ನವದೆಹಲಿ, ಸೆ.3- ಉತ್ತರಾಖಂಡದ ಹಳ್ದವಾನಿಯಲ್ಲಿ ತಮ ಸಾರ್ವಜನಿಕ ಸಭೆಯ ಬಳಿಕ ರಾಮಲೀಲಾ ಮೈದಾನದಲ್ಲಿ ನಡೆದಿರುವ ಶುದ್ಧೀಕರಣ ಘಟನೆಯ ಕುರಿತು ರಾಜ್ಯಸಭೆಯ ಸಭಾನಾಯಕ ಹಾಗೂ ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರಿಗೆ ಕಾಂಗ್ರೆಸ್ ಅಧ್ಯಕ್ಷ ಹಾಗೂ ರಾಜ್ಯಸಭೆಯ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಆಗಸ್ಟ್ 8ರಂದು ಹಳ್ದವಾನಿಯಲ್ಲಿ ನಡೆದ ತಮ ಸಾರ್ವಜನಿಕ ಸಭೆಯ ಬಳಿಕ ರಾಮಲೀಲಾ ಮೈದಾನದಲ್ಲಿ ಶುದ್ಧೀಕರಣ ನಡೆಸಲಾಗಿತ್ತು. ಈ ವಿಚಾರವನ್ನು ಆಗಸ್ಟ್ 13ರಂದು ರಾಜ್ಯಸಭೆಯಲ್ಲಿ ಖರ್ಗೆಯವರು ಪ್ರಸ್ತಾಪಿಸಿದ್ದರು. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವುದಾಗಿ ನಡ್ಡಾ ಅವರು ಸದನದಲ್ಲಿ ಭರವಸೆ ನೀಡಿದ್ದರು ಎಂದು ಪತ್ರದಲ್ಲಿ ನೆನಪಿಸಿದ್ದಾರೆ.
ಘಟನೆ ನಡೆದು 24 ದಿನಗಳು ಕಳೆದಿದ್ದರೂ, ಶುದ್ಧೀಕರಣದಂತಹ ಕೃತ್ಯಕ್ಕೆ ಕಾರಣರಾದ ವ್ಯಕ್ತಿಗಳು ಹಾಗೂ ಸಂಘಟನೆಗಳ ವಿರುದ್ಧ ಈವರೆಗೆ ಪ್ರಾಥಮಿಕ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿಲ್ಲ ಎಂದು ಖರ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಕುರಿತು ರಾಜ್ಯಸಭೆಯಲ್ಲಿ ನಡ್ಡಾ ಅವರು ವ್ಯಕ್ತಪಡಿಸಿದ್ದ ಭರವಸೆಯನ್ನು ಗಮನದಲ್ಲಿಟ್ಟುಕೊಂಡು, ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಖರ್ಗೆ ಒತ್ತಾಯಿಸಿದ್ದಾರೆ.
ಈ ವಿಚಾರ ನನ್ನ ವೈಯಕ್ತಿಕವಾಗಿ ಅಥವಾ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷನ ಸ್ಥಾನಕ್ಕೆ ಸಂಬಂಧಿಸಿದ ವಿಷಯವಲ್ಲ. ಪ್ರತಿದಿನ ಇಂತಹ ಕ್ರೂರ ವಾಸ್ತವವನ್ನು ಎದುರಿಸುತ್ತಿರುವ ಕೋಟ್ಯಂತರ ಜನರ ಭಾವನೆಗಳಿಗೆ ಇದು ಸಂಬಂಧಿಸಿದೆ. ಇಂತಹ ತಪ್ಪು ಕೃತ್ಯ ಎಸಗಿದವರಿಗೆ ಪಾಠ ಕಲಿಸುವ ಅಗತ್ಯವಿದೆ ಎಂದು ಖರ್ಗೆ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ನೀಡಿದ್ದ ಭರವಸೆ ಹಾಗೂ ಲಭ್ಯವಿರುವ ವಾಸ್ತವಾಂಶಗಳ ಆಧಾರದ ಮೇಲೆ, ಹಳ್ದವಾನಿಯ ರಾಮಲೀಲಾ ಮೈದಾನದಲ್ಲಿ ನಡೆದ ಶುದ್ಧೀಕರಣ ಘಟನೆಯಲ್ಲಿ ಭಾಗಿಯಾಗಿರುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸುವಂತೆ ಉತ್ತರಾಖಂಡ ಮುಖ್ಯಮಂತ್ರಿ ಅವರಿಗೆ ನಿರ್ದೇಶನ ನೀಡಬೇಕು ಎಂದು ಖರ್ಗೆ, ನಡ್ಡಾ ಅವರನ್ನು ಒತ್ತಾಯಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯಸಭೆಯ ಸಭಾಪತಿಗಳೂ ವಿಷಾದ ವ್ಯಕ್ತಪಡಿಸಿದ್ದರು ಎಂದು ಖರ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
