ಬೆಂಗಳೂರು, ಸೆ.20- ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬೆಂಬಲಿಗರನ್ನು ಕೆರಳಿಸಿದ್ದು ಅಸಮಾಧಾನದ ಜ್ವಾಲಾಮುಖಿ ಒಳಗೊಳಗೆ ಕುದಿಯಲಾರಂಭಿಸಿದೆ.ರಾಜಣ್ಣ ಅವರ ಅನಪೇಕ್ಷಿತ ಹೇಳಿಕೆಗಳು ಅನಗತ್ಯವಾದ ವಿವಾದ ಹುಟ್ಟುಹಾಕುತ್ತಿದ್ದು, ಅದರಲ್ಲೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲದೇ ಇದ್ದರೆ ಕಾಂಗ್ರೆಸ್ ದುರ್ಬಲವಾಗುತ್ತದೆ ಎಂಬ ಹೇಳಿಕೆ ಕಿಚ್ಚು ಹಚ್ಚಿದೆ.
ಕಾಂಗ್ರೆಸ್ ಪಕ್ಷಕ್ಕೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಎರಡು ಕಣ್ಣುಗಳಿದ್ದಂತೆ. ಅವುಗಳಲ್ಲಿ ಯಾವುದಾದರೂ ಒಂದು ದುರ್ಬಲವಾದರೂ ಪಕ್ಷಕ್ಕೆ ಹಾನಿಯಾಗುತ್ತದೆ ಎಂಬುದು ಎಲ್ಲರ ಅಭಿಪ್ರಾಯ. ಆದರೆ ರಾಜಣ್ಣ ಉದ್ದೇಶ ಪೂರ್ವಕವಾಗಿ ಸಿದ್ದರಾಮಯ್ಯ ಅವರನ್ನು ಮುಂಚೂಣಿಗೆ ತಂದು, ಹೇಳಿಕೆ ನೀಡುವ ಮೂಲಕ ಗೊಂದಲ ಮೂಡಿಸುತ್ತಿದ್ದಾರೆ ಎಂಬ ಆರೋಪಗಳಿವೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿರುವ ಕುಣಿಗಲ್ ಕ್ಷೇತ್ರ ಶಾಸಕ ಎಚ್.ಡಿ.ರಂಗನಾಥ್ ಅವರು, ರಾಜಣ್ಣ ಯಾವತ್ತೂ ಗಂಭೀರ ಹೇಳಿಕೆ ನೀಡಿಲ್ಲ ಎಂದು ತಳ್ಳಿ ಹಾಕಿದ್ದಾರೆ. ರಾಜಣ್ಣ ಅವರ ಬಗ್ಗೆ ನನಗೆ ಗೌರವ ಇತ್ತು. ಕಾಂಗ್ರೆಸ್ನ ಶಾಸಕರಾಗಿ ಈ ರೀತಿ ಮಾತನಾಡುವುದು ಸರಿಯಲ್ಲ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿರುವುದು, ಒಕ್ಕಲಿಗ ಸಮುದಾಯಕ್ಕೆ ಹರ್ಷ ತಂದಿದೆ. ಆದರೆ ಡಿ.ಕೆ.ಶಿವಕುಮಾರ್ ಒಂದು ಸಮುದಾಯದ ಮುಖಂಡರಾಗಿಲ್ಲ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ಸಿದ್ಧಾಂತ ಹಾಗೂ ಸಮಾನತೆಯ ಆಶಯದೊಂದಿಗೆ ಕೆಲಸ ಮಾಡುತ್ತಿದ್ದಾರೆ. ರಾಜಣ್ಣ ಈ ರೀತಿ ಮಾತನಾಡುವುದು ಅನಗತ್ಯ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಜಂಟಿಯಾಗಿ ಕಾಂಗ್ರೆಸ್ ಸಂಘಟನೆಗೆ ಶ್ರಮಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಬ್ಬರನ್ನೂ ಬೇರ್ಪಡಿಸಿ ಮಾತನಾಡುತ್ತಿರುವುದು ಪಕ್ಷದ ಹಿತಕ್ಕೆ ಧಕ್ಕೆ ತರುತ್ತದೆ. ತಳ ಮಟ್ಟದಲ್ಲಿ ಜನ ಕಾಂಗ್ರೆಸ್ ಪರವಾದ ಒಲವು ಹೊಂದಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ನಾಯಕರೇ ಅಡ್ಡ ಮಾತನಾಡುತ್ತಿರುವುದು ಎಷ್ಟು ಸರಿ ಎಂದು? ಪ್ರಶ್ನಿಸಿದ್ದಾರೆ.
ಮೊನ್ನೆ ಪೌರಾಡಳಿತ ಸಚಿವ ಎಚ್.ಸಿ.ಬಾಲಕೃಷ್ಣ ರಾಜಣ್ಣ ಅವರ ಹೇಳಿಕೆಗೆ ಕಿಡಿಕಾರಿದರು. ಮುಖ್ಯಮಂತ್ರಿಯಾದ ಬಳಿಕ ಡಿ.ಕೆ.ಶಿವಕುಮಾರ್ ಸೌಹಾರ್ದಯುತ ವಾತಾವರಣ ಕಲ್ಪಿಸಲು ಪ್ರಯತ್ನಿಸುತ್ತಿದ್ದಾರೆ. ರಾಜಣ್ಣ ಸೇರಿದಂತೆ ಕೆಲವು ನಾಯಕರುಗಳ ಅನಪೇಕ್ಷಿತ ಹೇಳಿಕೆಗಳಿಗೆ ಪ್ರತಿಕ್ರಿಯಿಸುತ್ತಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಅವರ ಆಪ್ತರು ರಾಜಣ್ಣ ಅವರಂತಹ ನಾಯಕರ ಹೇಳಿಕೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ರೀತಿಯ ಗೊಂದಲಕಾರಿ ಹೇಳಿಕೆಗಳನ್ನು ನಿಯಂತ್ರಿಸಲು ಶಾಸಕಾಂಗ ಸಭೆ ಕರೆದು ಚರ್ಚೆ ನಡೆಸಬೇಕು ಎಂಬ ಒತ್ತಾಯಗಳು ಕೇಳಿ ಬಂದಿವೆ.
