ಹೈದರಾಬಾದ್, ಸೆ.3- ನಾಳೆ ಬೆಳಗ್ಗೆ 2.55ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಜಿಎಸ್‌ಎಲ್‌ವಿ ಎಫ್-17 ರಾಕೆಟ್ ಮೂಲಕ ಇಒಎಸ್ -05 ಉಪಗ್ರಹವನ್ನು ಉಡಾವಣೆ ಮಾಡಲು ಇಸ್ರೋ ಸಿದ್ಧತೆ ಮಾಡಿಕೊಂಡಿದೆ. ಕಳೆದ ಏಳು ತಿಂಗಳುಗಳಿಂದ ಯಾವುದೇ ಉಡಾವಣೆ ಕೈಗೊಳ್ಳದ ಇಸ್ರೋ ಇದೀಗ ದೇಶದ ಭೂ ವೀಕ್ಷಣೆ ವ್ಯವಸ್ಥೆಗೂ ಮಹತ್ವದ್ದಾಗಿರುವ ಉಡಾವಣೆಗೆ ಸಿದ್ದತೆ ಮಾಡಿಕೊಂಡಿದೆ.
ಇಒಎಸ್-05ನ ಪ್ರಮುಖ ವಿಶೇಷತೆ ಎಂದರೆ ಇದು ಭೂಸ್ಥಿರ ಕಕ್ಷೆಯಿಂದ ಚಿತ್ರ ತೆಗೆಯುವ ಭಾರತದ ಮೊದಲ ಭೂ ವೀಕ್ಷಣಾ ಉಪಗ್ರಹ. ಭೂಮಿಯಿಂದ ಸುಮಾರು 36 ಸಾವಿರ ಕಿ.ಮೀ ಎತ್ತರದಲ್ಲಿರುವ ಕಕ್ಷೆಯಲ್ಲಿ ನಿರ್ದಿಷ್ಟ ಪ್ರದೇಶವನ್ನು ಪದೇಪದೇ ವೀಕ್ಷಿಸಲು ಇದನ್ನು ವಿನ್ಯಾಸಗೊಳಿಸಲಾಗಿದೆ. ಇದರಿಂದ ಒಂದೇ ಪ್ರದೇಶದ ಬದಲಾವಣೆಗಳನ್ನು ನಿರಂತರವಾಗಿ ಗಮನಿಸಲು ಸಾಧ್ಯವಾಗಲಿದೆ. ಹವಾಮಾನ, ಪರಿಸರ, ಕೃಷಿ ಮತ್ತು ಪ್ರಕೃತಿ ವಿಕೋಪಗಳಂತಹ ಕ್ಷೇತ್ರಗಳಲ್ಲಿ ಈ ರೀತಿಯ ನಿರಂತರ ವೀಕ್ಷಣೆ ಹೆಚ್ಚು ಉಪಯುಕ್ತವಾಗಲಿದೆ.
ಕಳೆದ ಜನವರಿಯಲ್ಲಿ ಪಿಎಸ್‌ಎಲ್‌ವಿ ಸಿ 62 ಹಾಗೂ ಇಒಎಸ್ 1 ಮಿಷನ್ ಉಡಾವಣೆ ಮಾಡಲಾಗಿತ್ತು. ಆದರೆ, ರಾಕೆಟ್‌ನ ಪಿಎಸ್ 3 ಹಂತದ ಕೊನೆಯಲ್ಲಿ ಅಸಹಜತೆ ಕಾಣಿಸಿಕೊಂಡು ಮಿಷನ್ ವಿಫಲವಾಗಿತ್ತು.
ಈ ಘಟನೆ ಬಳಿಕ ಕಾರಣ ಪತ್ತೆಹಚ್ಚಲು ವಿವರವಾದ ಪರಿಶೀಲನೆ ಆರಂಭಿಸಲಾಗಿತ್ತು. ಆ ವೈಫಲ್ಯದ ಬಳಿಕ ಇಸ್ರೋ ಪ್ರಮುಖ ಉಡಾವಣೆಗಳಿಂದ ಸುಮಾರು ಏಳು ತಿಂಗಳ ವಿರಾಮ ತೆಗೆದುಕೊಂಡಿದೆ. ಇದೀಗ ಇಓಎಸ್-05 ಮಿಷನ್ ಮೂಲಕ ಮತ್ತೆ ಉಡಾವಣಾ ಕಾರ್ಯಾಚರಣೆಗೆ ಮರಳುತ್ತಿದೆ.
ಇಓಎಸ್-05 ಸಾಮಾನ್ಯ ಭೂ ವೀಕ್ಷಣಾ ಉಪಗ್ರಹಕ್ಕಿಂತ ವಿಭಿನ್ನವಾಗಿದೆ. ಇದು ಭೂಸ್ಥಿರ ಕಕ್ಷೆಯಿಂದ ದೊಡ್ಡ ಪ್ರದೇಶವನ್ನು ನಿರಂತರವಾಗಿ ಗಮನಿಸುವ ಸಾಮರ್ಥ್ಯ ಹೊಂದಿರಲಿದೆ. ಅಂದರೆ ಒಂದೇ ಪ್ರದೇಶದ ಹವಾಮಾನ ಅಥವಾ ಪರಿಸರ ಬದಲಾವಣೆಗಳನ್ನು ಕಡಿಮೆ ಸಮಯದ ಅಂತರದಲ್ಲಿ ಗಮನಿಸಲು ಸಾಧ್ಯವಾಗಲಿದೆ. ಇದನ್ನು ಮೊದಲು ಜಿಐಸ್ಯಾಟ್-1ಎ ಎಂದು ಕರೆಯಲಾಗುತ್ತಿತ್ತು. 2021ರಲ್ಲಿ ಇದೇ ಸರಣಿಯ ಜಿಐಸ್ಯಾಟ್-1 ಮಿಷನ್ ಕಕ್ಷೆ ಸೇರುವಲ್ಲಿ ವಿಫಲವಾಗಿತ್ತು. ಇದೀಗ ಸುಧಾರಿತ ರೂಪದಲ್ಲಿ ಇಓಎಸ್-05 ಅನ್ನು ಉಡಾವಣೆ ಮಾಡಲಾಗುತ್ತಿದೆ.
ಉಪಗ್ರಹದಿಂದ ಸಿಗುವ ಚಿತ್ರಗಳು ಮತ್ತು ಮಾಹಿತಿ ನೇರವಾಗಿ ಜನರ ಮೊಬೈಲ್‌ಗೆ ಬರುವುದಿಲ್ಲ. ಆದರೆ ಅದರ ಮಾಹಿತಿಯನ್ನು ವಿವಿಧ ಸರ್ಕಾರಿ ವ್ಯವಸ್ಥೆಗಳು ಬಳಸುವುದರಿಂದ ಜನರಿಗೆ ಪರೋಕ್ಷವಾಗಿ ಸಾಕಷ್ಟು ಪ್ರಯೋಜನ ಪಡೆಯಬಹುದಾಗಿದೆ. ಹವಾಮಾನ ಮುನ್ಸೂಚನೆ, ಕೃಷಿ ಮೇಲ್ವಿಚಾರಣೆ, ಪರಿಸರ ಬದಲಾವಣೆ, ಪ್ರಕೃತಿ ವಿಕೋಪ ನಿರ್ವಹಣೆ ಮತ್ತು ದೇಶದ ಯೋಜನೆ ರೂಪಿಸುವ ಕೆಲಸಗಳಲ್ಲಿ ಉಪಗ್ರಹ ಮಾಹಿತಿ ಬಳಸಬಹುದು. ಭಾರತದಲ್ಲಿ ಈಗಾಗಲೇ ಉಪಗ್ರಹ ತಂತ್ರಜ್ಞಾನವನ್ನು ಕೃಷಿ ಮತ್ತು ವಿಕೋಪ ನಿರ್ವಹಣೆಯಲ್ಲಿ ಬಳಸಲಾಗುತ್ತಿದೆ.
ಪ್ರವಾಹ ಬಂದಾಗ ಯಾವ ಪ್ರದೇಶಗಳು ಹೆಚ್ಚು ಹಾನಿಗೊಳಗಾಗಿವೆ, ಕಾಡ್ಗಿಚ್ಚು ಎಲ್ಲಿ ಹರಡುತ್ತಿದೆ ಅಥವಾ ಚಂಡಮಾರುತದ ಪರಿಣಾಮ ಯಾವ ಭಾಗದಲ್ಲಿದೆ ಎಂಬುದನ್ನು ಮೇಲಿನಿಂದ ಗಮನಿಸಲು ಉಪಗ್ರಹ ಚಿತ್ರಗಳು ನೆರವಾಗುತ್ತವೆ.ಈ ಮಾಹಿತಿ ಸಿಕ್ಕರೆ ಹಾನಿಯ ಪ್ರಮಾಣವನ್ನು ವೇಗವಾಗಿ ಅಂದಾಜಿಸಿ ರಕ್ಷಣಾ ಕಾರ್ಯ, ಪರಿಹಾರ ವಿತರಣೆ ಮತ್ತು ತುರ್ತು ಯೋಜನೆಗಳನ್ನು ರೂಪಿಸಲು ಅಧಿಕಾರಿಗಳಿಗೆ ಸಹಾಯವಾಗುತ್ತದೆ.
ಉಪಗ್ರಹ ದತ್ತಾಂಶವನ್ನು ಈಗಾಗಲೇ ಪ್ರವಾಹ, ಚಂಡಮಾರುತ, ಕಾಡ್ಗಿಚ್ಚು, ಭೂಕುಸಿತ ಸೇರಿದಂತೆ ಹಲವು ವಿಕೋಪಗಳಲ್ಲಿ ಬಳಸಲಾಗುತ್ತಿದೆ. ಹೊಲಗಳ ಮೇಲಿನ ಬದಲಾವಣೆಗಳನ್ನು ಉಪಗ್ರಹ ಚಿತ್ರಗಳ ಮೂಲಕ ಗಮನಿಸಬಹುದು. ಬೆಳೆ ಪ್ರದೇಶ, ಬರ ಪರಿಸ್ಥಿತಿ, ಬೆಳೆ ಬೆಳವಣಿಗೆ ಮತ್ತು ಹಾನಿಯಂತಹ ವಿಷಯಗಳನ್ನು ದೊಡ್ಡ ಪ್ರಮಾಣದಲ್ಲಿ ಅಂದಾಜಿಸಲು ಭೂ ವೀಕ್ಷಣಾ ತಂತ್ರಜ್ಞಾನ ಸಹಾಯ ಮಾಡುತ್ತದೆ. ಇದರ ಮೂಲಕ ಬೆಳೆ ಅಂದಾಜು, ಬರ ಮೇಲ್ವಿಚಾರಣೆ ಮತ್ತು ಬೆಳೆ ವಿಮೆಯಂತಹ ಕೆಲಸಗಳಲ್ಲೂ ಉಪಗ್ರಹ ಮಾಹಿತಿಯನ್ನು ಬಳಸುವ ಸಾಧ್ಯತೆ ಇದೆ.
