ಬೆಂಗಳೂರು, ಸೆ.3- ನಗರದ ಪ್ರಮುಖ ಸಮಸ್ಯೆಯಾಗಿರುವ ಕಸದ ಬ್ಲಾಕ್‌ಸ್ಪಾಟ್‌ಗಳಿಗೆ ಕಡಿವಾಣ ಹಾಕಲು ಹೊಸ ಕಾರ್ಯತಂತ್ರಕ್ಕೆ ಮುಂದಾಗಿರುವ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮನೆ-ಮನೆ ಕಸ ಸಂಗ್ರಹಣಾ ಆಟೋಗಳಿಗೆ ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಸಿ, ರಾತ್ರಿ ವೇಳೆಯೂ ಕಸ ಸಂಗ್ರಹಿಸುವ ಮೂಲಕ ಬ್ಲಾಕ್‌ಸ್ಪಾಟ್‌ಗಳನ್ನು ತೆರವುಗೊಳಿಸಲು ನಿರ್ಧರಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿದ ಬೆಂಗಳೂರು ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್ ಅವರು, ಕ್ಷೇತ್ರದ ಎಲ್ಲ 208 ಕಸ ಸಂಗ್ರಹಣಾ ಆಟೋಗಳಿಗೆ ಸೆ.10ರೊಳಗೆ ಜಿಪಿಎಸ್ ಅಳವಡಿಸುವಂತೆ ಅಧಿಕಾರಿಗಳಿಗೆ ಗಡುವು ವಿಧಿಸಿದ್ದಾರೆ. ಸೆ.11ರಿಂದ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಪೂರ್ಣ ಪ್ರಮಾಣದ ಜಿಪಿಎಸ್ ಟ್ರ್ಯಾಕಿಂಗ್ ಆರಂಭವಾಗಲಿದೆ ಎಂದು ತಿಳಿಸಿದ್ದಾರೆ.
36 ಆಟೋಗಳ ಪ್ರಯೋಗ ಯಶಸ್ವಿ;
ಆಗಸ್ಟ್ 13ರಂದು ಎಚ್‌ಎಸ್‌ಆರ್ ಲೇಔಟ್‌ನ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ 36 ಕಸ ಸಂಗ್ರಹಣಾ ಆಟೋಗಳಿಗೆ ಜಿಪಿಎಸ್ ಅಳವಡಿಸಿ ಪ್ರಾಯೋಗಿಕವಾಗಿ ಯೋಜನೆ ಜಾರಿಗೊಳಿಸಲಾಗಿತ್ತು. ಮೂರು ವಾರಗಳ ಅವಧಿಯಲ್ಲಿ ಮನೆ-ಮನೆ ಕಸ ಸಂಗ್ರಹಣೆ ಪರಿಣಾಮಕಾರಿಯಾಗಿದ್ದು, ಹಲವು ಕಡೆಗಳಲ್ಲಿನ ಬ್ಲಾಕ್‌ಸ್ಪಾಟ್‌ಗಳು ಗಣನೀಯವಾಗಿ ಕಡಿಮೆಯಾಗಿವೆ. ಸ್ಥಳೀಯ ನಿವಾಸಿಗಳು ಹಾಗೂ ಎನ್‌ಜಿಒಗಳು ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಎಲ್ಲ ಆಟೋಗಳಿಗೂ ಜಿಪಿಎಸ್ ಅಳವಡಿಸಲು ಪಾಲಿಕೆ ಮುಂದಾಗಿದೆ.
ಆ್ಯಪ್‌ನಲ್ಲೇ ಆಟೋ ಚಲನವಲನ:
ಎಚ್‌ಎಸ್‌ಆರ್ ಲೇಔಟ್, ಹೊಂಗಸಂದ್ರ, ಮಂಗಳಮ್ಮನಪಾಳ್ಯ ಸೇರಿದಂತೆ ಒಂಬತ್ತು ವಾರ್ಡ್‌ಗಳಲ್ಲಿ ಜಿಪಿಎಸ್ ಅಳವಡಿಕೆ ಹಾಗೂ ರೂಟ್ ಮ್ಯಾಪಿಂಗ್ ಪೂರ್ಣಗೊಂಡ ಬಳಿಕ ಸಾರ್ವಜನಿಕರು ಬ್ರೈನ್ ಎಬೋವ್ ಆ್ಯಪ್ ಮೂಲಕ ತಮ್ಮ ಪ್ರದೇಶಕ್ಕೆ ನಿಯೋಜಿಸಿರುವ ಕಸ ಸಂಗ್ರಹಣಾ ಆಟೋಗಳ ಚಲನವಲನ ಹಾಗೂ ಇತರ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ,ಕಿರಿದಾದ ರಸ್ತೆಗಳಲ್ಲಿ ಆಟೋ ಸಂಚಾರ ಸಾಧ್ಯವಾಗದಿದ್ದರೆ, ಸಮೀಪದ ಸ್ಥಳದಲ್ಲಿ ಸುಮಾರು 10 ನಿಮಿಷ ವಾಹನ ನಿಲ್ಲಿಸಿ ವಿಷಲ್ ಮೂಲಕ ನಿವಾಸಿಗಳಿಗೆ ಮಾಹಿತಿ ನೀಡಿ ಕಸ ಸಂಗ್ರಹಿಸುವ ವ್ಯವಸ್ಥೆಯನ್ನೂ ರೂಪಿಸಲಾಗುತ್ತಿದೆ.
ಬ್ಲಾಕ್‌ಸ್ಪಾಟ್‌ಗಳಲ್ಲಿ ರಾತ್ರಿ ಪಾಳಿಗೆ ಆಟೋ:
ಹೆಚ್ಚಾಗಿ ಕಸದ ರಾಶಿ ಕಾಣಿಸಿಕೊಳ್ಳುವ ಪ್ರದೇಶಗಳು ಹಾಗೂ ಸುತ್ತಮುತ್ತಲಿನ ವ್ಯಾಪಾರ ವಲಯಗಳಲ್ಲಿ ರಾತ್ರಿ ವೇಳೆಯೂ ಕಸ ಸಂಗ್ರಹಣಾ ಆಟೋಗಳನ್ನು ನಿಯೋಜಿಸಲಾಗುತ್ತದೆ. ಮೀನಾಕ್ಷಿ ಮಾಲ್ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ಪ್ರಮುಖ ವ್ಯಾಪಾರ ಪ್ರದೇಶಗಳಲ್ಲಿ ಬೀದಿಬದಿ ವ್ಯಾಪಾರಿಗಳು ರಸ್ತೆ ಬದಿಯಲ್ಲಿ ಕಸ ಸುರಿಯುವುದನ್ನು ತಡೆಯಲು ಮಾರ್ಷಲ್‌ಗಳ ಮೂಲಕ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ವ್ಯಾಪಾರಸ್ಥರಿಗೆ ಮೊದಲ ಹಂತದಲ್ಲಿ ಎರಡು-ಮೂರು ದಿನ ಜಾಗೃತಿ ಮೂಡಿಸಿ, ರಾತ್ರಿ ಪಾಳಿಯ ಕಸ ಸಂಗ್ರಹಣಾ ಆಟೋಗಳಿಗೆ ಕಸ ಹಸ್ತಾಂತರಿಸುವಂತೆ ತಿಳಿಸಲಾಗುತ್ತದೆ. ಇದಕ್ಕೂ ಬಗ್ಗದಿದ್ದರೆ ದಂಡ ವಿಧಿಸಲಾಗುವುದು. ಪುನರಾವರ್ತಿತ ಉಲ್ಲಂಘನೆ ಕಂಡುಬಂದಲ್ಲಿ ಭಾರಿ ದಂಡದ ಜತೆಗೆ ವಾಹನ ಜಪ್ತಿ ಮಾಡುವ ಎಚ್ಚರಿಕೆಯನ್ನೂ ನೀಡಲಾಗಿದೆ. ಗ್ಯಾಂಗ್ ವರ್ಕ್ ಕಡ್ಡಾಯಮನೆ-ಮನೆ ಕಸ ಸಂಗ್ರಹಣೆ ಪೂರ್ಣಗೊಂಡ ಬಳಿಕ ವಾರದಲ್ಲಿ ಐದು ದಿನ ಪೌರಕಾರ್ಮಿಕರು ಹಾಗೂ ವಾಹನ ಚಾಲಕರು 10 ಜನರ ತಂಡವಾಗಿ ಕಾರ್ಯನಿರ್ವಹಿಸಿ ಮಧ್ಯಾಹ್ನ 2 ಗಂಟೆಯವರೆಗೆ ಬ್ಲಾಕ್‌ಸ್ಪಾಟ್ ತೆರವುಗೊಳಿಸುವ ಗ್ಯಾಂಗ್ ವರ್ಕ್ ಕೈಗೊಳ್ಳಬೇಕು ಎಂದು ಆಯುಕ್ತರು ಸೂಚಿಸಿದ್ದಾರೆ.
ಜಿಪಿಎಸ್ ಆಧಾರದಲ್ಲೇ ಗುತ್ತಿಗೆದಾರರ ಬಿಲ್:
ಪೌರಕಾರ್ಮಿಕರು, ಆಟೋ ಚಾಲಕರು ಹಾಗೂ ಗುತ್ತಿಗೆ ಸಿಬ್ಬಂದಿಗೆ ವೇತನವನ್ನು ಸಕಾಲದಲ್ಲಿ ಪಾವತಿಸುವಂತೆ ಅಧಿಕಾರಿಗಳಿಗೆ ಸೂಚಿಸಿರುವ ಆಯುಕ್ತರು, ಮುಂದೆ ಜಿಪಿಎಸ್ ಟ್ರ್ಯಾಕಿಂಗ್ ದತ್ತಾಂಶದ ಆಧಾರದ ಮೇಲೆಯೇ ಗುತ್ತಿಗೆದಾರರ ಬಿಲ್‌ಗಳನ್ನು ಅನುಮೋದಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
