Homeಬೆಂಗಳೂರುಬೆಂಗಳೂರು ಪಾರ್ಕಿಂಗ್‌ ನೀತಿ ಕರಡು ಬಿಡುಗಡೆ : ಆಕ್ಷೇಪಣೆ ಸಲ್ಲಿಕೆಗೆ ಸೆ.10 ಅವಕಾಶ

ಬೆಂಗಳೂರು ಪಾರ್ಕಿಂಗ್‌ ನೀತಿ ಕರಡು ಬಿಡುಗಡೆ : ಆಕ್ಷೇಪಣೆ ಸಲ್ಲಿಕೆಗೆ ಸೆ.10 ಅವಕಾಶ

ಬೆಂಗಳೂರು, ಸೆ.3- ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಅವ್ಯವಸ್ಥಿತ ಪಾರ್ಕಿಂಗ್‌ಗೆ ಕಡಿವಾಣ ಹಾಕಲು ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ಸಮಗ್ರ ಪಾರ್ಕಿಂಗ್‌ ನಿಯಮಗಳನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. 2021ರಲ್ಲಿ ರಾಜ್ಯ ಸರ್ಕಾರ ಅನುಮೋದಿಸಿದ್ದ ಬೆಂಗಳೂರು ಪಾರ್ಕಿಂಗ್‌ ನೀತಿಯ ಆಧಾರದ ಮೇಲೆ ಕರಡು ನಿಯಮಗಳನ್ನು ರೂಪಿಸಲಾಗಿದ್ದು, ಸಾರ್ವಜನಿಕರಿಂದ ಸೆ.10ರೊಳಗೆ ಸಲಹೆ-ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.

ಬೆಂಗಳೂರಿನಲ್ಲಿ ಪ್ರಸ್ತುತ 1.28 ಕೋಟಿಗೂ ಅಧಿಕ ನೋಂದಾಯಿತ ವಾಹನಗಳಿದ್ದು, ಹೊರ ಜಿಲ್ಲೆ ಹಾಗೂ ರಾಜ್ಯಗಳಲ್ಲಿ ನೋಂದಣಿಯಾಗಿದ್ದರೂ ನಗರದಲ್ಲಿ ಸಂಚರಿಸುವ ಸುಮಾರು 15ರಿಂದ 20 ಲಕ್ಷ ವಾಹನಗಳನ್ನು ಸೇರಿಸಿದರೆ ಒಟ್ಟು ವಾಹನಗಳ ಸಂಖ್ಯೆ ಸುಮಾರು 1.5 ಕೋಟಿ ಎಂದು ಅಂದಾಜಿಸಲಾಗಿದೆ. ಈ ಪೈಕಿ ವಾಹನಗಳು ಸುಮಾರು ಶೇ.95ರಷ್ಟು ಸಮಯ ಮನೆ, ಕಚೇರಿ ಅಥವಾ ಇತರೆ ಸ್ಥಳಗಳಲ್ಲಿ ನಿಲುಗಡೆಗೊಂಡಿರುತ್ತವೆ. ಹೀಗಾಗಿ ಪಾರ್ಕಿಂಗ್‌ ವ್ಯವಸ್ಥೆ ನಗರದ ಪ್ರಮುಖ ಸವಾಲಾಗಿ ಪರಿಣಮಿಸಿದೆ.ರಸ್ತೆ ಅರ್ಧದಷ್ಟು ಕಬಳಿಕೆವಾಹನ ಸಂಚಾರಕ್ಕಾಗಿ ನಿರ್ಮಿಸಿರುವ ರಸ್ತೆಗಳ ದೊಡ್ಡ ಭಾಗ ಪಾರ್ಕಿಂಗ್‌ಗೆ ಬಳಕೆಯಾಗುತ್ತಿರುವುದರಿಂದ ರಸ್ತೆಯ ಸಂಚಾರ ಸಾಮರ್ಥ್ಯ ಕುಸಿಯುತ್ತಿದೆ.

ಅವ್ಯವಸ್ಥಿತ ಪಾರ್ಕಿಂಗ್‌ನಿಂದ ಪಾದಚಾರಿಗಳ ಓಡಾಟಕ್ಕೂ ತೊಂದರೆಯಾಗುತ್ತಿದ್ದು, ಮಕ್ಕಳು, ವೃದ್ಧರು ಮತ್ತು ಮಹಿಳೆಯರ ಸುರಕ್ಷತೆಯ ಮೇಲೂ ಪರಿಣಾಮ ಬೀರುತ್ತಿದೆ.ಪ್ರಮುಖ ರಸ್ತೆಗಳಲ್ಲಿ ಪೀಕ್‌ ಅವರ್‌ನಲ್ಲಿ ವಾಹನಗಳ ಸರಾಸರಿ ವೇಗ ಕೇವಲ 15 ಕಿ.ಮೀ. ಇದ್ದರೆ, ಸರ್ಕಾರಿ ಬಸ್‌‍ಗಳ ಸರಾಸರಿ ವೇಗ ಸುಮಾರು 10 ಕಿ.ಮೀ. ಇದೆ. ಸಂಚಾರ ದಟ್ಟಣೆಗೆ ಅನಿಯಂತ್ರಿತ ಪಾರ್ಕಿಂಗ್‌ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಖಾಲಿ ಸೈಟ್‌ಗೆ ತೆರಿಗೆ ವಿನಾಯಿತಿ:ನಗರದಲ್ಲಿ ರಸ್ತೆ ಹೊರಗಿನ ಪಾರ್ಕಿಂಗ್‌ ಸಾಮರ್ಥ್ಯ ಹೆಚ್ಚಿಸಲು ಖಾಲಿ ನಿವೇಶನಗಳನ್ನು ಪಾರ್ಕಿಂಗ್‌ಗೆ ಬಳಸುವ ಮಾಲೀಕರಿಗೆ ತೆರಿಗೆ ಪ್ರೋತ್ಸಾಹ ನೀಡಲು ಕರಡು ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ. ಬಹುಮಹಡಿ ಕಾರ್‌ ಪಾರ್ಕಿಂಗ್‌ ಅಥವಾ ಯಾಂತ್ರೀಕೃತ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿದ ಖಾಲಿ ನಿವೇಶನಗಳಿಗೆ ಶೇ.100 ಆಸ್ತಿ ತೆರಿಗೆ ವಿನಾಯಿತಿ.ನೆಲಮಟ್ಟದ ಪಾರ್ಕಿಂಗ್‌ಗೆ ಬಳಸುವ ಖಾಲಿ ನಿವೇಶನಗಳಿಗೆ ಶೇ.50 ಆಸ್ತಿ ತೆರಿಗೆ ವಿನಾಯಿತಿ.ಇದರಿಂದ ಖಾಲಿ ಜಾಗಗಳನ್ನು ಪಾರ್ಕಿಂಗ್‌ ಸೌಲಭ್ಯಗಳಾಗಿ ಪರಿವರ್ತಿಸಲು ಉತ್ತೇಜನ ದೊರೆಯಲಿದೆ ಎಂದು ಸರ್ಕಾರ ನಿರೀಕ್ಷಿಸಿದೆ.

ರಸ್ತೆ ಪಾರ್ಕಿಂಗ್‌ಗೆ ಶುಲ್ಕ:ರಸ್ತೆ ಮೇಲಿನ ಪಾರ್ಕಿಂಗ್‌ ಅನ್ನು ವೈಜ್ಞಾನಿಕವಾಗಿ ನಿಯಂತ್ರಿಸಿ, ಅಗತ್ಯವಿರುವ ಕಡೆ ಶುಲ್ಕ ಆಧಾರಿತ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೆ ತರಲು ಪ್ರಸ್ತಾಪಿಸಲಾಗಿದೆ. ರಸ್ತೆ ವರ್ಗ, ಸ್ಥಳ ಹಾಗೂ ಬೇಡಿಕೆಯನ್ನು ಆಧರಿಸಿ ಶುಲ್ಕ ನಿಗದಿ ಮಾಡುವ ಉದ್ದೇಶವಿದೆ.ರಸ್ತೆಯ ಜಾಗವನ್ನು ದೀರ್ಘಕಾಲ ಆಕ್ರಮಿಸಿಕೊಳ್ಳುವುದನ್ನು ತಡೆಯಲು ದೀರ್ಘಾವಧಿ ಪಾರ್ಕಿಂಗ್‌ಗೆ ಹೆಚ್ಚಿನ ಶುಲ್ಕ ವಿಧಿಸುವ ಪ್ರಸ್ತಾಪವೂ ಇದೆ. ರಸ್ತೆ ಹೊರಗಿನ ಪಾರ್ಕಿಂಗ್‌ ಸೌಲಭ್ಯಗಳನ್ನು ಪ್ರತಿದಿನ ಬಳಸುವವರಿಗೆ ಮಾಸಿಕ ಪಾರ್ಕಿಂಗ್‌ ಪಾಸ್‌‍ ವ್ಯವಸ್ಥೆ ಕಲ್ಪಿಸುವ ಚಿಂತನೆಯೂ ಇದೆ.

ಪ್ರಮುಖ ರಸ್ತೆಗಳಲ್ಲಿ ನೋ ಪಾರ್ಕಿಂಗ್‌; ಹೆಚ್ಚಿನ ಸಂಚಾರವಿರುವ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್‌ ನಿಷೇಧಿಸಲಾಗುತ್ತದೆ. ಪೀಕ್‌ ಅವರ್‌ನಲ್ಲಿ ನಿರ್ದಿಷ್ಟ ರಸ್ತೆಗಳಲ್ಲಿ ಪಾರ್ಕಿಂಗ್‌ಗೆ ನಿರ್ಬಂಧ ಹೇರಲು ಅವಕಾಶವಿದೆ.
ಬಹುಹಂತದ ಕಾರ್‌ ಪಾರ್ಕಿಂಗ್‌ ಸೌಲಭ್ಯಗಳ ಸಮೀಪದ ರಸ್ತೆಗಳಲ್ಲಿ ಪಾರ್ಕಿಂಗ್‌ ನಿರ್ಬಂಧಿಸಿ, ವಾಹನ ಸವಾರರನ್ನು ಇಂತಹ ಸೌಲಭ್ಯಗಳತ್ತ ಕರೆದೊಯ್ಯುವ ಉದ್ದೇಶವಿದೆ. ಪಾರ್ಕಿಂಗ್‌ ದುರ್ಬಳಕೆಗೆ ಕ್ರಮ:ಕಟ್ಟಡ ನಿಯಮದಡಿ ಕಡ್ಡಾಯವಾಗಿರುವ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸದ ಕಟ್ಟಡ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಕರಡು ನಿಯಮದಲ್ಲಿ ಅವಕಾಶವಿದೆ. ನಿಗದಿಪಡಿಸಿದ ಪಾರ್ಕಿಂಗ್‌ ಜಾಗವನ್ನು ವಾಣಿಜ್ಯ ಅಥವಾ ಇತರೆ ಉದ್ದೇಶಗಳಿಗೆ ಬಳಸಿದರೂ ಕ್ರಮ ಜರುಗಲಿದೆ.ಪಾರ್ಕಿಂಗ್‌ ನಿಯಮಗಳ ಜಾರಿಗೆ ನಗರಪಾಲಿಕೆ ಹಾಗೂ ಪೊಲೀಸ್‌‍ ಸೇರಿದಂತೆ ಸಕ್ಷಮ ಪ್ರಾಧಿಕಾರಗಳಿಗೆ ಅಧಿಕಾರ ನೀಡುವ ಪ್ರಸ್ತಾಪವಿದೆ.

ಪಾರ್ಕಿಂಗ್‌ನಿಂದ ಸಂಗ್ರಹವಾಗುವ ಆದಾಯದ ವಿವರಗಳನ್ನು ನಿಯತಕಾಲಿಕವಾಗಿ ಪ್ರಕಟಿಸುವುದರ ಜೊತೆಗೆ, ಈ ಹಣವನ್ನು ಸಂಚಾರ ಸುಧಾರಣೆ, ಜಂಕ್ಷನ್‌ ಅಭಿವೃದ್ಧಿ, ರಸ್ತೆ ಮತ್ತು ಪಾದಚಾರಿ ಮಾರ್ಗಗಳ ದುರಸ್ತಿಗೆ ಬಳಸಲು ಉದ್ದೇಶಿಸಲಾಗಿದೆ.

2021ರ ನೀತಿಗೆ ಹೊಸ ಚೌಕಟ್ಟು; ರಾಜ್ಯ ಸರ್ಕಾರವು 2021ರ ಫೆ.2ರಂದು ಬೆಂಗಳೂರು ಪಾರ್ಕಿಂಗ್‌ ನೀತಿಯನ್ನು ಅನುಮೋದಿಸಿತ್ತು. ಇದರ ಅನುಷ್ಠಾನಕ್ಕಾಗಿ ಸೇರಿದಂತೆ ಸಂಬಂಧಿತ ಇಲಾಖೆಗಳೊಂದಿಗೆ ಸಮಾಲೋಚಿಸಿ ಕರಡು ನಿಯಮ ರೂಪಿಸಲಾಗಿದೆ. ಈ ಹಿಂದೆ 2022ರಲ್ಲಿ ವ್ಯವಸ್ಥಿತ ಶುಲ್ಕ ಆಧಾರಿತ ಪಾರ್ಕಿಂಗ್‌ಗಾಗಿ ಪ್ರದೇಶವಾರು ಯೋಜನೆಗಳನ್ನು ಸಿದ್ಧಪಡಿಸಲಾಗಿತ್ತು. ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ಥೆ ಜಾರಿಗೆ ಟೆಂಡರ್‌ಗಳನ್ನೂ ಕರೆಯಲಾಗಿತ್ತು. ಆದರೆ ಪಾರ್ಕಿಂಗ್‌ ನಿರ್ವಹಣಾ ನಿಯಮಗಳ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ನಿರೀಕ್ಷಿತ ಪ್ರತಿಕ್ರಿಯೆ ದೊರೆತಿರಲಿಲ್ಲ.

ಮಾರ್ಚ್‌ 19, 2026ರಂದು ನಡೆದ ಜನಪ್ರತಿನಿಧಿಗಳ ಸಭೆಯಲ್ಲಿ ಪಾರ್ಕಿಂಗ್‌ ಸಮಸ್ಯೆ ನಿಯಂತ್ರಣದ ಅಗತ್ಯದ ಬಗ್ಗೆ ಚರ್ಚೆ ನಡೆದ ಹಿನ್ನೆಲೆಯಲ್ಲಿ ಇದೀಗ ಜಿಬಿಎ ವ್ಯಾಪ್ತಿಗೆ ಹೊಸ ಕರಡು ನಿಯಮ ರೂಪಿಸಲಾಗಿದೆ.ಸಾರ್ವಜನಿಕರ ಸಲಹೆಗೆ ಸೆ.10 ಗಡುವುಕರಡು ಪಾರ್ಕಿಂಗ್‌ ನಿಯಮಗಳನ್ನು ಆಗಸ್ಟ್‌ 10ರಂದು ಸಾರ್ವಜನಿಕ ಸಲಹೆಗಾಗಿ ಪ್ರಕಟಿಸಲಾಗಿದೆ. ನಿಯಮಗಳನ್ನು ಅಂತಿಮಗೊಳಿಸುವ ಮುನ್ನ ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳಿಂದ ಬರುವ ಸಲಹೆಗಳನ್ನು ಪರಿಗಣಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

RELATED ARTICLES
spot_img

Latest News