ಬೆಂಗಳೂರು,ಸೆ.3- ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದ ಭಾರತೀಯ ವಾಯುಪಡೆಯ ವೀರಚಕ್ರ ಪ್ರಶಸ್ತಿ ಪುರಸ್ಕೃತ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್, ಭಾರತೀಯ ವಾಯುಪಡೆಗೆ ನಿವೃತ್ತಿ ನೀಡಿ ನಾಗರಿಕ ವಿಮಾನಯಾನ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಗೋವಾ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆಯಾದ ಎಫ್‌ಎಲ್‌ವೈ91ನಲ್ಲಿ ಪೈಲಟ್ ಆಗಿ ಹೊಸ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಅಭಿನಂದನ್ ವರ್ಧಮಾನ್ ಅವರು ಕಳೆದ ಆಗಸ್ಟ್ ತಿಂಗಳಲ್ಲಿ ಎಫ್‌ಎಲ್‌ವೈ91ವಿಮಾನಯಾನ ಸಂಸ್ಥೆಯನ್ನು ಸೇರಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳಿಂದ ತಿಳಿದುಬಂದಿದೆ. ಉದ್ಯೋಗಿಗಳ ಗೌಪ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಈಐಙ91 ವಕ್ತಾರರು ಈ ಬಗ್ಗೆ ಅಧಿಕೃತ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಎಫ್‌ಎಲ್‌ವೈ91 ಸಂಸ್ಥೆಯು ಗೋವಾ ಮತ್ತು ಹೈದರಾಬಾದ್ ಅನ್ನು ನೆಲೆಗಳನ್ನಾಗಿ ಹೊಂದಿದ್ದು, ಪ್ರಸ್ತುತ ಆರು ಎಟಿಆರ್72-600 ವಿಮಾನಗಳೊಂದಿಗೆ ಪ್ರಾದೇಶಿಕ ಸಂಪರ್ಕ ಸೇವೆ ಒದಗಿಸುತ್ತಿದೆ.
2019ರ ಐತಿಹಾಸಿಕ ಘಟನೆ
ಫೆಬ್ರವರಿ 2019 ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ವೈಮಾನಿಕ ಸಂಘರ್ಷದ ಸಮಯದಲ್ಲಿ ಅಭಿನಂದನ್ ವರ್ಧಮಾನ್ ದೇಶದ ಅತ್ಯಂತ ಜನಪ್ರಿಯ ಹೀರೋ ಆಗಿ ಹೊರಹೊಮಿದರು. ಜಮು ಮತ್ತು ಕಾಶೀರದ ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಭಾರತೀಯ ವಾಯುಪಡೆಯು ಪಾಕಿಸ್ತಾನದ ಬಾಲಕೋಟ್‌ನಲ್ಲಿ ನಡೆಸಿದ ವೈಮಾನಿಕ ದಾಳಿಯ ಮರುದಿನ ಈ ವೈಮಾನಿಕ ಕಾಳಗ ನಡೆಯಿತು.
ಆ ಸಂದರ್ಭದಲ್ಲಿ ವಿಂಗ್ ಕಮಾಂಡರ್ ಆಗಿದ್ದ ವರ್ಧಮಾನ್ ತಮಗಿಂತ ಅತ್ಯಾಧುನಿಕವಾಗಿದ್ದ ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ತಮ ಹಳೆಯ ಕಾಲದ ಮಿಗ್-21 ಬೈಸನ್ ವಿಮಾನದ ಮೂಲಕ ಹಿಮೆಟ್ಟಿಸಿ ಹೊಡೆದುರುಳಿಸಿದ್ದರು. ಈ ಸಾಹಸದ ನಡುವೆ ಅವರ ವಿಮಾನವೂ ಕ್ಷಿಪಣಿ ದಾಳಿಗೆ ಸಿಲುಕಿ ಪತನಗೊಂಡಿತು. ಪರಿಣಾಮವಾಗಿ ಅವರು ಪ್ಯಾರಾಚೂಟ್ ಮೂಲಕ ಪಾಕಿಸ್ತಾನ ಆಕ್ರಮಿತ ಪ್ರದೇಶಕ್ಕೆ ಇಳಿದು ಸೆರೆಯಾಗಬೇಕಾಯಿತು.
ಪಾಕಿಸ್ತಾನದ ವಶದಲ್ಲಿ ಸುಮಾರು 60 ಗಂಟೆಗಳ ಕಾಲ ಅಕ್ರಮ ಸೆರೆಯಲ್ಲಿ ಅಚಲ ಧೈರ್ಯ ಪ್ರದರ್ಶಿಸಿದ ಅವರನ್ನು, ಅಂತಾರಾಷ್ಟ್ರೀಯ ಒತ್ತಡ ಹಾಗೂ ಜಿನೀವಾ ಒಪ್ಪಂದದ ಹಿನ್ನೆಲೆಯಲ್ಲಿ ಮಾರ್ಚ್ 1, 2019 ರಂದು ಅಟ್ಟಾರಿ-ವಾಘಾ ಗಡಿಯ ಮೂಲಕ ಪಾಕಿಸ್ತಾನ ಭಾರತಕ್ಕೆ ಬಿಡುಗಡೆ ಮಾಡಿತು. ಅವರ ಈ ಅಸಾಧಾರಣ ಶೌರ್ಯ ಮತ್ತು ಕರ್ತವ್ಯ ನಿಷ್ಠೆಯನ್ನು ಗುರುತಿಸಿ ಭಾರತ ಸರ್ಕಾರವು 2021ರಲ್ಲಿ ದೇಶದ ಮೂರನೇ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿಯಾದ ವೀರ ಚಕ್ರ ನೀಡಿ ಗೌರವಿಸಿತು. ವಾಯುಪಡೆಯಿಂದ ನಿವೃತ್ತಿ ಪಡೆದು ನಾಗರಿಕ ವಾಯುಯಾನ ಕ್ಷೇತ್ರಕ್ಕೆ ಸೇರ್ಪಡೆಗೊಂಡಿರುವ ಅಭಿನಂದನ್ ವರ್ಧಮಾನ್ ಅವರ ಈ ಹೆಜ್ಜೆ, ಅವರ ವೃತ್ತಿಜೀವನದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾಗಿದೆ.
Former IAF pilot Abhinandan Varthaman joins FLY91
