Homeರಾಜ್ಯಬರ, ಕಸ್ತೂರಿ ರಂಗನ್‌ ವರದಿ ಚರ್ಚೆ : ವಿಶೇಷ ಅಧಿವೇಶನದತ್ತ ಚಿತ್ತ

ಬರ, ಕಸ್ತೂರಿ ರಂಗನ್‌ ವರದಿ ಚರ್ಚೆ : ವಿಶೇಷ ಅಧಿವೇಶನದತ್ತ ಚಿತ್ತ

ಬೆಂಗಳೂರು,ಸೆ.20- ರಾಜ್ಯದಲ್ಲಿ ತಲೆದೋರಿ ರುವ ತೀವ್ರ ಬರ ಪರಿಸ್ಥಿತಿ, ರೈತರ ಜ್ವಲಂತ ಸಮಸ್ಯೆಗಳು ಹಾಗೂ ಪಶ್ಚಿಮಘಟ್ಟ ರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಕಸ್ತೂರಿರಂಗನ್‌ ವರದಿ ಕರಡು ಅಧಿಸೂಚನೆ ಕುರಿತು ಚರ್ಚೆ ನಡೆಸಲು ರಾಜ್ಯ ವಿಧಾನಮಂಡಲದ ಉಭಯ ಸದನಗಳ ಮೂರು ದಿನಗಳ ವಿಶೇಷ ಅಧಿವೇಶನ ನಾಳೆಯಿಂದ ಪ್ರಾರಂಭವಾಗಲಿದೆ.

ಈ ಹಿಂದೆ ನಡೆದ ಅಧಿವೇಶನದ ರಾಜಕೀಯ ಗದ್ದಲ ಹಾಗೂ ರಾಜ್ಯದ ಪ್ರಸ್ತುತ ವಾಸ್ತವಿಕ ಸ್ಥಿತಿಗತಿಗಳ ಹಿನ್ನೆಲೆಯಲ್ಲಿ ಈ ವಿಶೇಷ ಅಧಿವೇಶನ ಅತ್ಯಂತ ಮಹತ್ವ ಪಡೆದುಕೊಂಡಿದೆ.
ಸಾಮಾನ್ಯ ಅಧಿವೇಶನಕ್ಕಿಂತ ವಿಭಿನ್ನವಾಗಿ ಈ ವಿಶೇಷ ಅಧಿವೇಶನದಲ್ಲಿ ರಾಜ್ಯದ ಎರಡು ಪ್ರಮುಖ ಸವಾಲುಗಳಾದ ಬರ ಪರಿಸ್ಥಿತಿ ಮತ್ತು ಕಸ್ತೂರಿರಂಗನ್‌ ವರದಿ ಕೇಂದ್ರಬಿಂದುವಾಗುವ ನಿರೀಕ್ಷೆಯಿದೆ.

ಡಾ.ಕೆ.ಕಸ್ತೂರಿ ರಂಗನ್‌ ನೇತೃತ್ವದ ಉನ್ನತ ಮಟ್ಟದ ತಂಡ ನೀಡಿದ ವರದಿಯನ್ನಾಧರಿಸಿ ಕೇಂದ್ರ ಸರ್ಕಾರ ಹೊರಡಿಸಿರುವ ಕರಡು ಅಧಿಸೂಚನೆಯಿಂದ ಮಲೆನಾಡು ಹಾಗೂ ಕರಾವಳಿ ಭಾಗದ ಜನರಲ್ಲಿ ಆತಂಕ ವ್ಯಕ್ತವಾಗಿದೆ. ವರದಿಯ ಸಾಧಕ-ಬಾಧಕಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ, ರಾಜ್ಯದ ಸ್ಪಷ್ಟ ನಿಲುವನ್ನು ನಿರ್ಣಯದ ಮೂಲಕ ಕೇಂದ್ರಕ್ಕೆ ತಲುಪಿಸುವುದು ಈ ಅಧಿವೇಶನದ ಮುಖ್ಯ ಉದ್ದೇಶವಾಗಿದೆ.

ಮುಂಗಾರು ಅಭಾವದಿಂದಾಗಿ ರಾಜ್ಯದ ವಿವಿಧೆಡೆ ಬೆಳೆಗಳು ಒಣಗುತ್ತಿದ್ದು, ಕುಡಿಯುವ ನೀರು, ಜಾನುವಾರುಗಳ ಮೇವು ಹಾಗೂ ವಿದ್ಯುತ್‌ ಅಭಾವ ಗಂಭೀರ ಸ್ವರೂಪ ಪಡೆದುಕೊಂಡಿದೆ. ಕೃಷಿ ವಲಯ ಎದುರಿಸುತ್ತಿರುವ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳುವ ಕುರಿತು ಸದನದಲ್ಲಿ ಚರ್ಚೆ ನಡೆಯಲಿದೆ.

ವಿಶೇಷ ಅಧಿವೇಶನದಲ್ಲಿ ಬೆಳೆ ನಷ್ಟಕ್ಕೆ ಪರಿಹಾರ, ಸಾಲದ ಒತ್ತಡ, ಜಾನುವಾರುಗಳಿಗೆ ಮೇವು, ಕುಡಿಯುವ ನೀರು, ವಿದ್ಯುತ್‌ ಪೂರೈಕೆ, ಕೇಂದ್ರದಿಂದ ಬರಬೇಕಿರುವ ಬರ ಪರಿಹಾರ ಸೇರಿದಂತೆ ರೈತರ ಬದುಕಿಗೆ ನೇರವಾಗಿ ಸಂಬಂಧಿಸಿದ ಹಲವು ವಿಚಾರಗಳು ಪ್ರಸ್ತಾಪವಾಗುವ ಸಾಧ್ಯತೆಯಿದೆ.

ನಾಳೆಯಿಂದ ಸೆ.23ರವರೆಗೆ ನಡೆಯಲಿರುವ ವಿಶೇಷ ಅಧಿವೇಶನವನ್ನು ರೈತರ ಸಮಸ್ಯೆ ಮತ್ತು ಬರ ಪರಿಸ್ಥಿತಿಯ ಚರ್ಚೆಗೆ ಬಳಸಲಾಗುತ್ತದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ಕೂಡ ಹೇಳಿದ್ದಾರೆ. ಕೇಂದ್ರ ಸರ್ಕಾರ ರೈತರ ಸಾಲಮನ್ನಾ ವಿಚಾರದಲ್ಲೂ ಕ್ರಮ ಕೈಗೊಳ್ಳಬೇಕು ಎಂಬ ಬೇಡಿಕೆಯನ್ನೂ ಅವರು ಮುಂದಿಟ್ಟಿದ್ದಾರೆ.

ವಿಶೇಷ ಅಧಿವೇಶನದ ಮತ್ತೊಂದು ಪ್ರಮುಖ ವಿಚಾರ ಕಸ್ತೂರಿರಂಗನ್‌ ವರದಿ. ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಜುಲೈ 27ರಂದು ಪಶ್ಚಿಮಘಟ್ಟ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸುವ ಸಂಬಂಧ ಏಳನೇ ಕರಡು ಅಧಿಸೂಚನೆ ಹೊರಡಿಸಿದೆ. ಕರಡು ಪ್ರಸ್ತಾವನೆಯಡಿ ಕರ್ನಾಟಕದ 10 ಜಿಲ್ಲೆಗಳ ವ್ಯಾಪ್ತಿಯ 20,668 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶವಾಗಿ ಗುರುತಿಸುವ ಪ್ರಸ್ತಾವವಿದೆ.

ಈ ಪ್ರಸ್ತಾವನೆಯ ಪರಿಣಾಮವಾಗಿ ಮಲೆನಾಡು ಮತ್ತು ಪಶ್ಚಿಮಘಟ್ಟಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿನ ಕೃಷಿ, ವಸತಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಸ್ಥಳೀಯರ ಜೀವನೋಪಾಯದ ಮೇಲೆ ಏನು ಪರಿಣಾಮ ಬೀರುತ್ತದೆ ಎಂಬುದು ಪ್ರಮುಖ ಚರ್ಚೆಯ ವಿಷಯವಾಗಲಿದೆ. ರಾಜ್ಯ ಸರ್ಕಾರ ಈಗಾಗಲೇ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸುವ ನಿಲುವು ವ್ಯಕ್ತಪಡಿಸಿದೆ.

ಇತ್ತೀಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಲೆನಾಡು ಭಾಗದಲ್ಲಿ ಕಸ್ತೂರಿರಂಗನ್‌ ವರದಿಯಿಂದ ಪರಿಣಾಮ ಬೀರುವ ಪ್ರದೇಶಗಳ ಕುರಿತು ಸ್ಥಳೀಯ ವಾಸ್ತವಾಂಶ ಆಧಾರಿತ ಸಮೀಕ್ಷೆಯ ಅಗತ್ಯವನ್ನೂ ಪ್ರಸ್ತಾಪಿಸಿದ್ದಾರೆ.

ಅದೇ ರೀತಿ ಬೆಂಗಳೂರು-ಮೈಸೂರು ಇನ್ಫಾಸ್ಟ್ರಕ್ಚರ್‌ ಕಾರಿಡಾರ್‌ ಯೋಜನೆಗೆ ಸಂಬಂಧಿಸಿದ ಆರೋಪಗಳು, ಬಿಡದಿ ಉಪನಗರ ಯೋಜನೆ ಸೇರಿದಂತೆ ಈ ಹಿಂದೆ ಸಮರ್ಪಕವಾಗಿ ಚರ್ಚೆಯಾಗದ ವಿಷಯಗಳನ್ನು ಪ್ರತಿಪಕ್ಷಗಳು ಪ್ರಸ್ತಾಪಿಸುವ ಸಾಧ್ಯತೆಯೂ ಇದೆ. ಇದರಿಂದ ಮೂರು ದಿನಗಳ ವಿಶೇಷ ಅಧಿವೇಶನ ಕೇವಲ ನಿರ್ಣಯ ಕೈಗೊಳ್ಳುವ ವೇದಿಕೆಯಾಗದೆ, ಸರ್ಕಾರ-ಪ್ರತಿಪಕ್ಷಗಳ ನಡುವೆ ನೀತಿ ಮತ್ತು ಆಡಳಿತದ ಕುರಿತು ತೀವ್ರ ವಾಗ್ವಾದಕ್ಕೂ ಕಾರಣವಾಗುವ ಸಾಧ್ಯತೆಯಿದೆ.

ಒಟ್ಟಿನಲ್ಲಿ, ಒಂದೆಡೆ ರಾಜ್ಯವನ್ನು ಕಾಡುತ್ತಿರುವ ಬರ ಮತ್ತು ರೈತರ ಸಂಕಷ್ಟ, ಮತ್ತೊಂದೆಡೆ ಪಶ್ಚಿಮಘಟ್ಟಗಳ ಪರಿಸರ ಸಂರಕ್ಷಣೆ ಹಾಗೂ ಮಲೆನಾಡಿನ ಜನರ ಜೀವನೋಪಾಯದ ಪ್ರಶ್ನೆ ಈ ಎರಡನ್ನೂ ಸಮತೋಲನದಿಂದ ಚರ್ಚಿಸಿ ರಾಜ್ಯದ ನಿಲುವನ್ನು ಕೇಂದ್ರಕ್ಕೆ ತಲುಪಿಸುವ ಹೊಣೆಗಾರಿಕೆ ವಿಶೇಷ ಅಧಿವೇಶನದ ಮೇಲಿದೆ. ಕಸ್ತೂರಿರಂಗನ್‌ ಕರಡು ಅಧಿಸೂಚನೆ ಕುರಿತು ರಾಜ್ಯದ ನಿಲುವು ಮತ್ತು ಬರ ಪರಿಹಾರಕ್ಕಾಗಿ ಕೇಂದ್ರದ ನೆರವು ಪಡೆಯುವ ಕಾರ್ಯತಂತ್ರದ ಬಗ್ಗೆ ಅಧಿವೇಶನದಲ್ಲಿ ಮಹತ್ವದ ಚರ್ಚೆ ನಡೆಯುವ ನಿರೀಕ್ಷೆಯಿದೆ.

RELATED ARTICLES
spot_img

Latest News