ಬೆಂಗಳೂರು, ಸೆ.20- ರಾಜಕಾರಣಿಗಳು ತಮ ಸ್ವಾರ್ಥ ಸಾಧನೆಗಾಗಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡುವ ಮಾರಕ ನಿರ್ಣಯವೊಂದನ್ನು ಕೈಗೊಳ್ಳುತ್ತಿದ್ದಾರೆ ಎಂಬ ಆತಂಕ ಪೋಷಕರ ವಲಯದಲ್ಲಿ ದಟ್ಟವಾಗಿದೆ. ಭವಿಷ್ಯದ ನಾಯಕತ್ವ ಬೆಳೆ ಸುವ ಕಾರಣಕ್ಕಾಗಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ನಡೆಸುವ ನಿರ್ಣಯ ಮುಂದಿನ ಶೈಕ್ಷಣಿಕ ವರ್ಷ ದಿಂದ ಅನುಷ್ಠಾನಕ್ಕೆ ಬರಲಿದೆ. ಸಚಿವ ಸಂಪುಟಸಭೆ ಅನುಮೋದನೆಯನ್ನು ನೀಡಿದೆ.
ರಾಜಕೀಯ ಪಕ್ಷಗಳಿಲ್ಲದೇ, ಜಾತಿ ರಹಿತವಾಗಿ ಚುನಾವಣೆಗಳು ನಡೆಯಬೇಕು. ಮಹಿಳೆಯ ಪ್ರಾತಿನಿಧ್ಯಕ್ಕೆ ಅವಕಾಶವಿರಬೇಕು ಎಂಬುದು ಸಂಪುಟಸಭೆಯ ನಿರ್ಣಯದ ಪ್ರಮುಖ ಅಂಶ.
ದೆಹಲಿ ಹಾಗೂ ಕೇರಳದಲ್ಲಿ ಕಾಲೇಜು ಹಾಗೂ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿ ಸಂಸತ್‌ಗಳಿದ್ದು, ಅವುಗಳಿಗೆ ಚುನಾವಣೆ ನಡೆಯುತ್ತಿವೆ. ಉತ್ತರ ಪ್ರದೇಶದಲ್ಲೂ ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ಮರುಸ್ಥಾಪಿಸಬೇಕು ಎಂಬ ಬೇಡಿಕೆ ಇದೆ. ಪ್ರಸ್ತುತ ಎಬಿವಿಪಿ, ಎನ್‌ಎಸ್‌ಯುಐ, ಎಸ್‌ಎಫ್‌ಐ ವಿದ್ಯಾರ್ಥಿ ಸಂಘಗಳು ರಾಜಕೀಯ ಬೆಂಬಲಿತವಾಗಿ ಸಕ್ರಿಯವಾಗಿವೆ.
ದೆಹಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಗಳ ಮುಖಂಡರ ನಡುವೆ ಹೊಡೆದಾಟ, ಬಡಿದಾಟದಂತಹ ಸಂಘರ್ಷಗಳಾಗಿ, ದೇಶಾದ್ಯಂತ ಚರ್ಚೆಯಾಗಿತ್ತು. ಈ ಮೊದಲು ವಿದ್ಯಾರ್ಥಿ ಸಂಘಗಳ ಚುನಾವಣಾ ಹೆಸರಿನಲ್ಲಿ ಹಿಂಸಾ ಚಟುವಟಿಕೆಗಳು ನಡೆಯುತ್ತಿದ್ದವು. ವಿದ್ಯಾರ್ಥಿಗಳು ಓದಿಗಿಂತಲೂ ಬೇರೆ ಚಟುವಟಿಕೆಗಳಲ್ಲೇ ತೊಡಗಿಸಿಕೊಂಡು ಭವಿಷ್ಯ ಕಳೆದುಕೊಳ್ಳುತ್ತಿದ್ದಾರೆ ಎಂಬ ಆತಂಕದಿಂದ 37 ವರ್ಷಗಳ ಹಿಂದೆ ಚುನಾವಣೆಯನ್ನು ರದ್ದುಗೊಳಿಸಲಾಗಿತ್ತು. ಬಳಿಕ ರಾಜಕೀಯ ಪಕ್ಷಗಳಿಗೆ ತಮ ಕಾರ್ಯಕ್ರಮಗಳಿಗೆ ಜನರನ್ನು ಸೇರಿಸುವುದು, ಆರ್ಥಿಕವಾಗಿ ದುಬಾರಿಯಾಗಿದೆ.
ವಿದ್ಯಾರ್ಥಿ ಸಂಘಗಳಿದ್ದರೆ ಎಲ್ಲದಕ್ಕೂ ಸುಲಭ ಎಂಬ ಲೆಕ್ಕಾಚಾರದಿಂದಾಗಿ ಹಿರಿಯರು ತೆಗೆದುಕೊಂಡ ನಿರ್ಣಯವನ್ನು ಈಗಿನ ರಾಜಕಾರಣಿಗಳು ಬದಿಗಿರಿಸಿ, ಮತ್ತೆ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ನಡೆಸಲು ತಯಾರಿ ಆರಂಭಿಸಿದ್ದಾರೆ. ಇದು ಪೋಷಕರಲ್ಲಿ ಆತಂಕ ಮೂಡಿಸಿದೆ.
ಶೈಕ್ಷಣಿಕ ಸಂಸ್ಥೆಗಳಲ್ಲಿನ ಚುನಾವಣಾ ರಾಜಕೀಯದಿಂದ ತಮ ಮಕ್ಕಳು ಅನ್ಯ ಉದ್ದೇಶಗಳತ್ತ ಮುಖ ಮಾಡಬಹುದು. ಅವರ ಶೈಕ್ಷಣಿಕ ಚಟುವಟಿಕೆಗೆ ತೊಂದರೆಯಾಗಬಹುದು ಎಂಬ ದುಗುಡ ಪೋಷಕರನ್ನು ಕಾಡುತ್ತಿದೆ. ವಿದ್ಯಾರ್ಥಿ ಸಂಘಗಳಿಂದ ರಾಜಕೀಯ ಪಕ್ಷಗಳಿಗೆ ನಾಯಕರು ಸಿಗುತ್ತಾರೆ. ಆದರೆ ದೇಶದ ಅಭಿವೃದ್ಧಿಗೆ ಬೇಕಾದಂತಹ ಎಂಜಿನಿಯರ್‌ಗಳು, ವೈದ್ಯರು, ವಕೀಲರು, ಆಡಿಟರ್‌ಗಳು, ಸಾಹಿತಿಗಳು, ವಿಜ್ಞಾನಿಗಳು, ಪ್ರಜ್ಞಾವಂತರು ದಕ್ಕುತ್ತಾರೆಯೇ ಎಂಬ ಗೊಂದಲಗಳು ಆರಂಭವಾಗಿವೆ.
37 ವರ್ಷಗಳ ಹಿಂದೆ ಭಾರತ ಸಂಕುಚಿತವಾಗಿತ್ತು. ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣಕ್ಕೆ ಮುಕ್ತವಾಗಿರಲಿಲ್ಲ. ಆಗಿನ ಅವಕಾಶಗಳು ಸೀಮಿತವಾಗಿದ್ದವು. ಅನುಭವಗಳು ಹೆಚ್ಚಿನ ಪ್ರಬುದ್ಧತೆಯನ್ನು ತಂದು ಕೊಡುತ್ತಿದ್ದವು. ಆದರೆ ಈಗ ಜಗತ್ತೇ ಅಂಗೈನಲ್ಲಿದೆ. ಪ್ರತಿಭೆ ಮತ್ತು ಪ್ರಬುದ್ಧತೆ ಹೊರತಾಗಿ ಉಳಿದ್ಯಾವ ವಿಚಾರಗಳು ಬದುಕು ಕಟ್ಟಿಕೊಡುತ್ತಿಲ್ಲ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಚುನಾವಣೆಯ ಹೆಸರಿನಲ್ಲಿ ರಾಜಕೀಯ ಚಟುವಟಿಕೆಗಳಿಗೆ ತೊಡಗಿಸಿದರೆ ಭವಿಷ್ಯ ಏನಾಗಬಹುದೆಂಬ ಪ್ರಶ್ನೆಗಳು ಎದ್ದಿವೆ.
ಇಂಟರ್‌ನೆಟ್ ಹಾಗೂ ಸಾಮಾಜಿಕ ಜಾಲತಾಣದ ಹಾವಳಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ದೊಡ್ಡ ಪೆಟ್ಟುಕೊಟ್ಟಿದೆ. ಪ್ರೌಢಾವಸ್ಥೆಯ ವಿದ್ಯಾರ್ಥಿಗಳಿಗೆ ಭಿನ್ನವಾದ ವಾಂಛೆಗಳು, ಅಭಿಲಾಷೆಗಳಿರುತ್ತದೆ. ಹೀರೋಗಿರಿ ತೋರಿಸಬೇಕು. ಹೊಡೆದಾಟ-ಬಡಿದಾಟಗಳ ಮೂಲಕ ಡಾನ್ ಎನಿಸಿಕೊಳ್ಳಬೇಕು ಎಂಬ ಹುಚ್ಚು ಬಯಕೆಗಳು ಇತ್ತೀಚಿನ ಯುವ ಸಮುದಾಯದಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿವೆ.
ನವಯುಗದ ಕ್ರೇಜ್‌ನಲ್ಲಿ ತೇಲುತ್ತಿರುವವರಿಗೆ ರಾಜಕೀಯ ಎಂಬ ಸೋಂಕು ತಗುಲಿದರೆ ವ್ಯಾಸಂಗ ಮತ್ತಷ್ಟು ಅಧೋಗತಿಗಿಳಿಯಬಹುದು ಎಂಬುದು ತಜ್ಞರ ಆತಂಕವಾಗಿದೆ.
ದೇಶದ ಬಹತೇಕ ರಾಜ್ಯಗಳು ವಿದ್ಯಾರ್ಥಿ ಸಂಘಗಳ ಚುನಾವಣೆಯನ್ನು ನಿಷೇಧಿಸಿವೆ. ದೆಹಲಿ ಮತ್ತು ಕೇರಳದಂತಹ ರಾಜ್ಯಗಳಲ್ಲಿರುವ ಪ್ರಜ್ಞಾವಂತಿಕೆ ಬೇರೆಯ ಮಟ್ಟದಲ್ಲಿದೆ. ಆದರೆ ಉಳಿದ ರಾಜ್ಯಗಳಲ್ಲಿನ ವಾತಾವರಣ, ರಾಜಕೀಯ ಪರಿಸ್ಥಿತಿ ಅಷ್ಟೇನೂ ಆರೋಗ್ಯಕರವಾಗಿಲ್ಲ. ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ಅಗತ್ಯವೇ ಎಂಬ ಪ್ರಶ್ನೆ ಕಾಡುತ್ತಿದೆ.
ರಾಜಕೀಯ ನಾಯಕರು ತಮಿಂದಲೇ ದೇಶ, ತಮಿಂದಲೇ ಜಗತ್ತು ಎಂಬ ಭ್ರಮೆಯಲ್ಲಿದ್ದಾರೆ. ಪ್ರಜಾಪ್ರಭುತ್ವ ಎಂಬ ವ್ಯವಸ್ಥೆಯ ಅವಕಾಶಗಳನ್ನು ದುರುಪಯೋಗಪಡಿಸಿಕೊಂಡು ತಮ ಮನಸ್ಸಿಗೆ ಬಂದಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಇದರಿಂದ ಜನರಿಗೆ ಒಳ್ಳೆಯದಾಗುತ್ತದೆ ಎಂಬ ಭ್ರಮಾಧೀನ ವಾತಾವರಣ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪಗಳಿವೆ.
ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ಬೇಕು ಎಂದು 2005ರಲ್ಲೇ ಮಾಜಿ ಮುಖ್ಯ ಚುನಾವಣಾ ಆಯುಕ್ತ ಜೇಮ್ಸೌ ಮೈಕಲ್ ಲಿಂಗ್ಡೋ ಸಮಿತಿ ಕೆಲ ಶಿಫಾರಸುಗಳನ್ನು ಮಾಡಿದೆ. ಜೊತೆಗೆ ಚುನಾವಣಾ ಪರಿಣಾಮಗಳ ಬಗ್ಗೆಯೂ ಆತಂಕಗಳನ್ನು ವ್ಯಕ್ತಪಡಿಸಿದೆ. ಅದನ್ನು ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಶಿಫಾರಸು ಮಾಡಿದೆ. ರಾಜ್ಯ ಸರ್ಕಾರದ ವಿದ್ಯಾರ್ಥಿ ಸಂಘದ ಚುನಾವಣಾ ಪ್ರಸ್ತಾವದಲ್ಲಿ ಲಿಂಗ್ಡೋ ಸಮಿತಿಯ ಶೀಫಾರಸುಗಳಿಗಿಂತಲೂ ಭಿನ್ನವಾದ ಹಾದಿಯತ್ತ ಹೆಜ್ಜೆ ಹಾಕುತ್ತಿರುವುದು ಮತ್ತಷ್ಟು ಆತಂಕ ಮೂಡಿಸಿದೆ.
