂದು ಮಾಜಿ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ತರಲಾಗಿದ್ದು, ಅವರನ್ನು ಪ್ರಬಲ ಸಮುದಾಯದ ನಾಯಕನಾಗಿ ಗುರುತಿಸಲಾಗಿದೆ. ಆದರೆ ಅವರು ನಾಯಕರು ಎಂದು ಜನ ಒಪ್ಪಿಕೊಳ್ಳುತ್ತಾರೆಯೇ ಅಥವಾ ಇಲ್ಲವೇ ಎಂಬುದು ಮುಂದಿನ ಚುನಾವಣೆಯಲ್ಲಿ ನಿರ್ಧಾರವಾಗಲಿದೆ ಎಂದು ಹೇಳಿದರು.
ಸಿದ್ದರಾಮಯ್ಯ ಪ್ರಶ್ನಾತೀತ ನಾಯಕ :
ಸಿದ್ದರಾಮಯ್ಯ ಅವರು ಯಾಕೆ ಹಿಂದೆ ಸರಿಯಬೇಕು? ಅವರು ಪ್ರಶ್ನಾತೀತ ನಾಯಕ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಅವರು ನೇಪಥ್ಯಕ್ಕೆ ಸರಿಯುವಂತಹ ಪರಿಸ್ಥಿತಿ ಸದ್ಯಕ್ಕೆ ಬಂದಿಲ್ಲ. ಸಿದ್ದರಾಮಯ್ಯ ಅವರು ಸಕ್ರಿಯವಾಗಿ ರಾಜಕಾರಣದಲ್ಲಿ ಮುಂದುವರಿಯುತ್ತಾರೆ. ರಾಜಕಾರಣದಲ್ಲಿ ಏರಿಳಿತಗಳು ಸಾಮಾನ್ಯ ಎಂದು ಅವರು ಹೇಳಿದರು.
ಅಪೆಕ್್ಸ ಬ್ಯಾಂಕ್ ಚುನಾವಣೆ ಮುಗಿದ ಅಧ್ಯಾಯ :
ಅಪೆಕ್್ಸ ಬ್ಯಾಂಕ್ ಚುನಾವಣೆ ಈಗ ಮುಗಿದ ಅಧ್ಯಾಯ. ಸಿದ್ದರಾಮಯ್ಯ ಅವರು ನನ್ನ ಪರವಾಗಿ ಪ್ರಾಮಾಣಿಕ ಪ್ರಯತ್ನ ಮಾಡಿದರು. ಆದರೆ ಆ ಪ್ರಯತ್ನ ಫಲ ನೀಡಲಿಲ್ಲ. ರಾಜಕಾರಣದಲ್ಲಿ ಪ್ರತಿನಿತ್ಯ ಹತ್ತಾರು ಸಮಸ್ಯೆಗಳು ಎದುರಾಗುತ್ತವೆ. ಕೆಲವು ಸಮಸ್ಯೆಗಳು ಬಗೆಹರಿಯುತ್ತವೆ, ಕೆಲವು ಬಗೆಹರಿಯುವುದಿಲ್ಲ. ಅದರಿಂದ ಯಾರೂ ದುರ್ಬಲರಾಗುವುದಿಲ್ಲ. ನನಗೆ ಯಾವುದೇ ಹಿನ್ನಡೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಂದಿನ ದಿನಗಳಲ್ಲಿ ನಾನು ಚುನಾವಣೆಗೆ ಸ್ಪರ್ಧಿಸುತ್ತೇನೆ. ಕ್ಷೇತ್ರಗಳ ಡಿಲಿಮಿಟೇಷನ್ ಆಗುವುದು ಖಚಿತ. ಮಧುಗಿರಿ ಲೋಕಸಭಾ ಕ್ಷೇತ್ರವಾಗುವ ಸಾಧ್ಯತೆ ಇದೆ. ಮಹಿಳಾ ಮೀಸಲಾತಿ ಜಾರಿಗೆ ಬಂದರೆ ಅದನ್ನು ನಾವು ಬೆಂಬಲಿಸುತ್ತೇವೆ. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಯಾವುದೇ ಮಸೂದೆ ಅಥವಾ ಕಾರ್ಯಕ್ರಮವನ್ನು ವೇಗವಾಗಿ ಜಾರಿಗೆ ತರಲು ಸಾಧ್ಯ ಎಂದು ರಾಜಣ್ಣ ಹೇಳಿದರು.
