Homeರಾಜ್ಯಅದೋಗತಿಗೆ ತಲುಪಿದ 'ನಮ್ಮಕ್ಲಿನಿಕ್‌'ಗಳು, ಚಿಕಿತ್ಸೆ ಮರೀಚಿಕೆ

ಅದೋಗತಿಗೆ ತಲುಪಿದ ‘ನಮ್ಮಕ್ಲಿನಿಕ್‌’ಗಳು, ಚಿಕಿತ್ಸೆ ಮರೀಚಿಕೆ

ಬೆಂಗಳೂರು, ಸೆ.19- ಗ್ಯಾರಂಟಿಗಳ ಬೆನ್ನು ಹತ್ತಿದ, ರಾಜ್ಯ ಸರ್ಕಾರ ಜನಪರವಾದ ಹಲವಾರು ಯೋಜನೆಗಳನ್ನು ಕಡೆಗಣಿಸುತ್ತಿರುವ ಆರೋಪ ಗಳು ಯಥೇಚ್ಛವಾಗಿ ಕೇಳಿ ಬರುತ್ತಿದ್ದು, ಅದರಲ್ಲಿ ನಗರ ಪ್ರದೇಶದ ನಮ ಕ್ಲಿನಿಕ್‌ಗಳ ಅವ್ಯವಸ್ಥೆ ಪ್ರಮುಖವಾಗಿದೆ. ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಜನರಿಗೆ ವೈದ್ಯಕೀಯ ಸೇವೆ ಒದಗಿಸುತ್ತಿವೆ. ನಗರ ಪ್ರದೇಶಗಳಲ್ಲಿನ ಜನರು ಚಿಕಿತ್ಸೆಗಾಗಿ ಖಾಸಗಿ ವ್ಯವಸ್ಥೆಯ ಮೊರೆ ಹೋಗಬೇಕಾಗಿದೆ.

ಇದು ಆರ್ಥಿಕವಾಗಿ ಹೊರೆ ಎಂಬ ಕಾರಣಕ್ಕೆ, ಬಡ ಹಾಗೂ ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಹಿಂದಿನ ಬಿಜೆಪಿ ಸರ್ಕಾರ ನಮ ಕ್ಲಿನಿಕ್‌ ಎಂಬ ಪರಿಕಲ್ಪನೆಯನ್ನು ಕೈಗೆತ್ತಿಗೊಂಡಿತ್ತು. ಅದರ ಭಾಗವಾಗಿ ಬೆಂಗಳೂರಿನಲ್ಲಿ ವಾರ್ಡ್‌ ಗೊಂದರಂತೆ 243, ಗ್ರಾಮೀಣ ಭಾಗದಲ್ಲಿ 438 ಕ್ಲಿನಿಕ್‌ಗಳನ್ನು ಆರಂಭಿಸಲಾಯಿತು.

ಬೆಂಗಳೂರು ಹೊರತು ಪಡಿಸಿ ಬೇರೆ ಕಡೆಗೆ ಹಂತ ಹಂತವಾಗಿ ಕ್ಲಿನಿಕ್‌ಗಳ ಮಂಜೂರಾತಿ ಸಂಖ್ಯೆಯನ್ನು 817ಕ್ಕೆ ಹೆಚ್ಚಿಸಲಾಗಿದೆ. ಅವುಗಳಲ್ಲಿ 757 ಈಗಲೂ ಸಕ್ರಿಯವಾಗಿವೆ. 60 ಕ್ಲಿನಿಕ್‌ಗಳು ಬೇರೆ ಬೇರೆ ಕಾರಣಗಳಿಗೆ ತಟಸ್ಥವಾಗಿವೆ. ಸಕ್ರಿಯವಾಗಿರುವ ಕ್ಲಿನಿಕ್‌ಗಳು ಜನರಿಗೆ ಸೇವೆ ಒದಗಿಸುವ ಬದಲಾಗಿ ರಾಜಕಾರಣಿಗಳ, ಪ್ರಭಾವಿಗಳ ಕುಟುಂಬದ ಸದಸ್ಯರ ಪುನರ್‌ವಸತಿ ಕೇಂದ್ರಗಳಾಗಿವೆ ಎಂಬ ಆರೋಪ ಕೇಳಿಬಂದಿದೆ.

ಇತ್ತೀಚೆಗೆ ಬಾಗಲಕೋಟೆ ಜಿಲ್ಲೆಯಲ್ಲಿ ಶಾಸಕರೊಬ್ಬರ ಸೋದರ ಸಂಬಂಧಿ ನಮ ಕ್ಲಿನಿಕ್‌ನಲ್ಲಿ ವೈದ್ಯೆಯಾಗಿ ವೇತನ ಪಡೆಯುತ್ತಲೇ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣವನ್ನು ಪಡೆಯುತ್ತಿರುವುದು ಬೆಳಕಿಗೆ ಬಂದಿತು. ಬಾಗಲಕೋಟೆಯಲ್ಲಿ ಆಡಳಿತ ಪಕ್ಷದ ಕಾಂಗ್ರೆಸ್‌‍ನ ಶಾಸಕರಿದ್ದಾರೆ ಎಂಬ ಕಾರಣಕ್ಕೆ ಅವರ ಸಂಬಂಧಿ ನಮ ಕ್ಲಿನಿಕ್‌ನಲ್ಲಿ ಸೇವೆ ಸಲ್ಲಿಸದೆಯೇ ವೇತನ ಪಡೆಯುತ್ತಿರುವುದು ತೀವ್ರ ವಿವಾದ ಸೃಷ್ಟಿಸಿತ್ತು.

ವೈದ್ಯೆಯ ತಂದೆ ಡಿ.ಎಚ್‌.ಒ ಆಗಿದ್ದು, ತಮ ಮಗಳಿಗೆ ಅನುಕೂಲಕರವಾದ ಅವಕಾಶಗಳನ್ನು ಕಲ್ಪಿಸಿದರು. ಅನಧಿಕೃತವಾಗಿ ಒಂದೇ ಸಮಯದಲ್ಲಿ ಎರಡು ಕಡೆ ಸಕ್ರಿಯವಾಗಿರಲು ಬಿಡುವ ಮೂಲಕ ಪಕ್ಷಪಾತ ಮಾಡಿದ್ದಾರೆ ಎಂಬ ದೂರುಗಳಿದ್ದವು.

ಇದು ಬಾಗಲಕೋಟೆ ಜಿಲ್ಲೆಯೊಂದರ ಪ್ರಕರಣವಷ್ಟೇ ಅಲ್ಲ. ರಾಜ್ಯದ ಬಹುತೇಕ ಕಡೆ ರಾಜಕಾರಣಿಗಳು, ಅಧಿಕಾರಿಗಳು ಮತ್ತು ಪ್ರಭಾವಿಗಳ ಮಕ್ಕಳು ನಮ ಕ್ಲಿನಿಕ್‌ನ ಉದ್ಯೋಗಿಗಳಾಗಿ ವೇತನ ಪಡೆಯುತ್ತಲೇ ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುವುದು ಅಥವಾ ಆಸ್ಪತ್ರೆಗಳ ಆಡಳಿತ ಮಂಡಳಿಯಲ್ಲಿ ತೊಡಗಿಸಿಕೊಳ್ಳುವುದು, ಸಂಶೋಧನೆ, ಸ್ನಾತಕೋತರ ಶಿಕ್ಷಣ ಅಥವಾ ಇತರ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದಾರೆ ಎಂಬ ಆರೋಪಗಳಿವೆ.

ಇನ್ನೂ ಕೆಲವರು ನಮ ಕ್ಲಿನಿಕ್‌ನ ವೈದ್ಯರಾಗಿದ್ದುಕೊಂಡು 60 ಸಾವಿರ ರೂ. ವೇತನ ಪಡೆಯುತ್ತಲೇ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಇದರಿಂದಾಗಿ ನಮ ಕ್ಲಿನಿಕ್‌ಗಳು ಹೆಸರಿಗಷ್ಟೇ ಅಸ್ತಿತ್ವದಲ್ಲಿವೆ. ಆದರೆ ಅಲ್ಲಿ ಮೂಲ ಆಶಯದಂತೆ ಜನರಿಗೆ ವೈದ್ಯಕೀಯ ಸೇವೆ ದೊರೆಯುತ್ತಿಲ್ಲ. ಬಿಜೆಪಿ ಸರ್ಕಾರ ಮಹತ್ವಕಾಂಕ್ಷೆಯೊಂದಿಗೆ ಆರಂಭಿಸಿದ ಯೋಜನೆಯನ್ನು ಕಾಂಗ್ರೆಸ್‌‍ ಸರ್ಕಾರ ಗಂಜಿ ಕೇಂದ್ರಗಳನ್ನಾಗಿ ಪರಿವರ್ತಿಸಿದೆ ಎಂಬ ಕಟು ಟೀಕೆಗಳು ಕೇಳಿ ಬರುತ್ತಿವೆ.

ನಮ ಕ್ಲಿನಿಕ್‌ಗಳ ಸಮಸ್ಯೆಗಳ ಬಗ್ಗೆ ಈವರೆಗೂ ಯಾವ ಅಧಿಕಾರಿ, ಸಚಿವರು ಗಂಭೀರ ಪರಿಶೀಲನೆ ನಡೆಸಿಲ್ಲ. ಬಿಜೆಪಿ ಸರ್ಕಾರದ ಯೋಜನೆ ಎಂಬ ಕಾರಣಕ್ಕಾಗಿ ಮಲತಾಯಿ ಧೋರಣೆಯಿಂದಲೇ ನೋಡಲಾಗುತ್ತಿದೆ. ಆಗಾಗ್ಗೆ ಸಚಿವ ಸಂಪುಟ ಸಭೆಯಲ್ಲಿ ನಮ ಕ್ಲಿನಿಕ್‌ಗಳಿಗೆ ವೈದ್ಯಕೀಯ ಸಲಕರಣೆಗಳು ಹಾಗೂ ಮೂಲ ಸೌಲಭ್ಯಗಳಿಗೆಂದು ಕೋಟ್ಯಂತರ ರೂ. ಅನುದಾನ ಮಂಜೂರು ಮಾಡುವುದು ಸಾಮಾನ್ಯವಾಗಿದೆ. ಆದರೆ ಇದರ ಹಿಂದೆ ಕಮೀಷನ್‌ ವ್ಯವಹಾರದ ಅರೋಪಗಳು ಕೇಳಿ ಬಂದಿವೆ.

ವಾಸ್ತವವಾಗಿ ಜನರಿಗೆ ಇದು ಉತ್ತಮ ವೈದ್ಯಕೀಯ ಸೌಲಭ್ಯ ಒದಗಿಸುವ ವ್ಯವಸ್ಥೆ. ಆದರೆ ಅಲ್ಲಿ ಉದ್ದೇಶ ಈಡೇರಿರುವ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸಿಬ್ಬಂದಿಗಳು, ವೈದ್ಯರು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆಯೇ? ಎಂಬುದನ್ನು ಗಮನಿಸುತ್ತಿಲ್ಲ.

ಪ್ರತಿಯೊಂದು ಕ್ಲಿನಿಕ್‌ಗೂ ನಿತ್ಯ ಸರಾಸರಿ 35 ರಿಂದ 40 ಜನ ಭೇಟಿ ನೀಡುತ್ತಿದ್ದಾರೆ. ಅದರ ಅರ್ಥ ನಗರ ಪ್ರದೇಶದಲ್ಲಿನ ವೈದ್ಯಕೀಯ ಸೇವೆಗೆ ಭಾರಿ ಬೇಡಿಕೆ ಇದೆ. ಸರ್ಕಾರ ಇವುಗಳನ್ನು ಕಡೆಗಣಿಸದೆ ಸುಸ್ಥಿತಿಯಲ್ಲಿಟ್ಟರೆ ಜನರಿಗೆ ಭಾರಿ ಅನುಕೂಲಗಳಾಗುತ್ತವೆ. ಆದರೆ ಆ ರೀತಿಯಾಗುತ್ತಿಲ್ಲ.

ಕೆಲವು ಕಡೆ ಜೂನ್‌ ತಿಂಗಳಿನಿಂದಲೂ ವೈದ್ಯರು, ನರ್ಸ್‌ಗಳು ಪ್ರಯೋಗಾಲಯ ಸಿಬ್ಬಂದಿ ಹಾಗೂ ಡಿ ಗ್ರೂಪ್‌ ನೌಕರರಿಗೆ ಗೌರವ ಧನ ಬಿಡುಗಡೆಯಾಗಿಲ್ಲ ಎಂಬ ಆರೋಪಗಳಿವೆ. ಒಂದೆಡೆ ನಮ ಕ್ಲಿನಿಕ್‌ಗಳಲ್ಲಿ ಹೆಸರಿಗಷ್ಟೇ ಸೇವೆ ಸಲ್ಲಿಸುವ ಸಿಬ್ಬಂದಿಗಳು ಅನಾಯಾಸವಾಗಿ ವೇತನ ಪಡೆಯುತ್ತಿದ್ದಾರೆ. ಆದರೆ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಸಿಬ್ಬಂದಿಗಳಿಗೆ ವೇತನ ಇಲ್ಲದೆ ಪರದಾಡುತ್ತಿದ್ದಾರೆ.

ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳ ಬೆನ್ನುಹತ್ತಿ ನಗರ ಪ್ರದೇಶದ ಜನರ ಆರೋಗ್ಯ ಸೇವೆಗೆ ಕತ್ತರಿ ಹಾಕುತ್ತಿದೆ ಎಂಬ ಟೀಕೆಗಳು ಸಾಮಾನ್ಯವಾಗಿವೆ. ಇನ್ನೂ ಕೆಲವು ಕ್ಲಿನಿಕ್‌ಗಳು ಅಶಕ್ತರು, ಹಿರಿಯ ನಾಗರಿಕರು ತಲುಪಲಾಗದಂತಹ ಸ್ಥಳಗಳಲ್ಲಿವೆ. ಸಂದಿ-ಗೊಂದಿಗಳು, ಮೊದಲ ಮಹಡಿಯ ಕಟ್ಟಡ, ಹೀಗೆ… ದುರ್ಗಮ ಜಾಗಗಳಲ್ಲಿ ಕ್ಲಿನಿಕ್‌ಗಳನ್ನು ನಡೆಸಲಾಗುತ್ತಿದೆ.

ನಗರ ಪ್ರದೇಶದ ಜನಸಾಮಾನ್ಯರಿಗೆ ವರದಾನವಾಗಬೇಕಿದ್ದ ನಮ ಕ್ಲಿನಿಕ್‌ಗಳನ್ನು ಖಾಸಗಿಯವರ ಒತ್ತಡಕ್ಕೆ ಮಣಿದು ಉದ್ದೇಶಪೂರ್ವಕವಾಗಿಯೇ ದುರ್ಬಲಗೊಳಿಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿ ಬರುತ್ತಿವೆ.ನಮ ಕ್ಲಿನಿಕ್‌ಗಳಿಗೆ ಅನುದಾನದ ಕೊರತೆಯಿಲ್ಲ. ಶೇ.5ರಷ್ಟು ಮಾತ್ರ ವೈದ್ಯರ ಕೊರತೆಯಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ವಾಸ್ತವ ಪರಿಸ್ಥಿತಿ ಬೇರೆಯೇ ಇರುವುದು ಸ್ಪಷ್ಟ.

RELATED ARTICLES
spot_img

Latest News