Homeರಾಜ್ಯರೈತರ ಸಮಸ್ಯೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಿರಿ :ಸರ್ಕಾರಕ್ಕೆ ವಿಜಯೇಂದ್ರ ಒತ್ತಾಯ

ರೈತರ ಸಮಸ್ಯೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಿರಿ :ಸರ್ಕಾರಕ್ಕೆ ವಿಜಯೇಂದ್ರ ಒತ್ತಾಯ

ರಾಯಚೂರು,ಸೆ.3- ಎಸ್‌‍ಸಿಪಿ-ಟಿಎಸ್‌‍ಪಿ ಹಣವನ್ನು ಗ್ಯಾರಂಟಿಗಳಿಗೆ ಬಳಸುತ್ತಿದೆ. ಬರಪೀಡಿತ ರೈತರ 5 ಲಕ್ಷದವರೆಗೆ ಬೆಳೆ ಸಾಲ ಮನ್ನಾ ಮಾಡಿ, ರೈತರ ಸಮಸ್ಯೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಿರಿ ಎಂದು ಬಿಜೆಪಿ ರಾಜ್ಯಧ್ಯಕ್ಷ ಬಿ,ವೈ ವಿಜಯೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬಿಜೆಪಿಯ ಮೂರನೇ ದಿನದ ಪಾದಯಾತ್ರೆಗೆ ಚಾಲನೆ ನೀಡುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವೈಫಲ್ಯಗಳು, ದಲಿತರು ಹಾಗೂ ಶೋಷಿತ ಸಮುದಾಯಗಳನ್ನು ಕೇವಲ ಓಟ್‌ ಬ್ಯಾಂಕ್‌ ಆಗಿ ಬಳಸಿಕೊಳ್ಳುತ್ತಿದೆ. ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಎಸ್‌‍ಸಿಪಿ-ಟಿಎಸ್‌‍ಪಿ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

ರಾಜ್ಯದ ಅನ್ನದಾತ ಗಂಭೀರ ಸಂಕಷ್ಟದಲ್ಲಿ ಸಿಲುಕಿದ್ದರೂ ಕಾಂಗ್ರೆಸ್‌‍ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ 3,655 ರೈತರು ಆತಹತ್ಯೆಗೆ ಶರಣಾಗಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲೇ 937 ರೈತರು ಆತಹತ್ಯೆ ಮಾಡಿಕೊಂಡಿದ್ದಾರೆ. ಕಲಬುರಗಿಯಲ್ಲಿ 295, ರಾಯಚೂರಿನಲ್ಲಿ 169, ಬೀದರ್‌ 220 ಹಾಗೂ ಕೊಪ್ಪಳದಲ್ಲಿ 80ಕ್ಕೂ ಹೆಚ್ಚು ರೈತರ ಆತಹತ್ಯೆ ಪ್ರಕರಣಗಳು ನಡೆದಿವೆ. ಈ ಅಂಕಿ-ಅಂಶಗಳು ಸರ್ಕಾರದ ರೈತ ವಿರೋಧಿ ಧೋರಣೆಯನ್ನು ತೋರಿಸುತ್ತವೆ ಎಂದು ಕಿಡಿಕಾರಿದರು.

ಪ್ರಿಯಾಂಕ್‌ ಖರ್ಗೆ ಅವರೇ, ಕಲಬುರಗಿ ಜಿಲ್ಲೆಯಲ್ಲೇ 295 ರೈತರು ಆತಹತ್ಯೆ ಮಾಡಿಕೊಂಡಿರುವ ವಿಚಾರವನ್ನು ಗಂಭೀರವಾಗಿ ಗಮನಿಸಬೇಕು. ಅನ್ನದಾತನ ಸಂಕಷ್ಟಕ್ಕೆ ಸರ್ಕಾರ ಮಿಡಿಯುವ ಕಾಳಜಿ ತೋರಬೇಕು ಎಂದು ವಿಜಯೇಂದ್ರ ಹೇಳಿದರು. ರಾಜ್ಯದ ಸುಮಾರು 190ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರದ ಪರಿಸ್ಥಿತಿ ನಿರ್ಮಾಣವಾಗಿದ್ದು, ಬರಪೀಡಿತ ಪ್ರದೇಶಗಳ ರೈತರ ಬೆಳೆ ಸಾಲವನ್ನು 5 ಲಕ್ಷದವರೆಗೆ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.

ಜೋಳದ ಬೆಂಬಲ ಬೆಲೆಯ ಸುಮಾರು 145 ಕೋಟಿ ಬಾಕಿ ಇದ್ದು, ಅದನ್ನು ಕೂಡಲೇ ರೈತರಿಗೆ ಪಾವತಿಸಬೇಕು. ಹೈನುಗಾರರಿಗೆ ನೀಡಬೇಕಾದ ಪ್ರೋತ್ಸಾಹಧನವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾಲು ಉತ್ಪಾದಕರಿಗೆ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಈಗ ಆ ಪ್ರೋತ್ಸಾಹಧನ ಕೂಡ ಬಿಡುಗಡೆಯಾಗುತ್ತಿಲ್ಲ. ರೈತರ ಬದುಕಿನೊಂದಿಗೆ ಸರ್ಕಾರ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

ನಾಡಿನ ರೈತರ ಸಮಸ್ಯೆಗಳ ಕುರಿತು ಸಮಗ್ರವಾಗಿ ಚರ್ಚಿಸಲು ರಾಜ್ಯ ಸರ್ಕಾರ ವಿಶೇಷ ಅಧಿವೇಶನವನ್ನು ಕರೆಯಬೇಕು. ಹೊಸಪೇಟೆ ಡ್ಯಾಂನಲ್ಲಿ ಹೂಳೆತ್ತುವ ಕಾರ್ಯ ಕೈಗೊಳ್ಳಬೇಕು. 31 ಟಿಎಂಸಿ ನೀರನ್ನು ಹಿಡಿದಿಟ್ಟುಕೊಳ್ಳುವ ಉದ್ದೇಶದಿಂದ ಸಮಾನಾಂತರ ಹಂಚಿಕೆ ವ್ಯವಸ್ಥೆಗೆ ನವಲೆ ಜಲಾಶಯಕ್ಕೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ರಿಯಲ್‌ ಎಸ್ಟೇಟ್‌ ವಿಚಾರಗಳ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ ಎಂದು ಟೀಕಿಸಿದ ವಿಜಯೇಂದ್ರ, ಈಗಲಾದರೂ ಕನಿಷ್ಠ ಶೇ.25ರಷ್ಟು ಗಮನವನ್ನು ಅನ್ನದಾತನ ಸಮಸ್ಯೆಗಳ ಕಡೆಗೆ ಹರಿಸಿ ಎಂದು ಹೇಳಿದರು. ಮುಖ್ಯಮಂತ್ರಿಗಳೇ, ರೈತರ ಸಮಸ್ಯೆಗಳ ಬಗ್ಗೆ ಗಮನಹರಿಸಿ ರಾಜ್ಯದ ರೈತರು ಸಂಕಷ್ಟದಲ್ಲಿದ್ದಾರೆ. ಅವರ ಸಮಸ್ಯೆಗಳಿಗೆ ಪರಿಹಾರ ನೀಡುವುದು ಸರ್ಕಾರದ ಮೊದಲ ಆದ್ಯತೆಯಾಗಬೇಕು ಎಂದರು.

ಬಿಜೆಪಿ ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಕಾಂಗ್ರೆಸ್‌‍ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಆರ್‌.ಬಿ. ಹರಿಪ್ರಸಾದ್‌ ಕರೆ ನೀಡಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಾದಯಾತ್ರೆಯನ್ನು ತಡೆಯುವುದಾದರೆ ತಡೆಯಿರಿ. ನಮನ್ನು ಗಲ್ಲಿಗೇರಿಸಿದರೂ ಪರವಾಗಿಲ್ಲ. ಆದರೆ ಮೊದಲು ರೈತರ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ತಿರುಗೇಟು ನೀಡಿದರು.

RELATED ARTICLES
spot_img

Latest News