Homeರಾಜ್ಯಕಳೆದ 9 ತಿಂಗಳಲ್ಲಿ ರಾಜ್ಯದ ಕಾರಾಗೃಹಗಳಲ್ಲಿ 410 ಮೊಬೈಲ್‌ಗಳು ಪತ್ತೆ

ಕಳೆದ 9 ತಿಂಗಳಲ್ಲಿ ರಾಜ್ಯದ ಕಾರಾಗೃಹಗಳಲ್ಲಿ 410 ಮೊಬೈಲ್‌ಗಳು ಪತ್ತೆ

ಬೆಂಗಳೂರು, ಸೆ.20: ಕಳೆದ ಒಂಬತ್ತು ತಿಂಗಳ ಅವಧಿಯಲ್ಲಿ ರಾಜ್ಯದ ವಿವಿಧ ಕಾರಾಗೃಹಗಳಲ್ಲಿ 410 ಮೊಬೈಲ್‌ಗಳು ಪತ್ತೆಯಾಗಿವೆ. ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವೊಂದರಲ್ಲೇ 334 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. 2025ರಲ್ಲಿ 148 ಮೊಬೈಲ್‌ಗಳು ಹಾಗೂ 68 ಸಿಮ್‌ಕಾರ್ಡ್‌ಗಳು, 2024ರಲ್ಲಿ 104 ಮೊಬೈಲ್‌ಗಳು ಹಾಗೂ 10 ಸಿಮ್‌ಕಾರ್ಡ್‌ಗಳು ಪತ್ತೆಯಾಗಿದ್ದವು.

ಕಾರಾಗೃಹಗಳ ಪೊಲೀಸ್‌ ಮಹಾನಿರ್ದೇಶಕರಾಗಿ ಅಲೋಕ್‌ಕುಮಾರ್‌ ಅವರು ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದ ಎಲ್ಲ ಕಾರಾಗೃಹಗಳಿಗೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಜೈಲಿನೊಳಗೆ ಮೊಬೈಲ್‌ ಬಳಕೆ, ಮಾದಕ ವಸ್ತುಗಳ ಸೇವನೆ ಸೇರಿದಂತೆ ಅಕ್ರಮ ಚಟುವಟಿಕೆಗಳು ನಡೆಯಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸ್ಥಳೀಯ ಪೊಲೀಸರು ಕಾರಾಗೃಹಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಮೊಬೈಲ್‌ಗಳು ಪತ್ತೆಯಾಗಿವೆ. ಇತ್ತೀಚೆಗೆ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ. ಮಂಗಳೂರು ಕಾರಾಗೃಹದಲ್ಲಿ 10 ಹಾಗೂ ಕಲಬುರಗಿ ಕಾರಾಗೃಹದಲ್ಲಿ ಒಂದು ಮೊಬೈಲ್‌ನ್ನು ಪೊಲೀಸರು ಜಪ್ತಿ ಮಾಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿ ಮೊಬೈಲ್‌ಗಳು ಪತ್ತೆಯಾದ ಹಿನ್ನೆಲೆಯಲ್ಲಿ ಅಧಿಕಾರಿ ಹಾಗೂ ವಾರ್ಡನ್‌ಗಳನ್ನು ಅಲೋಕ್‌ಕುಮಾರ್‌ ಅವರು ಅಮಾನತುಗೊಳಿಸಿದ್ದಾರೆ.

ಅಲೋಕ್‌ಕುಮಾರ್‌ ಅವರು ಕಠಿಣ ಕ್ರಮ ಕೈಗೊಂಡಿದ್ದರೂ ಕಾರಾಗೃಹಗಳೊಳಗೆ ಮೊಬೈಲ್‌ಗಳ ಪ್ರವೇಶ ಮುಂದುವರಿದಿದೆ. ಮೊಬೈಲ್‌ ಬಳಕೆಯನ್ನು ತಡೆಯಲು ಕಾರಾಗೃಹಗಳಲ್ಲಿ ಜಾಮರ್‌ಗಳನ್ನು ಅಳವಡಿಸಲಾಗಿದ್ದರೂ ಅವುಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಆರೋಪಗಳಿವೆ. ಹೀಗಾಗಿ ಕಾರಾಗೃಹಗಳೊಳಗೆ ಮೊಬೈಲ್‌ ಬಳಕೆ ನಿರಂತರವಾಗಿ ನಡೆಯುತ್ತಿದೆ.

RELATED ARTICLES
spot_img

Latest News